ಕರ್ನಾಟಕ ಸರಕಾರದಿಂದ ಚಿನ್ನದ ಮಳಿಗೆ ಆರಂಭಿಸಲು ನಿರ್ಧಾರ: ಮುರುಗೇಶ್ ನಿರಾಣಿ
ಖಾತೆಯನ್ನು ವಹಿಸಿಕೊಂಡಾಗಿನಿಂದ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಮುರುಗೇಶ್ ನಿರಾಣಿ ಈಗ ರಾಜ್ಯ ಸರಕಾರವೇ ಹೊಸದಾಗಿ ಬಂಗಾರದ ಅಂಗಡಿ (jewellery shop) ತೆರೆದು ಪಕ್ಕಾ ಬಂಗಾರ ಮಾರಾಟ ಮಾಡಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಇದೀಗ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಸರಕಾರಿ ಒಡೆತನದ ಆಭರಣಗಳ ಮಳಿಗೆ (ಜ್ಯುವೆಲ್ಲರಿ ಶಾಪ್) ರಾಜ್ಯದಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ. ಈ ಮಳಿಗೆಗಳನ್ನು ಸರಕಾರವೇ ನಿರ್ವಾಹಣೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಭರಣಗಳನ್ನು ತಯಾರಿಸಲಿದೆ. ದೇಶದಲ್ಲೇ ಮೊದಲ ಬಾರಿಗೆ ಸರಕಾರವೊಂದು ಇಂಥ ಪ್ರಯತ್ನ ಮಾಡುತ್ತಿದೆ. ಮೈಸೂರು ಸಿಲ್ಕ್ , ಮೈಸೂರು ಸ್ಯಾಂಡಲ್ ಸೋಪ್, ಕಾವೇರಿ ಕೈ ಮಗ್ಗ ( ಹ್ಯಾಂಡ್ ಲೂಮ್ಸ್ ) ಮಾದರಿಯಲ್ಲಿ ಸರ್ಕಾರಿ ಅಭರಣಗಳ ಮಳಿಗೆ ತೆರೆಯುವ ಮಹತ್ವದ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಇಂಥ ಮಳಿಗೆಗಳನ್ನು ತೆರೆಯಲಾಗುವುದು. ಪ್ರಾರಂಭಿಕವಾಗಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ( ಟಯರ್ 1 )ಈ ಮಳಿಗೆಗಳು ಕಾರ್ಯಾರಂಭ ಮಾಡಲಿದೆ. ರಾಜ್ಯದಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ಯವಾದರೆ, ಮುಂಬರುವ ದಿನಗಳಲ್ಲಿ ಹೊರರಾಜ್ಯಗಳಲ್ಲೂ ಈ ಆಭರಣ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ ಎಂದು ಹೇಳಿದರು.
ಹೆಸರು ಮರುನಾಮಕರಣ ಪ್ರಸ್ತುತ ಹಟ್ಟಿ ಮೈನ್ಸ್ ಗೋಲ್ಡ್ ಇನ್ನು ಮುಂದೆ ‘ಕರ್ನಾಟಕ ರಾಜ್ಯ (ಹಟ್ಟಿ) ಚಿನ್ನದ ಗಣಿ’ ( ಕರ್ನಾಟಕ ಸ್ಟೇಟ್ ಗೋಲ್ಡ್ ಮೈನ್ಸ್ ) ಮರುನಾಮಕರಣವಾಗಿ ಬದಲಾಗಲಿದೆ. ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಚಿನ್ನದ ನಾಣ್ಯ ಬಿಡುಗಡೆ ಮದುವೆ, ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಗ್ರಾಹಕರಿಗೆ ಉಡುಗೊರೆಯಾಗಿ ನೀಡಲು ಅನುಕೂಲವಾಗುವಂತೆ ಇನ್ನು ಮುಂದೆ ಕರ್ನಾಟಕದ ಹೆಮ್ಮೆಯ ಲಾಂಛನವಾದ ‘ಗಂಡುಬೇರುಂಡ’ ಗುರುತಿನ ಚಿನ್ನದ ನಾಣ್ಯಗಳನ್ನು ಹೊರತರಲು ಇಲಾಖೆ ತೀರ್ಮಾನಿಸಿದೆ. ಚಿನ್ನದ ನಾಣ್ಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಅಭರಣ ಮಾಲೀಕರ ಸಂಘ ಸಭೆಯಲ್ಲಿ ಮನವಿ ಮಾಡಿತು. ಇದಕ್ಕೂ ಅಸ್ತು ಎಂದ ಸಚಿವ ನಿರಾಣಿ ಅವರು, ಶೀಘ್ರದಲ್ಲೇ ಆಭರಣ ಮಳಿಗೆಗಳಲ್ಲಿ ಚಿನ್ನದ ನಾಣ್ಯಗಳನ್ನು ಹೊರತರುವುದಾಗಿ ಘೋಷಣೆ ಮಾಡಿದರು.
ಚಿನ್ನದ ವಿಶೇಷ ಆರ್ಥಿಕ ವಲಯ ಸ್ಥಾಪನೆ ಕಲ್ಯಾಣ ಕರ್ನಾಟಕವನ್ನು ಎಲ್ಲಾ ಕ್ಷೇತ್ರಗಳಲ್ಲಿ ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಚಿನ್ನದ ವಿಶೇಷ ಆರ್ಥಿಕ ವಲಯ (ಎಸ್ಇಜಡ್) ಸ್ಥಾಪನೆ ಮಾಡುವ ಮತ್ತೊಂದು ನಿರ್ಧಾರವನ್ನು ನಿರಾಣಿ ಪ್ರಕಟಿಸಿದರು. ವಿಶೇಷ ಆರ್ಥಿಕ ವಲಯ ಸ್ಥಾಪನೆಯಾದರೆ, ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಲಿದ್ದಾರೆ.ಇದರಿಂದ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಚಿನ್ನದ ಉತ್ಪಾದನೆ ದ್ವಿಗುಣ ಕರ್ನಾಟಕದಲ್ಲಿ ಈ ಬಾರಿ ಉತ್ಪಾದನಾ ಸಾಮಥ್ಯ ೯ ವನ್ನು ವರ್ಷದ ಅಂತ್ಯಕ್ಕೆ ದ್ವಿಗುಣಗೊಳಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ಪ್ರಸ್ತುತ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ 1500-1800 ಕೆಜಿ ಚಿನ್ನವನ್ನು ಉತ್ಪಾದನೆ ಮಾಡಲಾಗುತ್ತದೆ. 2022ರ ವೇಳೆಗೆ ಉತ್ಪಾದನೆಯನ್ನು 5000 ಕೆ.ಜಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಅತ್ಯಾಧುನಿಕ ಯಂತ್ರೋಪಕರಣಗಳಾದ ರಾಕ್ ಬ್ರೇಕರ್ಸ್, ಲೊಕೊ-ಲೋಡರ್ಸ್, ಜಂಬೊ ಡ್ರಿಲ್ಲಿಂಗ್, ಎಲ್‍ಎಚ್‍ಡಿಯ ಎಲ್‍ಪಿಡಿಟಿಗಳಂತಹ ಬಳಸಿಕೊಂಡು ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಹೆಚ್ಚು ಅಗತ್ಯವಿರುವ ತಾಂತ್ರಿಕ ಪರಿಣತಿಯನ್ನು ಆಳವಡಿಸಿಕೊಂಡು ಆಳವಾದ ಗಣಿಗಾರಿಕೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ದವಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಅದಿರು ಸಂಸ್ಕರಣೆಯ ಹೆಚ್ಚಳಕ್ಕೆ ಒತ್ತು ನೀಡಿ, ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಚ್‍ಜಿಎಂಎಲ್, ಅದಿರು ಸಂಸ್ಕರಣೆಯನ್ನು ಪ್ರಸ್ತುತ 2000 ಟನ್‍ಗಳಿಂದ ದಿನಕ್ಕೆ 3000 ಟನ್‍ಗಳಿಗೆ ಕೊಂಡೊಯ್ಯಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ನಿದೇರ್ಶನ ನೀಡಿದ್ದಾರೆ. ಈ ಗಣಿಗಳ ಅಕ್ಕಪಕ್ಕಗಳಲ್ಲಿ ಭಾರತೀಯ ಭೂವೈಜ್ಞಾನಿಕ ಸಂಸ್ಥೆ ಖನಿಜ ಅನ್ವೇಷಣ ನಿಗಮ, ಹಟ್ಟಿ ಗೋಲ್ಡ್ ಮೈನ್ ಮತ್ತು ಖಾಸಗಿ ಸಂಸ್ಥೆಗಳು ಹೊಸ ಹೊಸ ಚಿನ್ನದ ಗಣಿಗಳನ್ನು ಪತ್ತೆ ಮಾಡಿವೆ. ಭೂಮಿ ಆಳದಲ್ಲಿ ನಡೆಯುವ ಗಣಿಗಾರಿಕೆ ನಡೆಸಲು ಕಾರ್ಮಿಕರನ್ನು ಕರೆದೊಯ್ಯುವ ವಾಹನ ಸಾಮರ್ಥ್ಯವನ್ನು 90ರಿಂದ 100ಕ್ಕೆ ಹೆಚ್ಚಿಸಬೇಕು. ಪ್ರಸ್ತುತ 20 ಕಾರ್ಮಿಕರನ್ನು ಕರೆದೊಯ್ಯುವ ಸಾಮಥ್ಯ ೯ ವಿದೆ. ಇದನ್ನು ಹೆಚ್ಚಳ ಮಾಡಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಸಲಹೆ ಮಾಡಿದರು.
ನಮ್ಮಲ್ಲಿ 80 ಲಕ್ಷ ಟನ್ ಕಬ್ಬಿಣದ ಅದಿರು ದಾಸ್ತಾನು ಇದೆ. ಸುಮಾರು ₹ 800 ಕೋಟಿ ರೂ ಮೌಲ್ಯದ ಅದಿರು ಇದೆ. ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡುತ್ತೇವೆ. ಸಂಗ್ರಹವಿರುವ ಮಾರಾಟದಿಂದ ಸ್ಟೀಲ್ ಕಂಪನಿಗಳಿಗೆ ಕಚ್ಚಾ ವಸ್ತು ದೊರೆಯಲಿದೆ.ಸ್ಟೀಲ್ ಬೆಲೆ ಕೂಡ ಕಡಿಮೆಯಾಗಲಿದೆ ಎಂದು ತಿಳಿಸಿದರು. ಹಿರಾ-ಬುಡ್ಡಿನ್ನಿ ಗೋಲ್ಡ್ ಮೈನ್, ವೊಂಡಲ್ಲಿ ಗೋಲ್ಡ್ ಮೈನ್ – ಚಿನ್ನವನ್ನು ರಾಯಚೂರು ಜಿಲ್ಲೆಯ ಹಟ್ಟಿಚಿನ್ನದ ಗಣಿಗಳ ಪಕ್ಕದಲ್ಲಿರುವುದರಿಂದ ಚಿನ್ನವನ್ನು ಕರಗಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಕ್ವಾರಿ ನಡೆಸಲು ಅರ್ಜಿ ಸಲ್ಲಿಸಿದ 90 ದಿನದಲ್ಲಿ ಎನ್‍ಒಸಿ: ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಘೋಷಣೆ
Published On - 8:03 pm, Thu, 18 March 21