EV Charging Stations: ಅತಿಹೆಚ್ಚು ಇವಿ ಚಾರ್ಜಿಂಗ್​ ಸ್ಟೇಷನ್: ಅಗ್ರ ಸ್ಥಾನದಲ್ಲಿ ಕರ್ನಾಟಕ

|

Updated on: Aug 20, 2024 | 10:52 AM

ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್​ಗಳನ್ನು ಹೊಂದಿರುವ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿರುವುದು ವರದಿಯೊಂದರಿಂದ ತಿಳಿದುಬಂದಿದೆ. ಅದರಲ್ಲಿಯೂ ಬೆಂಗಳೂರು ನಗರ ಅಗ್ರ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವೆಹಿಕಲ್​ಗಳಿಗೆ ನೀಡಲಾಗುತ್ತಿರುವ ಉತ್ತೇಜನ ಕ್ರಮಗಳ ಬಗ್ಗೆ ಇಂಧನ ಇಲಾಖೆ ಮೆಚ್ಚುಗೆ ಸೂಚಿಸಿದೆ.

EV Charging Stations: ಅತಿಹೆಚ್ಚು ಇವಿ ಚಾರ್ಜಿಂಗ್​ ಸ್ಟೇಷನ್: ಅಗ್ರ ಸ್ಥಾನದಲ್ಲಿ ಕರ್ನಾಟಕ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 20: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿಯ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ವರದಿಯೊಂದರಿಂದ ತಿಳಿದುಬಂದಿದೆ. ಇಂಧನ ಇಲಾಖೆಯ ಅಧೀನದಲ್ಲಿ ಬರುವ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (BEE) ಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು (PEVCS) ಹೊಂದಿದೆ. ಅವುಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ.

ವರದಿಯ ಪ್ರಕಾರ, ರಾಜ್ಯದಲ್ಲಿ 5,765 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳಿದ್ದು, ಅದರಲ್ಲಿ 4,462 ಬೆಂಗಳೂರು ನಗರವೊಂದರಲ್ಲೇ ಇವೆ. 2023 ಮತ್ತು 2024 ರಲ್ಲಿ ವಾಹನ್ ಮತ್ತು ಯಾತ್ರಾ ಪೋರ್ಟಲ್‌ಗಳು ಬಿಡುಗಡೆ ಮಾಡಿರುವ ಇದೇ ರೀತಿಯ ವರದಿಗಳು, ಇವಿ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂಬುದನ್ನು ಬಹಿರಂಗಪಡಿಸಿವೆ.

ಶುದ್ಧ ಇಂಧನದ ಬಗ್ಗೆ ಕರ್ನಾಟಕಕ್ಕೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಇದು ತೋರಿಸಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಸಾಧನೆಯು ಸುಸ್ಥಿರತೆ ಮತ್ತು ಶುದ್ಧ ಇಂಧನಕ್ಕೆ ರಾಜ್ಯದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯ ವಿಚಾರದಲ್ಲಿ ಕರ್ನಾಟಕವು ಗಮನಾರ್ಹ ಬೆಳವಣಿಗೆ ಸಾಧಿಸಿದ್ದಲ್ಲದೆ, ಮುಂಚೂಣಿಯಲ್ಲಿದೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಇದು ರಾಜ್ಯದ ಒಟ್ಟು ಶೇ 85 ಕ್ಕಿಂತ ಹೆಚ್ಚಾಗಿದೆ ಎಂದು ಇಂಧನ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇವಿ ನೀತಿ ಅಳವಿಡಿಸಿಕೊಂಡಿದ್ದ ಮೊದಲ ರಾಜ್ಯ

ಕರ್ನಾಟಕವು 2017 ರಲ್ಲಿ ಎಲೆಕ್ಟ್ರಿಕ್ ವೆಹಿಕಲ್ ನೀತಿಯನ್ನು ಪರಿಚಯಿಸಿತ್ತು. ಅಲ್ಲದೆ, ಎಲೆಕ್ಟ್ರಿಕ್ ವೆಹಿಕಲ್ ನೀತಿಯನ್ನು ಅಳವಡಿಸಿದ ಮೊದಲ ರಾಜ್ಯವಾಗಿ ಗುರುತಿಸಿಕೊಂಡಿತ್ತು. ಈ ಉಪಕ್ರಮವನ್ನು 2021 ರಲ್ಲಿ ಮತ್ತಷ್ಟು ಬಲಪಡಿಸಲಾಗಿತ್ತು.

ಇದನ್ನೂ ಓದಿ: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ತುಂಬಿದ ಕೆರೆ ಕಟ್ಟೆಗಳು, ಸ್ವಚ್ಛಂದದಿಂದ ವನ್ಯ ಜೀವಿಗಳ ಓಡಾಟ, ಫೋಟೋಸ್ ನೋಡಿ

ಇಂಧನ ಇಲಾಖೆಯು ಕರ್ನಾಟಕದಾದ್ಯಂತ ಮಾದರಿ ಎಲೆಕ್ಟ್ರಿಕ್ ವೆಹಿಕಲ್ ನಗರಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ವೆಹಿಕಲ್ ಅಳವಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಮತ್ತು ಭವಿಷ್ಯಕ್ಕಾಗಿ ಸುಸ್ಥಿರ ಸಾರಿಗೆ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಜೆಟ್​​ನಲ್ಲೂ ಭರ್ಜರಿ ಕೊಡುಗೆ

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು, ರಾಜ್ಯ ಸರ್ಕಾರವು ಫೆಬ್ರವರಿ 2024 ರ ಬಜೆಟ್‌ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ರಾಜ್ಯದಾದ್ಯಂತ ಸುಮಾರು 2,500 ಹೊಸ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರವು 35 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ