2nd PU Repeaters Exam 2021: ದ್ವಿತೀಯ ಪಿಯುಸಿ ರಿಪೀಟರ್ಸ್ ಪರೀಕ್ಷೆ ಇಲ್ಲದೇ ಪಾಸ್; ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ
ಆದರೆ ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಅಗಸ್ಟ್ 31ರೊಳಗೆ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಸೆಪ್ಟೆಂಬರ್ 20ರೊಳಗೆ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು: ದ್ವಿತೀಯ ಪಿಯುಸಿ ರಿಪೀಟರ್ಸ್‌ಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಎಲ್ಲಾ ರಿಪೀಟರ್ಸ್ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದೆ. ಶೇ.35ರಷ್ಟು ಅಂಕ ನೀಡಿ ಎಲ್ಲ ರಿಪೀಟರ್ಸ್ ವಿದ್ಯಾರ್ಥಿಗಳನ್ನೂ ತೇರ್ಗಡೆ ಎಂದು ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶೇ.35 ರ ಜೊತೆ ಶೇ.5 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಅಗಸ್ಟ್ 31ರೊಳಗೆ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಸೆಪ್ಟೆಂಬರ್ 20ರೊಳಗೆ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಸೂಚನೆ ನೀಡಿದೆ. ಕೊವಿಡ್ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಹಿಂದಿನ ವರ್ಷದ ಅಂಕವನ್ನು ತಿರಸ್ಕರಿಸಿದವರಿಗೆ ಆಯ್ಕೆ ನೀಡಲು ತಿಳಿಸಿದೆ. ಖಾಸಗಿ ಪರೀಕ್ಷಾರ್ಥಿಗಳು ಹಿಂದಿನ ಬಾರಿಯ ಅಂಕವನ್ನೇ ಪಡೆಯಬಹುದು. ಅಥವಾ ಪರೀಕ್ಷೆ ನಡೆಸಿದಾಗ ಬರೆಯಬಹುದು ಎಂದು ನಿರ್ದೇಶನ ನೀಡುವ ಕೋರ್ಟ್, ಅಂಕ ಉತ್ತಮಪಡಿಸಿಕೊಳ್ಳ ಬಯಸಿದ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿದೆ.
ಜುಲೈ 31 ರೊಳಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸುವಂತೆಯೂ ಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಹೈಕೋರ್ಟ್ ಮೊರೆ ಹೋಗಿದ್ದ ರಿಪೀಟರ್ಸ್ ಮೊದಲ ಬಾರಿ ಪಿಯು ಪರೀಕ್ಷೆ ಎದುರಿಸುತ್ತಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲಾಗಿದೆ. ಆದರೆ, ರಿಪೀಟರ್ಸ್‌ಗೆ ಮಾತ್ರ ಪಿಯು ಪರೀಕ್ಷೆ ನಡೆಸುತ್ತಿರುವುದು ಏಕೆ? ಎಂದು ಪ್ರಶ್ನಿಸಿ ಪಿಯು ರಿಪೀಟರ್ಸ್ ವಿದ್ಯಾರ್ಥಿಗಳು ಈಮುನ್ನವೇ ಹೈಕೋರ್ಟ್ನ ಮೊರೆ ಹೋಗಿದ್ದರು. ಶಿಕ್ಷಣ ಇಲಾಖೆ ತಾರತಮ್ಯ ಅನುಸರಿಸುತ್ತಿದೆ ಎಂದು ದೂರಿರುವ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದ ಶಿಕ್ಷಣ ಇಲಾಖೆಯ ನಿರ್ಧಾರ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ರಿಪೀಟರ್ಸ್‌ಗೆ ದ್ವಿತೀಯ ಪಿಯು ಪರೀಕ್ಷೆಗೆ ವಿರೋಧಿಸಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ರಿಪೀಟರ್ಸ್ ಆಕ್ರೋಶ ಹೊರಹಾಕಿದ್ದರು. ನಮಗೊಂದು ನ್ಯಾಯ, ಫ್ರೆಶರ್ಸ್‌ಗೊಂದು ನ್ಯಾಯಾನಾ? ಎಲ್ಲರದ್ದೂ ಜೀವವೇ ಅಲ್ಲವಾ ಶಿಕ್ಷಣ ಸಚಿವರೇ? ಕೊರೊನಾ ಇದ್ದರೂ ಕಳೆದ ವರ್ಷ ಪರೀಕ್ಷೆ ಬರೆದಿದ್ದೇವೆ. ಒಂದೋ ಎರಡೋ ವಿಷಯಗಳು ಪಾಸ್ ಆಗಿಲ್ಲ. ಹಾಗಂತ ಪರೀಕ್ಷೆ ಮಾಡಿ ನಮ್ಮ ಪ್ರಾಣ ತೆಗೆಯಬೇಡಿ ಎಂದು ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರು.
ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಅಗತ್ಯ ಮುನ್ನೆಚ್ಚರಿಕೆ: ಸಚಿವ ಸುರೇಶ್ ಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಕಳೆದ ಬಾರಿಯೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ಮಾದರಿಯಲ್ಲಿ ಈ ಬಾರಿಯೂ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಎಸ್ಎಸ್ಎಲ್ಸಿ ನಂತರ ಪಿಯುಸಿಯಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ನಡೆಸುವ ಸಂಬಂಧ ಈ ವಾರವೇ ಎಲ್ಲಾ ಜಿಲ್ಲೆಗಳ ಡಿಡಿಪಿಐ ಮತ್ತು ಬಿಇಒಗಳ ಸಭೆ ನಡೆಸಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ಅನುಮಾನಗಳನ್ನು ಹೋಗಲಾಡಿಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಈಗಾಗಲೇ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗಿದೆ. ಈ ಮೂಲಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಗೊಂದಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇಷ್ಟೊಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು.ಕಳೆದ ಬಾರಿಯಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಭರದ ಸಿದ್ಧತೆ
TET-2021: ಶಿಕ್ಷಕರ ಅರ್ಹತಾ ಪರೀಕ್ಷೆಗೆ ದಿನಾಂಕ ಘೋಷಣೆ; ಅಗಸ್ಟ್ 22ರಂದು ಪರೀಕ್ಷೆ
( 2nd puc repeaters will be pass with 35 percentage of marks says Karnataka Govt to high court)
Published On - 2:25 pm, Mon, 5 July 21