ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನ ರಕ್ಷಿಸಲು ಪಣ ತೊಟ್ಟಿ ನಿಂತ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ
Basavaraj Bommai: ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು ಇನ್ನೂ ನಿರ್ಧಾರವಾಗಿಲ್ಲ. ಮಕ್ಕಳಿಗೆ ಲಸಿಕೆ ಬರುವವರೆಗೂ ಅವರ ಆರೋಗ್ಯದ ಕಾಳಜಿ ಪ್ರಮುಖವಾಗಿದೆ. ಪ್ರತಿಯೊಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ದಾಖಲೆಗಳನ್ನು ನಿರ್ವಹಿಸಲಾಗುವುದು. ಮುಂದಿನ ಮೂರು ತಿಂಗಳವರೆಗೆ ಅವರಿಗೆ ಬೇಕಾದ ಪೌಷ್ಠಿಕ ಆಹಾರ, ಔಷಧಗಳನ್ನು ಒದಗಿಸುವುದರ ಮೂಲಕ ಅವರನ್ನು ಆರೋಗ್ಯ ಸದೃಢರನ್ನಾಗಿಸಿ ಕೋವಿಡ್‍ನಿಂದ ರಕ್ಷಿಸುವ ಕೆಲಸ ಮಾಡಲಾಗುವುದು - ಹಾವೇರಿ ಉಸ್ತುವಾರಿ ಸಚಿವ ಬೊಮ್ಮಾಯಿ
ಹಾವೇರಿ: ಕೋವಿಡ್ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಬಗ್ಗೆ ಮಾತನಾಡಲಾಗುತ್ತಿದೆ. ಈ ಸಂಬಂಧ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಕೋವಿಡ್ 3ನೇ ಅಲೆ ವಿಶೇಷವಾಗಿ ಮಕ್ಕಳ ಮೇಲೆ ದೊಡ್ಡ ಹಾಗೂ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಹಾವೇರಿ ಜಿಲ್ಲೆಯಲ್ಲಿ ಮಕ್ಕಳ ಮೇಲೆ ಆಗಬಹುದಾದ ಅತಿ ದೊಡ್ಡ ಕೋವಿಡ್ ಅಪಾಯ ತಪ್ಪಿಸಲು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಪಣತೊಟ್ಟಿದ್ದಾರೆ.
ಮಕ್ಕಳನ್ನು ಕೋವಿಡ್ 3 ನೇ ಅಲೆಯಿಂದ ರಕ್ಷಣೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿ ಹಾವೇರಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ಎಲ್ಲಾ ಮಕ್ಕಳ ಬೃಹತ್ ಆರೋಗ್ಯ ತಪಾಸಣೆ ಕಾರ್ಯಕ್ರಮ ರೂಪಿಸಿದ್ದಾರೆ. ರಾಜ್ಯದಲ್ಲಿ ವಿನೂತನವಾಗಿರುವ ಈ ಕಾರ್ಯಕ್ರಮ ಇತರೆ ಜಿಲ್ಲೆಗಳಿಗೆ ಹಾವೇರಿ ಮಾದರಿ ಆಗಿದೆ.
ಗುರುವಾರದಿಂದ ಮಕ್ಕಳ ತಪಾಸಣೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರಂಭವಾಗಿದೆ. ಮೂರನೇ ಅಲೆಯ ಪರಿಣಾಮ ಕ್ಷೀಣಿಸುವವರೆಗೂ ಮಕ್ಕಳಿಗೆ ಎಲ್ಲ ರೀತಿಯ ಅಗತ್ಯ ವೈದ್ಯಕೀಯ ಉಪಚಾರ ಹಾಗೂ ಪೌಷ್ಠಿಕಾಂಶದ ಆಹಾರ ಒದಗಿಸಲಾಗುವುದು. ಒಟ್ಟಾರೆ ಮಕ್ಕಳ ಆರೋಗ್ಯವನ್ನು ಸದೃಢ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂಬುದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಅವರ ಸದುದ್ದೇಶ.
ರಾಜ್ಯದಲ್ಲಿಯೇ ಮೊಟ್ಟ ಮೊದಲ, ವಿನೂತನ ಕಾರ್ಯಕ್ರಮ: ಹಾವೇರಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರಗಳಲ್ಲಿ ಮಕ್ಕಳ ತಜ್ಞರಿಂದ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧೋಪಚಾರ ಹಾಗೂ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್ ವಿತರಿಸಲಾಗುತ್ತದೆ.
ಆರೋಗ್ಯ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೊಂದು ದೂರದೃಷ್ಟಿಯ ಹಾಗೂ ಮಕ್ಕಳ ಸಂರಕ್ಷಣೆ ಕಾರ್ಯಕ್ರಮವಾಗಿದೆ.
ಹಾವೇರಿ ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಲಿದ್ದಾರೆ ಎಂದು ಹೇಳಿದರು.
ಜೂನ್ 25 ರಿಂದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಆರಂಭ. ಜುಲೈ 30ರೊಳಗಾಗಿ ಜಿಲ್ಲೆಯ 16 ವರ್ಷದೊಳಗಿನ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗುವುದು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳ ಪಾಲಕರಿಗೂ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ವ್ಯಾಕ್ಸಿನ್ ಹಾಕಲು ಕ್ರಮವಹಿಸಲಾಗಿದೆ. ಮಕ್ಕಳಿಗೆ ಆರೋಗ್ಯದ ರಕ್ಷಣೆ ಮಾಡಲು ಈ ಯೋಜನೆಯಿಂದ ಆರೋಗ್ಯದ ರಕ್ಷಾ ಕವಚದಂತೆ ಈ ಶಿಬಿರವನ್ನು ಆರಂಭಿಸಲಾಗಿದೆ.
ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು ಇನ್ನೂ ನಿರ್ಧಾರವಾಗಿಲ್ಲ. ಮಕ್ಕಳಿಗೆ ಲಸಿಕೆ ಬರುವವರೆಗೂ ಅವರ ಆರೋಗ್ಯದ ಕಾಳಜಿ ಪ್ರಮುಖವಾಗಿದೆ. ಪ್ರತಿಯೊಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ದಾಖಲೆಗಳನ್ನು ನಿರ್ವಹಿಸಲಾಗುವುದು. ಮುಂದಿನ ಮೂರು ತಿಂಗಳವರೆಗೆ ಅವರಿಗೆ ಬೇಕಾದ ಪೌಷ್ಠಿಕ ಆಹಾರ, ಔಷಧಗಳನ್ನು ಒದಗಿಸುವುದರ ಮೂಲಕ ಅವರನ್ನು ಆರೋಗ್ಯ ಸದೃಢರನ್ನಾಗಿಸಿ ಕೋವಿಡ್‍ನಿಂದ ರಕ್ಷಿಸುವ ಕೆಲಸ ಮಾಡಲಾಗುವುದು. ತಪಾಸಣೆಯ ಸಂದರ್ಭದಲ್ಲಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್, ಪ್ರೋಟಿನ್ ಸೇರಿದಂತೆ ರೋಗನಿರೋಧ ಶಕ್ತಿ ಹೆಚ್ಚಿಸುವ ಪೂರಕ ಸಾಮಗ್ರಿಗಳನ್ನು ಹಾಗೂ ಔಷಧೋಪಚಾರ ನೀಡಲಾಗುವುದು. . ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಸರಾಸರಿ 30 ರಿಂದ 50 ಸಾವಿರ ಮಕ್ಕಳಿವೆ. ಅವರನ್ನು ತಪಾಸಣೆ ಮಾಡಿ, ಅವರ ಬಯೋಡಾಟಾ ಆರೋಗ್ಯ ಸಮಸ್ಯೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ ಮುಂದಿನ ನಾಲ್ಕೈದು ತಿಂಗಳು ಮಾನಿಟರ್ ನಡೆಸಲಾಗುವುದು. ಶಿಕ್ಷಕರು, ಪಾಲಕರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಧಣಿವರಿಯದೆ ಈ ಕೆಲಸ ಮಾಡಿ ಯಶಸ್ವಿ ಮಾಡಬೇಕು ಎಂದು ಅವರು ಕರೆ ನೀಡಿದರು.
ಶಿಗ್ಗಾವಿ ತಾಲೂಕಾದ್ಯಂತ 98 ಗ್ರಾಮಗಳಲ್ಲಿ 35,600 ಮಕ್ಕಳನ್ನು ತಪಾಸಣೆ ಮಾಡುವ ಗುರಿ ಇದೆ. ಜುಲೈ 31ರೊಳಗೆ ಈ ಗುರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಬಿಸಿಯೂಟದ ಬದಲಾಗಿ ಮಕ್ಕಳಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ. ತಾಲೂಕಿನ 204 ಶಾಲೆಗಳ 27,054 ಮಕ್ಕಳಿಗೆ ಆಹಾರ ಧಾನ್ಯ ಕಿಟ್ ಹಾಗೂ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಮಕ್ಕಳ ಸಾಮಾನ್ಯ ಆರೋಗ್ಯ ಚನ್ನಾಗಿರಬೇಕು ಹಾಗೂ ಸದೃಢವಾಗಿರಬೇಕು. ಮಕ್ಕಳು ಈ ನಾಡಿನ ಹಾಗೂ ದೇಶದ ಭವಿಷ್ಯವಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರು ಗಟ್ಟಿಯಾಗಿರಬೇಕು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪೌಷ್ಠಿಕ ಕಿಟ್ ವಿತರಣೆ: ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್, ಅಕ್ಷರದಾಸೋಹದಡಿ ಆಹಾರದ ಕಿಟ್, ಅಂಗವಾಡಿ ಮಕ್ಕಳಿಗೆ ಔಷಧಿ ಕಿಟ್, ಕಡಿಮೆ ತೂಕದ ಮಕ್ಕಳಿಗೆ ಪೂರಕ ಪೌಷ್ಠಿಕ ಪ್ರೋಟಿನ್ ಕಿಟ್‍ಗಳನ್ನು ಗೃಹ ಸಚಿವರು ವಿತರಿಸಿದರು.
(Haveri district in charge minister basavaraj bommai vows to protect children during coronavirus third wave by special measures)