ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ಅರಣ್ಯ ಪ್ರದೇಶವು ಮಲೆನಾಡನ್ನೇ ನಾಚಿಸುವಂತಿರುವ ಸುಂದರ ಗಿರಿಧಾಮ ಎನಿಸಿಕೊಂಡಿದೆ. ನವಿಲು, ಕರಡಿ, ಚಿರತೆ, ಜಿಂಕೆ, ಸೇರಿದಂತೆ ಅನೇಕ ಪ್ರಾಣಿ-ಪಕ್ಷಿ ಸಂಕುಲಕ್ಕೆ ಈ ಪ್ರದೇಶ ಆಶ್ರಯ ನೀಡಿದೆ. ಆದರೆ ಸದ್ಯ ಬಯಲುಸೀಮೆಯ ಊಟಿ ಎಂದೇ ಖ್ಯಾತಿ ಪಡೆದಿರುವ ಈ ಪ್ರದೇಶ ಸುಮಾರು 10 ಸಾವಿರ ಹೆಕ್ಟೇರ್ನಷ್ಟು ವ್ಯಾಪಿಸಿದೆ.
ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದ ಜೋಗಿಮಟ್ಟಿ ಅರಣ್ಯವನ್ನು ಸರ್ಕಾರ ವನ್ಯಜೀವಿಧಾಮವನ್ನಾಗಿ ಘೋಷಿಸಿದೆ. ಆದರೆ ವನ್ಯಜೀವಿಧಾಮ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಮಾರಕ ಕ್ರಮಕ್ಕೆ ಮುಂದಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಿಯಮದ ಪ್ರಕಾರ ವನ್ಯಜೀವಿಧಾಮ ವ್ಯಾಪ್ತಿಯಿಂದ 10ಕಿ.ಮೀ ವರೆಗೆ ಪರಿಸರ ಸೂಕ್ಷ್ಮ ವಲಯವಾಗಿರುತ್ತದೆ.
ಜೋಗಿಮಟ್ಟಿ ಅರಣ್ಯ ಪ್ರದೇಶ
ಆದರೆ ಚಿತ್ರದುರ್ಗ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಅಂತರವನ್ನು 10 ಕಿ.ಮೀ ಬದಲು ಕೇವಲ 1 ಕಿ.ಮೀ ವ್ಯಾಪ್ತಿಗಿಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ವನ್ಯಜೀವಿಧಾಮ ಬಳಿಯ ಗಿರಿಧಾಮಗಳಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಇತರೆ ಪರಿಸರ ವಿರೋಧಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ದುರುದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಆರೋಪ ಸದ್ಯ ಕೇಳಿ ಬರುತ್ತಿದೆ.
ವನ್ಯಧಾಮದ ದೃಶ್ಯ
ಈಗಾಗಲೇ ಅನೇಕ ಸಲ ಚಿರತೆ, ಕರಡಿಯಂತಹ ಪ್ರಾಣಿಗಳು ಗಿರಿಧಾಮಗಳಿಂದ ಹತ್ತಾರು ಕಿ.ಮೀ ದೂರದ ಹಳ್ಳಿಗಳಿಗೆ ಬಂದಿವೆ. ಹೆದ್ದಾರಿಗಳಲ್ಲಿ ವಾಹನಗಳಿಗೆ ಡಿಕ್ಕಿಯಾಗಿ ಬಲಿಯಾದ ಸಾಕಷ್ಟು ಉದಾಹರಣೆಗಳಿವೆ. ಮತ್ತೊಂದು ಕಡೆ ಜೋಗಿಮಟ್ಟಿ ವನ್ಯಧಾಮ ಆಸುಪಾಸಿನಲ್ಲೇ ಕೆಲ ಕಲ್ಲುಗಣಿಗಾರಿಕೆ ಪ್ರದೇಶ ಹಾಗೂ ಕ್ರಷರ್ಗಳಿವೆ. ಅವುಗಳಿಗೆ ಬೀಗ ಹಾಕುವ ಬದಲು ಅರಣ್ಯಾಧಿಕಾರಿಗಳು ಪರಿಸರ ಸೂಕ್ಷ್ಮ ವಲಯದ ವಿಸ್ತೀರ್ಣವನ್ನೇ ಕಡಿತಗೊಳಿಸಲು ಮುಂದಾಗಿದ್ದಾರೆ.
ಜೋಗಿಮಟ್ಟಿ ವನ್ಯಧಾಮದಲ್ಲಿ ಕಂಡುಬಂದ ಚಿರತೆ
ಇನ್ನು ಕೆಲವೆಡೆ ನಿಯಮ ಮೀರಿ ಗಿರಿಧಾಮಗಳನ್ನು ನೆಲಸಮಗೊಳಿಸಿ ಹೊಸ ಹೊಸ ಲೇಔಟ್ಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಈ ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕುವ ಬದಲು ಅವಕಾಶ ನೀಡುವ ಹುನ್ನಾರ ಈ ಪ್ರಸ್ತಾವನೆಯ ಹಿಂದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ, ಪರಿಸರ ಪ್ರಿಯರು ಮತ್ತು ರೈತಾಪಿ ವರ್ಗ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು, ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಜೋಗಿಮಟ್ಟಿ ವನ್ಯಧಾಮದಲ್ಲಿ ಕಂಡುಬಂದ ಕರಡಿ
ಪರಿಸರ ಸೂಕ್ಷ್ಮ ವಲಯದ ಬಗ್ಗೆ ನಿಗದಿ ಮಾಡಿ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ವನ್ಯಧಾಮದ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮವಲಯ ಎಂದು ಭಾವಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಹೀಗಾಗಿ, ಅರಣ್ಯ ಇಲಾಖೆಯ ಅಧಿಕಾರಿಗಳ ಸಮಿತಿ ಈ ಬಗ್ಗೆ ಅಧ್ಯಯನ ನಡೆಸಿದೆ. ವನ್ಯಜೀವಿಗಳ ಚಲನವಲನದ ಬಗ್ಗೆ ಪರಿಶೀಲನೆ ನಡೆಸಿದ್ದು ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಅಂತೆಯೇ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಪರಿಶೀಲಿಸಿ ಜೋಗಿಮಟ್ಟಿ ವನ್ಯಧಾಮದ ಸುತ್ತ 1ಕಿ.ಮೀ ವ್ಯಾಪ್ತಿಗೆ ಪರಿಸರ ಸೂಕ್ಷ್ಮ ವಲಯ ಸಾಕಾಗುತ್ತದೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗ ಅರಣ್ಯಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿ ವನ್ಯಜೀವಿಧಾಮ ಆಸುಪಾಸಿನ ಪರಿಸರ ಸೂಕ್ಷ್ಮವಲಯವನ್ನು 10ಕಿ.ಮೀ ನಿಂದ 1ಕಿ.ಮೀ ಗೆ ಇಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆ ಮೂಲಕ ಕಲ್ಲು ಗಣಿಗಾರಿಕೆ ಸೇರಿದಂತೆ ಇತರೆ ದಂಧೆಕೋರರ ಲಾಭಿಗೆ ಅಧಿಕಾರಿಗಳು ಮಣಿದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ: ಕಾಮೋತ್ತೇಜಕವಂತೆ ಕತ್ತೆ ಮಾಂಸ; ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ