ಬೆಂಗಳೂರು: ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಈ ದಂಧೆಗೆ ಏಕೆ ಇನ್ನೂ ಕಡಿವಾಣ ಹಾಕಿಲ್ಲ ಎಂದು ವಿಧಾನ ಪರಿಷತ್ ಕಲಾಪದಲ್ಲಿ ಆಡಳಿತಾರೂಢ ಬಿಜೆಪಿಯ ಸದಸ್ಯರೇ ಆದ ಎನ್.ರವಿಕುಮಾರ್ ಅವರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಪ್ರಶ್ನೆ ಮಾಡಿದ್ದಾರೆ. ಕೆಲ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೀತಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವ ಡಾ.ಕೆ.ಸುಧಾಕರ್ ಸೀಟ್ ಬ್ಲಾಕಿಂಗ್ ದಂಧೆ ನಡೆಯುವುದನ್ನು ಒಪ್ಪಿಕೊಂಡಿದ್ದಾರೆ.
ಕೆಲವು ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಕಾನೂನಿನ ಲೋಪ ದೋಷಗಳನ್ನು ಬಳಸಿಕೊಂಡು ಕೆಲವು ಕಾಲೇಜುಗಳು ತಮಗೆ ಬೇಕಾದಂತೆ ವೈದ್ಯಕೀಯ ಸೀಟ್ ಹಂಚಿಕೆ ಮಾಡಿಕೊಳ್ತಿವೆ ಎಂದು ಡಾ.ಕೆ.ಸುಧಾಕರ್ ಸೀಟ್ ಬ್ಲಾಕಿಂಗ್ ದಂಧೆ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ವೇಳೆ ಮರು ಪ್ರಶ್ನೆ ಮಾಡಿದ ರವಿಕುಮಾರ್, ಇತ್ತೀಚೆಗೆ 12 ಮೆಡಿಕಲ್ ಕಾಲೇಜುಗಳ ಮೇಲೆ ದಾಳಿಯಾಗಿದೆ. ಅಂಥ ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದ ನೋಟಿಸ್ ಯಾಕೆ ನೀಡಿಲ್ಲ? ಕಾಲೇಜುಗಳ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ? ಎಂದು ಮರು ಪ್ರಶ್ನೆ ಮಾಡಿದ್ರು. ಅದಕ್ಕೆ ಉತ್ತರಿಸಿದ ಸುಧಾಕರ್ ನೋಟಿಸ್ ನೀಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಇಲಾಖೆ ಅಡಿಯಲ್ಲಿ ಕಪ್ಪುಹಣದ ವ್ಯಾಪ್ತಿಗೆ ನೋಟಿಸ್ ನೀಡಲು ಸಾಧ್ಯವಿಲ್ಲ ಎಂದರು.
ಕಳೆದ ವರ್ಷ ಮಾಜಿ ಐಪಿಎಸ್ ಶಂಕರ್ ಬಿದರಿ ಸಹ ಇದೇ ಆರೋಪ ಮಾಡಿದ್ದರು
ಕಳೆದ ವರ್ಷ ಮೆಡಿಕಲ್ ಸೀಟ್ ಬ್ಲಾಕಿಂಗ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಸಹ ಗಂಭೀರವಾಗಿ ಹೇಳಿದ್ದರು. ಖಾಸಗಿ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಬರೋಬ್ಬರಿ ₹1,100 ಕೋಟಿ ಮೊತ್ತದ ಅವ್ಯವಹಾರವಾಗಿದೆ ಎಂದು ಅವರು ಆರೋಪ ಮಾಡಿದ್ದರು.
ಐಟಿ ಇಲಾಖೆ ಮತ್ತು ಸರ್ಕಾರದತ್ತ ಬೊಟ್ಟು ಮಾಡಿದ್ದ ಶಂಕರ್ ಬಿದರಿ
ಮೆಡಿಕಲ್ ಸೀಟ್ ಬ್ಲಾಕಿಂಗ್ನಿಂದ ಸಾವಿರಾರು ಕೋಟಿ ಹಣ ಅವ್ಯವಹಾರವಾಗಿದೆ. ಈ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಇಷ್ಟು ದೊಡ್ಡ ಅವ್ಯವಹಾರ ಆಗಿದ್ರೂ ಸರ್ಕಾರ ಹಾಗೂ ಐಟಿ ಇಲಾಖೆ ಏನು ಮಾಡ್ತಿದೆ? ಇಷ್ಟೊಂದು ದೊಡ್ಡ ಅವ್ಯವಹಾರ ಆಗಿದ್ರೂ ಪ್ರಕರಣದ ಬಗ್ಗೆ ಸರ್ಕಾರ ಮೌನ ವಹಿಸಿದೆ. ಖಾಸಗಿಯವರ ಲಾಬಿಗೆ ಸರ್ಕಾರದವರು ಮಣಿದ್ರಾ? ಎಂದು ಫೇಸ್ಬುಕ್ ಪೇಜ್ನಲ್ಲಿ ಶಂಕರ್ ಬಿದರಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಪ್ರತಿಭಾವಂತರನ್ನ ಕಡೆಗಣಿಸಿ ರಾತ್ರೋರಾತ್ರಿ ನಡೆದಿತ್ತಾ ‘ಮೆಡಿಕಲ್ ಸೀಟ್’ ಹಗರಣ?