ಬೆಂಗಳೂರು: ಮೇಕೆದಾಟು ಯೋಜನೆ ಮಾಡಲು ನಿರ್ಧರಿಸಿ ಆಗಿದೆ. ಯಾರನ್ನೋ ಕೇಳಿ ಮಸಾಲೆ ಅರೆಯೋಕಾಗಲ್ಲ. ಸಂಪ್ರದಾಯ ಪ್ರಕಾರ ಪತ್ರ ಬರೆಯಲಾಗಿದೆ. ಆದಷ್ಟು ಶೀಘ್ರದಲ್ಲಿ ಇದಕ್ಕೊಂದು ಪರಿಹಾರ ನೀಡ್ತೇವೆ ಎಂದು ವಿಧಾನಸೌಧದಲ್ಲಿ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಕೆಆರ್ಎಸ್ ಜಲಾಶಯದ ಬಗ್ಗೆ ತಪ್ಪು ಮಾಹಿತಿ ಬೇಡ. ಪದೇಪದೆ ಬಿರುಕು ಎಂಬ ಮಾಹಿತಿ ರವಾನೆ ಆಗಬಾರದು ಎಂದೂ ಅವರು ತಿಳಿಸಿದ್ದಾರೆ.
ನೀರಾವರಿ ತಜ್ಞರಿದ್ದಾರೆ, ಕಾವೇರಿ ನೀರಾವರಿ ನಿಗಮ ಇದೆ. ಕೆಳಭಾಗದ ರೈತರಿಗೆ ತಪ್ಪು ಮಾಹಿತಿ ರವಾನೆಯಾಗಬಾರದು. ಲಕ್ಷಾಂತರ ಜನ ರೈತರ ಜೊತೆಗೆ ಆಟವಾಡಬಾರದು. ಸಂಸದರೂ ಹೇಳಬಾರದು, ಕುಮಾರಸ್ವಾಮಿ ಕೂಡ ಹೇಳಬಾರದು. ಅದು ಅವರ ವೈಯಕ್ತಿಕ ಅಭಿಪ್ರಾಯ, ಮಾಹಿತಿ ಇರಬಹುದು ಎಂದು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆ ಸಂಬಂಧ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ಆಗಿದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆ 4 ದಶಕದ್ದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮೇಕೆದಾಟು ಯೋಜನೆಗೆ 4 ಪ್ರಾಜೆಕ್ಟ್ ಮಾಡಲಾಗಿತ್ತು. ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಕಾರ್ಪೊರೇಷನ್ನಿಂದ ಇದಕ್ಕೆ ಮಾರ್ಗದರ್ಶನ ನೀಡಲಾಗಿತ್ತು. ಅದಾದ ಮೇಲೆ ಹಲವಾರು ಬಾರಿ ಮಾರ್ಪಾಡುಮಾಡಲಾಗಿದೆ. 2012ರಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಲಾಗಿತ್ತು. ಕುಡಿಯುವ ನೀರಿನ ಬಳಕೆಗೆ ನಿರ್ಧಾರ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ತಮಿಳುನಾಡು ಈ ವಿಚಾರದಲ್ಲಿ ಹೊಸದಾಗಿ ಆಕ್ಷೇಪ ಮಾಡ್ತಿಲ್ಲ. ಅಲ್ಲಿ ಸರ್ಕಾರ ಬದಲಾಗಿದೆ. ಎರಡೂ ರಾಜ್ಯಗಳಿಗೆ ಅನುಕೂಲ ಆಗತ್ತೆ ಅಂತ ನಾವು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದೆವು. ಆದರೆ ಅವರ ಉತ್ತರದ ವೈಖರಿ ಸರಿಯಾಗಿಲ್ಲ. ನಮ್ಮ ಲೀಗಲ್ ಬ್ಯಾಟಲ್ ನಾವು ಮುಂದುವರಿಸ್ತೇವೆ. ಈ ಯೋಜನೆ ನಾವು ಮಾಡಿಯೇ ಮಾಡ್ತೇವೆ. ಪರಿಸರ ಸಂಬಂಧಿ ಅನುಮತಿ ಕೂಡ ತೆಗೆದುಕೊಳ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆಯನ್ನು ಮುಂದುವರಿಸಬೇಡಿ: ಬಿ ಎಸ್ ಯಡಿಯೂರಪ್ಪ ಪತ್ರಕ್ಕೆ ಎಂ ಕೆ ಸ್ಟಾಲಿನ್ ಪ್ರತ್ಯುತ್ತರ
ಮೇಕೆದಾಟು ಯೋಜನೆ ವಿವಾದ: ತಮಿಳುನಾಡಿನಲ್ಲಿ ಹೊಸ ಸರ್ಕಾರ ಬಂದಿದೆ; ಇದೆಲ್ಲಾ ರಾಜಕೀಯ ಎಂದ ಬಸವರಾಜ ಬೊಮ್ಮಾಯಿ