ಬೆಂಗಳೂರು: ದಿವಂಗತ ಡಾ. ಸಿದ್ದಲಿಂಗಯ್ಯ ಸ್ಮಾರಕ ನಿರ್ಮಾಣದ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಇಂದು (ಜೂನ್ 30) ಭರವಸೆ ನೀಡಿದ್ದಾರೆ. ಸ್ಮಾರಕ ನಿರ್ಮಾಣದ ಕುರಿತು ಶೀಘ್ರದಲ್ಲೇ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಉನ್ನತ ಶಿಕ್ಷಣ ಸಚಿವ ಉಪ ಮುಖ್ಯಮಂತ್ರಿಯೂ ಆಗಿರುವ ಅಶ್ವತ್ಥ್ ನಾರಾಯಣ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇಂದು ಸಿದ್ದಲಿಂಗಯ್ಯ ಮನೆಗೆ ಭೇಟಿ ನೀಡಿದ್ದ ವೇಳೆ ಲಿಂಬಾವಳಿ ಹೀಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ದಲಿತ ಕವಿ, ಸಾಹಿತಿ ದಿವಂಗತ ಡಾ. ಸಿದ್ದಲಿಂಗಯ್ಯ ಅವರ ಹೆಸರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವೃತ್ತ ಅಥವಾ ಮೇಲ್ಸೇತುವೆಗೆ ಇಡಬೇಕು ಎಂದು ಸೂಚಿಸಿ ಬಿಬಿಎಂಪಿ ಆಡಳಿತಾಧಿಕಾರಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಪತ್ರ ಬರೆದಿದ್ದರು. ಬಿಬಿಎಂಪಿ ವ್ಯಾಪ್ತಿ ವೃತ್ತ ಅಥವಾ ರಸ್ತೆ ಅಥವಾ ಮೇಲ್ಸೇತುವೆ ಇದು ಯಾವುದಕ್ಕಾದರೂ ಸಿದ್ದಲಿಂಗಯ್ಯ ಅವರ ಹೆಸರಿಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಶ್ರೀರಾಮುಲು ಪತ್ರ ಬರೆದು ತಿಳಿಸಿದ್ದರು.
ಖ್ಯಾತ ಕವಿ, ಸಾಹಿತಿ, ದಲಿತ ಹೋರಾಟಗಾರ ಡಾ. ಸಿದ್ದಲಿಂಗಯ್ಯ ಜೂನ್ 11ರಂದು ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದರು. ಕೆಲವು ದಿನಗಳ ಕಾಲ ಕೊವಿಡ್-19 ಸೋಂಕಿನ ವಿರುದ್ಧ ಹೋರಾಡಿದ ಅವರು ಮೊನ್ನೆಯಷ್ಟೇ ಕೊನೆಯುಸಿರೆಳೆದಿದ್ದರು. ವಿಧಾನಪರಿಷತ್‌ನ ಮಾಜಿ ಸದಸ್ಯರೂ ಆಗಿದ್ದ ಸಿದ್ದಲಿಂಗಯ್ಯ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು.
ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಅವರ ನಿಧನದಿಂದ, ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿತ್ತು.
ಇದನ್ನೂ ಓದಿ: Siddalingaiah Funeral: ಸಕಲ ಸರ್ಕಾರಿ ಗೌರವದೊಂದಿಗೆ ನಡೆದ ಡಾ.ಸಿದ್ದಲಿಂಗಯ್ಯ ಅಂತ್ಯಸಂಸ್ಕಾರ; ಕೊನೆಯ ಫೋಟೊಗಳು ಇಲ್ಲಿವೆ
ಕವಿ, ಸಾಹಿತಿ ಸಿದ್ದಲಿಂಗಯ್ಯ ಹೆಸರನ್ನು ಬಿಬಿಎಂಪಿ ವ್ಯಾಪ್ತಿಯ ವೃತ್ತ ಅಥವಾ ಮೇಲ್ಸೇತುವೆಗೆ ಇಡುವಂತೆ ಶ್ರೀರಾಮುಲು ಮನವಿ