ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಲು ಪಕ್ಷದಿಂದಲೇ ಹಣ: ಸತ್ಯ ಶೋಧನಾ ಸಮಿತಿಗೆ ಯತ್ನಾಳ್ ಒತ್ತಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 24, 2024 | 5:58 PM

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್, ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಲು ಅಪಾರ ಪ್ರಮಾಣದ ಹಣ ಬಿಜೆಪಿ ಮೂಲದಿಂದಲೇ ಹೋಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ದೊಡ್ಡ ದೊಡ್ಡ ಜವಾಬ್ದಾರಿ ಇದ್ದವರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಲು ಪಕ್ಷದಿಂದಲೇ ಹಣ: ಸತ್ಯ ಶೋಧನಾ ಸಮಿತಿಗೆ ಯತ್ನಾಳ್ ಒತ್ತಾಯ
ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಲು ಪಕ್ಷದಿಂದಲೇ ಹಣ: ಸತ್ಯ ಶೋಧನಾ ಸಮಿತಿಗೆ ಯತ್ನಾಳ್ ಒತ್ತಾಯ
Follow us on

ವಿಜಯಪುರ, ಜೂನ್​ 24: ಬಿಜೆಪಿ (bjp) ಅಭ್ಯರ್ಥಿಗಳನ್ನ ಸೋಲಿಸಲು ಅಪಾರ ಪ್ರಮಾಣದ ಹಣ ಬಿಜೆಪಿ ಮೂಲದಿಂದಲೇ ಹೋಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ (Basangouda Patil Yatnal)​ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಸತ್ಯ ಶೋಧನಾ ಸಮಿತಿ ಆಗಬೇಕೆಂದು ಯತ್ನಾಳ್​ ಒತ್ತಾಯಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪರಾಜೆ ಹೊಂದಿದ ಅಭ್ಯರ್ಥಿಗಳು ಹಾಗೂ ಗೆದ್ದ ಅಭ್ಯರ್ಥಿಗಳ ದೂರುಗಳು ಸಹ ಇವೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡ ವಿ. ಸೋಮಣ್ಣ ಅವರ ದೂರು ಇದೆ.

ಕಲಬುರಗಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ ಯಾದವ್ ಅವರದ್ದು ಇದೆ ಆರೋಪವಾಗಿದೆ. ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಗವಂತ ಖೂಬಾ ಅವರದ್ದು ಇದೇ ರೀತಿಯಾಗಿದೆ. ಚಿಕ್ಕೋಡಿ ಕ್ಷೇತ್ರದ ಜೊಲ್ಲೆ ಅವರದ್ದು ಹೀಗೆ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬಿಎಸ್ ವೈ ಅಂದರೆ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕ್ರಪ್ಪ ಮತ್ತು ಯಡಿಯೂರಪ್ಪ: ಬಸನಗೌಡ ಪಾಟೀಲ್ ಯತ್ನಾಳ್

ದೊಡ್ಡ ದೊಡ್ಡ ಜವಾಬ್ದಾರಿ ಇರುವವರು ಈ ರೀತಿ ಮಾಡುವುದರಿಂದ ಪಕ್ಷಕ್ಕೆ ಒಳಿತಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 350 ರಿಂದ 400 ಸ್ಥಾನಗಳು ಬರುತ್ತವೆ ಎಂದು ನಿರೀಕ್ಷೆ ಇಟ್ಟಿದ್ದೆವು. ಬಹಳ ಕಡೆ ಗದ್ದಲವಾಗಿದೆ. ಲೋಕಸಭಾ ಸದಸ್ಯರು ಕೂಡ ಜನಪ್ರಿಯ ಕಳೆದುಕೊಂಡಿದ್ದರು ಜೊತೆಗೆ ಜನರೊಂದಿಗೆ ಸಂಪರ್ಕ ಹೊಂದಿರಲಿಲ್ಲ ಮತ್ತು ಕೆಲಸ ಮಾಡಿರಲಿಲ್ಲ. ಕಾರ್ಯಕರ್ತರ ಜೊತೆ ಶಾಸಕರ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡಿರಲಿಲ್ಲ. ಹೀಗಾಗಿ ಸೋಲಿಗೆ ಇವು ಕೂಡ ಕಾರಣವಾಗಿದೆ ಎಂದರು.

ಪಕ್ಷ ವಿರೋಧ ಚಟುವಟಿಕೆ ಕುರಿತು ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರೇ ಹೇಳುತ್ತಾರೆಂದರೆ ಅದು ಗಂಭೀರ ಆರೋಪ. ಅದು ಸಾಮಾನ್ಯವಲ್ಲ, ಅವರು ಹಾಲಿ ಶಾಸಕರು. ದೊಡ್ಡ ದೊಡ್ಡ ಜವಾಬ್ದಾರಿ ಇದ್ದವರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೆಂಬುದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ಬದಲಾವಣೆ ಆಗಲಿದೆ: ಭವಿಷ್ಯ ನುಡಿದ ಯತ್ನಾಳ್​

ಅಲ್ಲಿ ಮೋದಿ ಅವರದು ಹಾಗೂ ಪಕ್ಷದ್ದು ಯಾವ ತಪ್ಪಿಲ್ಲ. ಅಭ್ಯರ್ಥಿಗಳ ಕುರಿತು ವಿರೋಧ ಇದ್ದಾಗ ಬಿಟ್ಟು ಕೊಡಬೇಕಿತ್ತು. ವಿಜಯಪುರ ಲೋಕಸಭಾ ಅಭ್ಯರ್ಥಿ ರಮೇಶ್ ಜಿಗಜಿಣಗಿ ಹಾಗೂ ನಮ್ಮ ನಡುವೆ ಜಗಳವಿತ್ತು ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಿದ್ದೇವೆ. ಪಕ್ಷ ಹಾಗೂ ದೇಶದ ವಿಚಾರ ಬಂದಾಗ ಒಂದಾಗಬೇಕು. ಒಂದು ಲೋಕಸಭಾ ಸ್ಥಾನ ಕಳೆದುಕೊಂಡರೆ ಮೋದಿಯವರನ್ನೇ ಕಳೆದುಕೊಂಡರಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಸರಿ ಮಾಡಲಾಗುತ್ತದೆ. ಇವೆಲ್ಲ ವಿಚಾರಗಳಿಂದ ಪಕ್ಷದಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ವಕ್ಫ್ ಆಸ್ತಿ ಅವರ ಅಪ್ಪನ ಆಸ್ತಿಯಲ್ಲ: ಶಾಸಕ ಯತ್ನಾಳ್​ ವಿರುದ್ಧ​ ಸಚಿವ ಜಮೀರ್ ವಾಗ್ದಾಳಿ

ನಿಶ್ಚಿತವಾಗಿ ಬದಲಾವಣೆಯಾಗಿ ಎಲ್ಲವೂ ಸ್ವಚ್ಛವಾಗಬೇಕು. ಪ್ರಧಾನಿ ಮೋದಿ ಅವರು ಕೇವಲ 6 ಗಂಟೆಗಳ ಕಾಲ ವಿಶ್ರಾಂತಿ ಮಾಡಿ ಇಡೀ ಜೀವನವನ್ನೇ ದೇಶಕ್ಕೆ ಸಮರ್ಪನೆ ಮಾಡಿದ್ದಾರೆ. ನಾವೆಲ್ಲ ಹೀಗೆ ಮಾಡಿಕೊಂಡು ಹೋದರೆ ಹೇಗೆ? ನಮಗೆ ಪೂರ್ಣ ಬಹುಮತ ಇಲ್ಲದಿದ್ದರೆ ಯಾವುದೇ ನಿರ್ಣಯ ತೆಗೆದುಕೊಳ್ಳಲು ಆಗಲ್ಲ. ಕಳೆದು ಬಾರಿ ನಮಗೆ ಬಹುಮತ ಇತ್ತು ಕಾಶ್ಮೀರದ 370ನೇ ಕಲಂ ತೆಗೆದೆವು. ರಾಮಮಂದಿರ ನಿರ್ಮಾಣ ಮಾಡಿ ಹಲವಾರು ಕಾನೂನುಗಳನ್ನು ಬದಲಾವಣೆ ಮಾಡಲಾಗಿದೆ. ನಮಗೆ ಬಹುಮತ ಇದ್ದಿದ್ದರಿಂದಲೇ ಇವೆಲ್ಲ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಈಗ ಪ್ರತಿಯೊಂದಕ್ಕೂ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು. ಭವಿಷ್ಯದಲ್ಲಿ ದೊಡ್ಡ ದೊಡ್ಡ ನಿರ್ಣಯಗಳನ್ನ ತೆಗೆದುಕೊಳ್ಳಬೇಕೆಂದರೆ ಎಲ್ಲರನ್ನ ಒಪ್ಪಿಗೆ ತೆಗೆದುಕೊಂಡು ಮಾಡುವಂತ ಪರಿಸ್ಥಿತಿ ಆಗುತ್ತದೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದ್ದಕ್ಕೆ ಮಿತ್ರ ಪಕ್ಷಗಳ ಒಪ್ಪಿಗೆ ಅನಿವಾರ್ಯ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.