ಬೆಂಗಳೂರು, (ಆಗಸ್ಟ್ 26): ಆಸ್ತಿ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಯಾರದ್ದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ಕೊಟ್ಟು ಮೋಸ ಮಾಡುವುದು, ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಆಸ್ತಿ ಸೇಫ್ಟಿಗಾಗಿ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಲಾಗಿದ್ದ, ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ತಮ್ಮ-ತಮ್ಮ ಆಸ್ತಿ ಒಡೆತನದವರು ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಈ 3ರಲ್ಲಿ ಒಂದು ದಾಖಲೆ ನೀಡಬೇಕು.
ಈ ಬಗ್ಗೆ ಇಂದು (ಆಗಸ್ಟ್ 26) ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಯಾರದ್ದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ಕೊಟ್ಟು ಮೋಸ ಮಾಡುತ್ತಿದ್ದಾರೆ. ಇನ್ನು ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸ್ತಿದ್ದಾರೆ ಇದು ವ್ಯವಸ್ಥಿತವಾಗಿ ದರೋಡೆ ಮಾಡುವ ಕೆಲಸ. ಈ ಬಗ್ಗೆ ದೂರು ಬಂದಿವೆ. ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ 3 ದಾಖಲೆ ಸಲ್ಲಿಸಬೇಕು. ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಈ 3ರಲ್ಲಿ ಒಂದು ದಾಖಲೆ ನೀಡಬೇಕು ಎಂದು ಮಾಹಿತಿ ನೀಡಿದರು.
ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಿದ್ದೇವೆ. ಅಪಾಯಿಂಟ್‌ಮೆಂಟ್ ಸಿಸ್ಟಮ್ ಸರಿಯಾಗಿ ಪಾಲಿಸದೆ ಜನಜಂಗುಳಿಯಿತ್ತು. ಇನ್ಮುಂದೆ ಅಪಾಯಿಂಟ್‌ಮೆಂಟ್ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ರಾಜ್ಯದಲ್ಲಿ 257 ಉಪನೋಂದಣಿ ಕಚೇರಿಗಳಿವೆ, 50 ಕಚೇರಿಗಳಲ್ಲಿ ಜನಜಂಗುಳಿ ಇದೆ. ಉಳಿದ ಉಪನೋಂದಣಿ ಕಚೇರಿಗಳಲ್ಲಿ ಹೆಚ್ಚು ಜನಜಂಗುಳಿ ಇರಲ್ಲ. ಇವೆಲ್ಲವೂ ನಗರ ಪ್ರದೇಶದಲ್ಲಿರುವ ಕಾರಣ ಸ್ಥಳಾವಕಾಶ ಸಹ ಕಡಿಮೆ ಇದೆ. ಗ್ರಾಮೀಣ ಪ್ರದೇಶಗಳ ಉಪನೋಂದಣಿ ಕಚೇರಿಗಳಲ್ಲಿ ಕೆಲಸದ ಒತ್ತಡ ಇಲ್ಲ. ಸೆಪ್ಟೆಂಬರ್ 2ರಿಂದ ಆಯಾ ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬಹುದು ಎಂದು ತಿಳಿಸಿದರು.
ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬಹುದು. ವ್ಯವಸ್ಥೆ ಮೇಲೆ ನಂಬಿಕೆ ಹಾಗೂ ಆಸ್ತಿ ಮಾಲೀಕರಿಗೆ ಸುರಕ್ಷತೆ ತರುವ ಕೆಲಸ ಇದು. ಇದು ಅನಾನುಕೂಲ ಎಂದು ಭಾವಿಸಬೇಡಿ ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ