ಚಿಕ್ಕಮಗಳೂರು: ಜಮೀನು ವಿಚಾರವಾಗಿ ಗಲಾಟೆ ಉಂಟಾಗಿ ಒಂದೇ ಕುಟುಂಬದ ನಾಲ್ಕೈದು ಮಂದಿ ಅರ್ಚಕ ಹಾಗೂ ಅಚರ್ಕನ ಪುತ್ರನಿಗೆ ಚಪ್ಪಲಿ ಏಟಿನಿಂದ ಥಳಿಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಗವಿರಂಗನಾಥಸ್ವಾಮಿ ಅರ್ಚಕರಾದ ಚನ್ನಕೇಶವಯ್ಯ, ಪುತ್ರ ರಂಗನಾಥ್ ಮೇಲೆ ಯದ್ವಾ ತದ್ವಾ ಹಲ್ಲೆ ನಡೆಸಲಾಗಿದೆ. ಗಿಜೆಕಟ್ಟೆ ಗ್ರಾಮದ ರಾಜಪ್ಪ, ಶೇಖರಪ್ಪ, ಬಸವರಾಜಪ್ಪ, ನವೀನ್, ಸಿದ್ದರಾಮೇಗೌಡ, ಕುಮಾರ್ ಎಂಬುವವರು ದೇವಸ್ಥಾನದ ಎದುರೇ ಅರ್ಚಕರನ್ನು ಥಳಿಸಿದ್ದಾರೆ.
ಅರ್ಚಕರ ಜಮೀನು ವಿಚಾರವನ್ನು ರಾಜಿ ಸಂಧಾನ ಮಾಡಿ ಬಗೆಹರಿಸುವುದಾಗಿ ಬಂದಿದ್ದ ಗ್ರಾಮ ಲೆಕ್ಕಾಧಿಕಾರಿ ಶಿವಶಂಕರ್ ಸಮ್ಮುಖದಲ್ಲೇ ಈ ಹಲ್ಲೆ ನಡೆದಿದೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಅರ್ಚಕ ಚನ್ನಕೇಶವಯ್ಯರವರ ತಂದೆ ಅನಂತಯ್ಯನವರು 2 ಸಾವಿರ ರೂಪಾಯಿ ಹಣವನ್ನ ನಮ್ಮಿಂದ ಪಡೆದುಕೊಂಡಿದ್ದಾರೆ ಎಂದು ಹೊಲವನ್ನ ರಾಜಪ್ಪ ಕುಟುಂಬ ಸುಪರ್ದಿಗೆ ತೆಗೆದುಕೊಂಡಿತು. ಅನಂತಯ್ಯ ಹೆಸರಲ್ಲಿದ್ದ 2 ಎಕರೆ ಹೊಲವನ್ನ ರಾಜಪ್ಪ, ಶೇಖರಪ್ಪ ಕುಟುಂಬ ತೀರಾ ಇತ್ತೀಚಿನವರೆಗೂ ಅರ್ಚಕರ ಕುಟುಂಬಕ್ಕೆ ಬಿಟ್ಟುಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ 2019ರಲ್ಲಿ ಅನಂತಯ್ಯನವರು ತನ್ನಿಬ್ಬರು ಮಕ್ಕಳಿಗೆ ಜಾಗವನ್ನ ಇಬ್ಬಾಗ ಮಾಡಲು ಮುಂದಾದರು. ಈ ವೇಳೆ ಹೊಲ ನಮಗೆ ಸೇರಿದ್ದು ಅಂತಾ ರಾಜಪ್ಪ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದಾರಂತೆ. ಆದರೆ ಕೊರ್ಟ್ನಲ್ಲಿ ನಮ್ಮಂತೆ ಆಯಿತು, ದಾಖಲೆಗಳು ನಮ್ಮ ತಂದೆ ಹೆಸರಿನಲ್ಲೇ ಇದೆ. ಹಾಗಾಗೀ ನಾವು ಹೊಲದಲ್ಲಿ ಕೃಷಿ ಕಾರ್ಯ ಮಾಡಬೇಡಿ ಅಂತಾ ಆ ಕುಟುಂಬಕ್ಕೆ ತಿಳಿಹೇಳಿದ್ದೆವು. ಆದರೆ ಉದ್ವೇಗದಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಅರ್ಚಕ ಚನ್ನಕೇಶವಯ್ಯ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಹಲ್ಲೆಗೊಳಗಾಗಿರುವ ಅರ್ಚಕ ಚನ್ನಕೇಶವಯ್ಯ ಹಾಗೂ ಪುತ್ರ ರಂಗನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹಿಂತಿರುಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗುತ್ತಿದ್ದಂತೆ ಆರೋಪಿಗಳು ಊರು ಬಿಟ್ಟು ಪರಾರಿಯಾಗಿದ್ದಾರೆ. ಇನ್ನೂ ಅರ್ಚಕರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಅರ್ಚಕರ ಕುಟುಂಬಕ್ಕೆ ನ್ಯಾಯ ಕೊಡಿಸಿ ಅಂತಾ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಪ್ರಧಾನಿ ಮೋದಿಯವರಿಂದ ಅಯೋಧ್ಯೆ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆ; ರೂಪುರೇಷೆ, ಕಾರ್ಯಪ್ರಗತಿ ವಿವರಿಸಿದ ಸಿಎಂ ಯೋಗಿ
ಕಾಂಗ್ರೆಸ್ ಪಾಳಯದಲ್ಲಿ ಇಂದು ಮತ್ತೆ ಸಿಡಿಯಲಿದೆಯಾ ಅಸಮಾಧಾನ?
(members of One family beaten to priest for land issue in Chikkamagalur)
Published On - 2:42 pm, Sat, 26 June 21