ಇತ್ತೀಚೆಗೆ ಸಂಪುಟ ಸೇರಿರುವ ಗಣಿ ಮತ್ತು ಭೂ ಭೂ ವಿಜ್ಞಾನ ಸಚಿವ, ಮುರುಗೇಶ್ ನಿರಾಣಿ ಅವರು ಭ್ರಷ್ಟರ ವಿರುದ್ಧ ಮತ್ತೆ ಚಾಟಿ ಬೀಸಿದ್ದಾರೆ. ಸಾರ್ವಜನಿಕರು ಮತ್ತು ಸ್ಟೋನ್ ಕ್ರಷರ್ ಮಾಲೀಕರಿಗೆ ಲಂಚದ ಬೇಡಿಕೆ ಇಟ್ಟು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಬಿ.ಎಂ.ಲಿಂಗರಾಜು ಅವರನ್ನು ಇಂದು ಸೇವೆಯಿಂದ ಅಮಾನತು ಪಡಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದೇ ಆರೋಪದ ಮೇಲೆ ಎರಡು ವಾರಗಳ ಹಿಂದೆಯಷ್ಟೇ ಫಯಾಜ್ ಅಹಮ್ಮದ್ ಖಾನ್ ಎಂಬ ಭೂ ವಿಜ್ಞಾನಿಯನ್ನು ಕೂಡ ಸೇವೆಯಿಂದ ಅಮಾನತುಪಡಿಸಲಾಗಿತ್ತು. ಲಿಂಗರಾಜು ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಮೇಲೆ ಕೂಡ ತೀವ್ರ ಸ್ವರೂಪದ ಆರೋಪ ಕೇಳಿಬಂದಿದ್ದರಿಂದ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.
ಕೇಸಿನ ವಿವರ
ಈ ಹಿಂದೆ ಬಾಗಲಕೋಟೆ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಸ್ಟೋನ್ ಕ್ರಷರ್ ಮಾಲೀಕರು ಮತ್ತು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಎದುರಿಸುತ್ತಿದ್ದರು. ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಲಿಂಗರಾಜು ಅವರ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಾರ್ವಜನಿಕರು ಮತ್ತು ಸ್ಟೋನ್ ಕ್ರಷರ್ ಮಾಲೀಕರು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವರು ಇಲಾಖಾ ತನಿಖೆಗೆ ಆದೇಶ ಮಾಡಿದ್ದರು. ಲಿಂಗರಾಜು ವಿರುದ್ಧ ತನಿಖೆ ನಡೆಸಿದ ವೇಳೆ ಗುಲ್ಬರ್ಗ ಜಿಲ್ಲೆ, ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್‍ನಿಂದ ಹೆಚ್ಚುವರಿ ರಾಜಧನ ಪಡೆದಿರುವುದು ಸಾಬೀತಾಗಿದೆ.
ಇದೇ ರೀತಿ ಸುರಕ್ಷಿತ ವಲಯದ ಅಂತರ ಕಡಿಮೆಯಿದೆ ಎಂದು ನವೀಕರಣ ಅರ್ಜಿಯನ್ನು ತಿರಸ್ಕರಿಸಿ ಕೆ.ಎಸ್.ಕಂಕಲೆ ಎಂಬುವರಿಂದ ರೂ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಜಯದೇವ ಸ್ಟೋನ್ ಕ್ರಷರ್ ಅವರಿಂದ ಕ್ರಷರ್ ಘಟಕದ ನವೀಕರಣವನ್ನು, ಸುರಕ್ಷಿತವಲ್ಲದ ಕಾರಣ ನವೀಕರಣಕ್ಕೆ ಸಾಕಷ್ಟು ಸತಾಯಿಸಿ ದೊಡ್ಡ ಮಟ್ಟದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಹ ತನಿಖೆಯಲ್ಲಿ ಗೊತ್ತಾಗಿದೆ. ಲಿಂಗರಾಜು ಅವರಿಗೆ ದೊಡ್ಡ ಮಟ್ಟದ ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬ್ಯಾಂಕ್‍ನಿಂದ ಸಾಲ ಪಡೆದು ಆಸ್ತಿಪಾಸ್ತಿ ಮಾರಾಟ ಮಾಡಿ ಗುತ್ತಿಗೆದಾರರು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ರುಜುವಾತಾಗಿದೆ.
ಒಂದಲ್ಲ ಎರಡಲ್ಲ ಆರೋಪ
ಅಧಿಕೃತ ಖನಿಜ ಪರವಾನಗಿ ಇಲ್ಲದೆ ಕಟ್ಟಡ ಕಲ್ಲು,ಕಲ್ಲಿನ ಸಾಗಾಣಿಕೆ, ದಾಸ್ತಾನು ಮಾಡಿರುವ ಜಯದೇವ ಸ್ಟೋನ್ ಕ್ರಷರ್ ಇವರಿಗೆ ನೋಟಿಸ್ ಜಾರಿ ಮಾಡಿ ಲಿಂಗರಾಜು ₹ 13.17 ಲಕ್ಷ ದಂಡ ಪಾವತಿಸಲು ನೋಟಿಸ್ ಜಾರಿ ಮಾಡಿದ್ದರು. ಜಯದೇವ ಸ್ಟೋನ್ ಕ್ರಷರ್ ರದ್ದು ಮಾಡಿ ದುಬಾರಿ ದಂಡ ವಿಸಿರುವ ಕ್ರಮವನ್ನು ಪ್ರಾದೇಶಿಕ ಆಯುಕ್ತರು ರದ್ದುಪಡಿಸಿರುವುದು ಲಿಂಗರಾಜು ಕರ್ತವ್ಯ ಲೋಪಕ್ಕೆ ಮತ್ತೊಂದು ಸಾಕ್ಷಿ ಆಗಿದೆ. ವೆಂಕಟೇಶ್ವರ ಸ್ಟೋನ್ ಕ್ರಷರ್ಸ್ ಅವರ ದೂರು ಅರ್ಜಿಯನ್ನು ಅವಲೋಕಿಸಿದಾಗ ಕ್ರಷರ್ ನವೀಕರಣ ಮಾಡುವಾಗ ಲಿಂಗರಾಜು ಸತಾಯಿಸಿರುವುದು, ಮುಂದಿನ ಪರವಾನಗಿಯನ್ನು ನ್ಯಾಯಾಲಯದಿಂದಲೇ ಪಡೆಯಿರಿ ಎಂದು ಸೂಚನೆ ಕೊಟ್ಟಿದ್ದರು ಎಂಬ ಅಂಶ ಕೂಡ ಹೊರಬಿದ್ದಿದೆ.
ಈ ಸಂಬಂಧ ಶ್ರದ್ದಾನಂದ ಸ್ಟೋನ್ ಕ್ರಷರ್ಸ್ ಅವರು ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಕ್ರಷರ್ ರದ್ದುಪಡಿಸಿದ ಆದೇಶವನ್ನು ಪ್ರಾದೇಶಿಕ ಆಯುಕ್ತರು ರದ್ದುಪಡಿಸಿ ಕಾನೂನುಬದ್ದವಾಗಿ ಕ್ರಮ ಜರುಗಿಸಲು ನಿರ್ದೇಶನ ನೀಡಿದ್ದರು. ಇದೇ ರೀತಿ ಹಲವಾರು ಸ್ಟೋನ್ ಕ್ರಷರ್ ಮಾಲೀಕರಿಂದ ಲಂಚ ಪಡೆಯಲು ಬೇಡಿಕೆ ಇಟ್ಟಿದ್ದು ಸಹ ತನಿಖೆಯಿಂದ ಗೊತ್ತಾಗಿದೆ. ಇವೆಲ್ಲವನ್ನೂ ಪರಿಗಣಿಸಿ ಉಪನಿರ್ದೇಶಕ ಬಿ.ಎಂ.ಲಿಂಗರಾಜು ಅವರನ್ನು ಸೇವೆಯಿಂದ ಅಮಾನತು ಪಡಿಸಲಾಗಿದೆ. ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ:
ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಕ್ವಾರಿ ಮಾಲೀಕ, ಬಿಜೆಪಿ ಮುಖಂಡನಾಗಿರುವ ಪ್ರಮುಖ ಆರೋಪಿ G.S.ನಾಗರಾಜ್ ಬಂಧನ
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಕ್ರಷರ್ ಹಾವಳಿಗೆ ಮುಚ್ಚಿಹೋದ ಪುರಾತನ ಹನುಮ ದೇಗುಲ!