ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಣ್ತಮ್ಮಾಸ್: ಕ್ವಾರಂಟೈನ್ ಬ್ಯಾರಕ್ನಲ್ಲಿ ರೇವಣ್ಣ ಸನ್ಸ್
ಹಾಸನ ಜಿಲ್ಲೆಯಲ್ಲಿ ರಾಜಕೀಯವಾಗಿ ಛಾಪು ಮೂಡಿಸಿದ್ದ ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗಿತ್ತಲೆ ಇವೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿಡ್ನಾಪ್ ಕೇಸ್ ಮೇಲೆ ರೇವಣ್ಣ ಕುಟುಂಬ ಕಾನೂನು ಕಂಟಕ ಎದುರಿಸುತ್ತಿದೆ. ಈಗಾಗಲೇ ಎಚ್‌ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಆಚೆ ಬಂದಿದ್ದು, ಇದೀಗ ರೇವಣ್ಣ ಸನ್ಸ್ ಒಂದೇ ಜೈಲಿನಲ್ಲಿದ್ದಾರೆ.
ಬೆಂಗಳೂರು, (ಜೂನ್ 24): ಅತ್ಯಾಚಾರ ಪ್ರಕರಣದಲ್ಲಿ ಎಸ್‌ಐಟಿ ವಿಧಿಸಿದ್ದ ಪ್ರಜ್ವಲ್ ರೇವಣ್ಣಗೆ (Prajwal Revanna) ಕೋರ್ಟ್ ಜುಲೈ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಪೊಲೀಸರು, ಪ್ರಜ್ವಲ್ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇನ್ನು ಸಲಿಂಗ ಕಾಮ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣ (Suraj Revanna) ಸಹ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗಾಗಲೇ ತಂದೆ ಎಚ್‌ಡಿ ರೇವಣ್ಣ ಜಾಮೀನಿನ ಮೇಲೆ ಈ ಜೈಲಿನಿಂದ ಆಚೆ ಬಂದಿದ್ದು, ಇದೀಗ ಪುತ್ರರಾದ ಸೂರಜ್ ಮತ್ತು ಪ್ರಜ್ವಲ್ ಒಂದೇ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದ ಕ್ವಾರಂಟೈನ್ ಬೇರೆ ಬೇರೆ ಬ್ಯಾರಕ್ ನಲ್ಲಿದ್ದಾರೆ.
ಇನ್ನು ಇಷ್ಟು ದಿನ ಎಸ್ಐಡಿ ಕಸ್ಟಡಿಯಲ್ಲಿದ್ದ ಪ್ರಜ್ವಲ್ಗೆ ಇಂದು ಕೋರ್ಟ್, ಜುಲೈ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಪ್ರಜ್ವಲ್ನನ್ನು ಪೊಲೀಸರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ತಂದು ಬಿಟ್ಟಿದ್ದಾರೆ. ಮತ್ತೊಂದೆಡೆ ಇದೀಗ ಕೋರ್ಟ್ ಸೂರಜ್ ರೇವಣ್ಣನನ್ನು ಸಿಐಡಿ ಕಸ್ಟಡಿಗೆ ನೀಡಿದೆ. ಹೀಗಾಗಿ ಸ್ವಲ್ಪ ಹೊತ್ತಿನಲ್ಲೇ ಸಿಐಡಿ ಅಧಿಕಾರಿಗಳು ಸೂರಜ್ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆದೊಯ್ಯಲಿದ್ದಾರೆ. ಬಳಿಕ ಪ್ರಜ್ವಲ್ ಒಬ್ಬರೇ ಪರಪ್ಪನ ಅಗ್ರಹಾರದಲ್ಲಿ ಇರಬೇಕಾಗಿದೆ. ಇನ್ನು ಇದೇ ಜೈಲಿನಲ್ಲಿ ಸ್ಯಾಂಡಲ್ವುಡ್ ಸ್ಟಾರ್ ದರ್ಶನ್ ಸಹ ಇದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎಂಬ ಪ್ರಕರಣದಲ್ಲಿ ಎಚ್.ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಅವರಿಗೂ ಎಸ್‌ಐಟಿ ನೋಟಿಸ್ ಕೊಟ್ಟು ಬಂಧನಕ್ಕೆ ಮುಂದಾಗಿತ್ತು. ಅಷ್ಟರಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಇದರಿಂದ ಭವಾನಿ ಬಂಧನದಿಂದ ಪಾರಾಗಿದ್ದರು. ಆದರೆ ಇವೆಲ್ಲವೂ ಸ್ವಲ್ಪ ತಣ್ಣಗಾದಂತೆ ಕಂಡು ಬರುತ್ತಿದ್ದ ಸಂದರ್ಭದಲ್ಲಿ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಬಂಧನವೂ ಆಗಿದೆ. ಇದು ಇಡೀ ಕುಟುಂಬಕ್ಕೆ ಆದ ಮತ್ತೊಂದು ಅಘಾತವಾಗಿದೆ.
ಸುಮಾರು ಎರಡು ದಶಕಗಳ ಕಾಲ ಹಾಸನ ಜಿಲ್ಲೆಯಲ್ಲಿ ರಾಜಕೀಯ ಭದ್ರ ಬುನಾದಿಯನ್ನೇ ನಿರ್ಮಿಸಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬ ಇದೀಗ ತವರು ಕ್ಷೇತ್ರದಲ್ಲೇ ಅಲುಗಾಡುತ್ತಿದೆ. ಹಾಸನ ಲೈಂಗಿಕ ಹಗರಣ ಪ್ರಕರಣ ಎಚ್‌ಡಿ ದೇವೇಗೌಡರ ಕುಟುಂಬದ ಸುದೀರ್ಘ ರಾಜಕೀಯ ಪ್ರಾಬಲ್ಯಕ್ಕೆ ಬಿದ್ದ ದೊಡ್ಡ ಏಟಾಗಿದೆ. ಈ ಪ್ರಕರಣದಲ್ಲಿ ತಮ್ಮ ತವರು ಕ್ಷೇತ್ರದ ರಾಜಕೀಯ ಭವಿಷ್ಯವನ್ನು ಕಳೆದುಕೊಳ್ಳುವ ಭೀತಿಯಲ್ಲಿ ದಳಪತಿಗಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ