ಮೇಕೆದಾಟು ಯೋಜನೆಯನ್ನು ಮುಂದುವರಿಸಬೇಡಿ: ಬಿ ಎಸ್ ಯಡಿಯೂರಪ್ಪ ಪತ್ರಕ್ಕೆ ಎಂ ಕೆ ಸ್ಟಾಲಿನ್ ಪ್ರತ್ಯುತ್ತರ
ಬೆಂಗಳೂರಿನ 4.75 ಟಿಎಂಸಿ ಕುಡಿಯುವ ನೀರಿನ ಬಳಕೆಗೆ 67.16 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಒಪ್ಪುವಂಥದ್ದಲ್ಲ. ತಮಿಳುನಾಡಿನ ಜಲ ವಿದ್ಯುತ್ ಉತ್ಪಾದನಾ ಯೋಜನೆಗೆ ನೀರು ಬಳಸಲ್ಲ. ಜಲವಿದ್ಯುತ್ ಉತ್ಪಾದನಾ ಯೋಜನೆಗಳಿಂದ ತೊಂದರೆ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಚೆನ್ನೈ: ಮೇಕೆದಾಟು ಯೋಜನೆಯ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರೆದ ಪತ್ರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತ್ಯುತ್ತರ ನೀಡಿದ್ದಾರೆ. ಮೇಕೆದಾಟು ಯೋಜನೆಯನ್ನು ಮುಂದುವರಿಸಬೇಡಿ ಎಂದು ಸ್ಟಾಲಿನ್ ಹೇಳಿದ್ದಾರೆ. ಮೇಕೆದಾಟು ಡ್ಯಾಂ ನಿರ್ಮಾಣದಿಂದ ನೀರಿಗೆ ತೊಂದರೆ ಆಗುತ್ತದೆ. ಡ್ಯಾಂನಿಂದಾಗಿ ತಮಿಳುನಾಡಿಗೆ ಹರಿಯುವ ನೀರಿಗೆ ತೊಂದರೆ ಆಗಲಿದೆ. ತಮಿಳುನಾಡಿನ ಯೋಜನೆ ಮೇಕೆದಾಟು ಜತೆ ಹೋಲಿಸಬೇಡಿ ಎಂದು ಸ್ಟಾಲಿನ್ ಪತ್ರದ ಮೂಲಕ ತಿಳಿಸಿದ್ದಾರೆ.
ಬೆಂಗಳೂರಿನ 4.75 ಟಿಎಂಸಿ ಕುಡಿಯುವ ನೀರಿನ ಬಳಕೆಗೆ 67.16 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಒಪ್ಪುವಂಥದ್ದಲ್ಲ. ತಮಿಳುನಾಡಿನ ಜಲ ವಿದ್ಯುತ್ ಉತ್ಪಾದನಾ ಯೋಜನೆಗೆ ನೀರು ಬಳಸಲ್ಲ. ಜಲವಿದ್ಯುತ್ ಉತ್ಪಾದನಾ ಯೋಜನೆಗಳಿಂದ ತೊಂದರೆ ಇಲ್ಲ. ಈ ಯೋಜನೆಯಿಂದ ತಮಿಳುನಾಡಿನ ಕುಡಿಯುವ ನೀರು, ನೀರಾವರಿ ಯೋಜನೆಗೆ ತೊಂದರೆ ಆಗಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಹೀಗಾಗಿ ತಮಿಳುನಾಡಿನ ಜಲವಿದ್ಯುತ್ ಯೋಜನೆಗಳನ್ನು ಮೇಕೆದಾಟು ಜೊತೆಗೆ ಹೋಲಿಸುವುದು ಬೇಡ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೇಕೆದಾಟು ಜಲಾಶಯ ನಿರ್ಮಾಣದಿಂದ ನೀರಿಗೆ ಅಡ್ಡಿ ಆಗಲಿದೆ. ತಮಿಳುನಾಡಿಗೆ ಹರಿಯುವ ಅನಿಯಂತ್ರಿತ ನೀರಿಗೆ ಅಡ್ಡಿ ಆಗುತ್ತದೆ. ಮೇಕೆದಾಟು ಡ್ಯಾಂನಿಂದ ಧಕ್ಕೆ ಆಗಲ್ಲ ಎಂಬ ವಾದ ಒಪ್ಪಲ್ಲ. ತಮಿಳುನಾಡು ರೈತರಿಗೆ ಧಕ್ಕೆ ಆಗಲ್ಲ ಅನ್ನುವುದನ್ನು ಒಪ್ಪಲ್ಲ. ಈಗಾಗಲೇ ಬೆಂಗಳೂರಿಗೆ ನೀರಿನ ಮೂಲಸೌಕರ್ಯ ಇದೆ. ಕುಡಿಯುವ ನೀರಿಗೆ ಸೂಕ್ತ ಮೂಲಸೌಕರ್ಯ ಇದೆ. ಹೀಗಾಗಿ ಮೇಕೆದಾಟು ಯೋಜನೆ ಮುಂದುವರಿಸಬೇಡಿ. ಕರ್ನಾಟಕದ ಜನರಿಗೆ ನನ್ನ ಶುಭಹಾರೈಕೆಗಳು ಎಂದು ಬಿ.ಎಸ್. ಯಡಿಯೂರಪ್ಪಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ಗೆ ಪತ್ರ ಬರೆದಿದ್ದರು. ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದ ಕಾರಣ ‘ಸುಪ್ರೀಂ’ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ಯೋಜನೆಯಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. 4.75 ಟಿಎಂಸಿ ಕುಡಿಯುವ ನೀರಿಗೆ ಅವಕಾಶ ನೀಡಲಾಗಿತ್ತು. ಈ ಯೋಜನೆ ಎರಡೂ ರಾಜ್ಯಕ್ಕೆ ಉಪಯುಕ್ತವಾಗಲಿದೆ. ಜತೆಗೆ ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರದಲ್ಲಿ ಬರೆದಿದ್ದರು.
ಈಗಾಗಲೇ ತಮಿಳುನಾಡು ಸರ್ಕಾರದಿಂದ ‘ಸುಪ್ರೀಂ’ಗೆ ಅರ್ಜಿ ಸಲ್ಲಿಸಿರುವುದನ್ನು ಉಲ್ಲೇಖಿಸಿರುವ ಸಿಎಂ ಯಡಿಯೂರಪ್ಪ, ನಾವೂ ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದೇವೆ. ತಮಿಳುನಾಡು ಸರ್ಕಾರ ಕಾವೇರಿ ನೀರು ಬಳಸಿ ಪವರ್ ಪ್ರಾಜೆಕ್ಟ್ ಆರಂಭಿಸಲು ನಿರ್ಧರಿಸಿದೆ. ಎರಡೂ ರಾಜ್ಯದ ನಡುವೆ ಸಾಮರಸ್ಯ ಮುಂದುವರಿಯಲಿ. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಅಡ್ಡಿ ಬೇಡ ಎಂದು ಸಿಎಂ ಯಡಿಯೂರಪ್ಪ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಮೇಕೆದಾಟು ಯೋಜನೆ ವಿವಾದ: ತಮಿಳುನಾಡಿನಲ್ಲಿ ಹೊಸ ಸರ್ಕಾರ ಬಂದಿದೆ; ಇದೆಲ್ಲಾ ರಾಜಕೀಯ ಎಂದ ಬಸವರಾಜ ಬೊಮ್ಮಾಯಿ