ಗಣಿ ಮತ್ತು ಖನಿಜಗಳ ಕಾಯ್ದೆ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ; ಗಣಿಗಾರಿಕೆ ಗುತ್ತಿಗೆ ಹರಾಜು ಇನ್ನು ಸರಳ, ಮುಕ್ತ ಮುಕ್ತ

| Updated By: ಸಾಧು ಶ್ರೀನಾಥ್​

Updated on: Apr 03, 2021 | 1:25 PM

ಈ ತಿದ್ದುಪಡಿಯು ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿಯಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಲು ಮತ್ತಷ್ಟು ಶಕ್ತಿ ನೀಡಲಿದೆ. ಜೊತೆಗೆ, ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ. ಗಣಿಗಾರಿಕೆಗೆ ಅವಕಾಶವಿರುವ ರಾಜ್ಯಗಳಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ತೆರೆದುಕೊಳ್ಳಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಗಣಿ ಮತ್ತು ಖನಿಜಗಳ ಕಾಯ್ದೆ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ; ಗಣಿಗಾರಿಕೆ ಗುತ್ತಿಗೆ ಹರಾಜು ಇನ್ನು ಸರಳ, ಮುಕ್ತ ಮುಕ್ತ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Follow us on

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣಾ) ಕಾಯ್ದೆಗೆ ಸಂಬಂಧಿಸಿದಂತೆ ತರಲಾದ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಮಾರ್ಚ್​ 19 ರಂದು ಈ ಕಾಯ್ದೆಯನ್ನು ಲೋಕಸಭೆ ಅಂಗೀಕರಿಸಿದ್ದ ಈ ಮಸೂದೆಗೆ ಶುಕ್ರವಾರ ರಾಜ್ಯಸಭೆಯಲ್ಲೂ ಅನುಮೋದನೆ ಸಿಕ್ಕಿದ್ದು, ಉಭಯ ಸದನಗಳಿಂದಲೂ ಒಪ್ಪಿಗೆ ಸಿಕ್ಕ ಕಾರಣ ಈ ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ. ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಇದು ಸಕಾರಾತ್ಮಕ ಬೆಳವಣಿಗೆ ಎನ್ನಲಾಗಿದೆ.

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣಾ) ಕಾಯ್ದೆಗೆ ತಂದಿರುವ ತಿದ್ದುಪಡಿಗಳಿಂದಾಗಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದಲ್ಲಿ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿವೆ. ಅಭಿವೃದ್ಧಿ ಪ್ರಕ್ರಿಯೆ ಸೇರಿದಂತೆ ಗಣಿ ಮತ್ತು ಖನಿಜಕ್ಕೆ ಸೇರಿದ ಎಲ್ಲಾ ಬೆಳವಣಿಗೆಗಳಿಗೂ ಬಹುದೊಡ್ಡ ಮಟ್ಟದಲ್ಲಿ ಉತ್ತೇಜನ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಲ್ಹಾದ್ ಜೋಶಿ, ಈ ತಿದ್ದುಪಡಿಯು ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿಯಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಲು ಮತ್ತಷ್ಟು ಶಕ್ತಿ ನೀಡಲಿದೆ. ಜೊತೆಗೆ, ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ. ಗಣಿಗಾರಿಕೆಗೆ ಅವಕಾಶವಿರುವ ರಾಜ್ಯಗಳಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ತೆರೆದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಚಾಲ್ತಿಯಲ್ಲಿದ್ದ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣಾ) ಕಾಯ್ದೆಯ ಸೆಕ್ಷನ್​ 10(A)(2) ಅಡಿಯಲ್ಲಿ ಅನುಮತಿ ಹೊಂದಿದವರಿಗೆ ಮಾತ್ರ ನಿಯಮಿತ ಅವಕಾಶ ನೀಡಲಾಗುತ್ತಿತ್ತು. ಆದರೆ, ಈಗ ತರಲಾಗಿರುವ ತಿದ್ದುಪಡಿಯ ಮೂಲಕ ಇದರ ಮೇಲಿನ ಎಲ್ಲಾ ನಿರ್ಬಂಧಗಳೂ ತೆರವುಗೊಳ್ಳಲಿದ್ದು, ಬಹಿರಂಗವಾಗಿ ಹರಾಜು ಪ್ರಕ್ರಿಯೆಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಅಂತೆಯೇ, ಈವರೆಗೆ ಗಣಿಗಾರಿಕೆಗೆ ಗುತ್ತಿಗೆ ಪಡೆಯಲು ಸಾಧ್ಯವಾಗದವರಿಗೂ ಹರಾಜಿನ ಮೂಲಕ ಅವಕಾಶ ನೀಡಲಾಗುತ್ತದೆ.

(Mines and Minerals Amendment Bill 2021 passed in both Lok Sabha and Rajya Sabha of Parliament says Union Minister of Coal and Mines Pralhad Joshi)

Published On - 9:57 am, Sat, 3 April 21