ಬೆಂಗಳೂರು: ಕರ್ನಾಟಕದಲ್ಲಿ ನಿಗದಿಯಂತೆ ಜೂನ್ ತಿಂಗಳ ಆರಂಭದಲ್ಲಿ ಮುಂಗಾರು ಜೋರಾಗಿಯೇ ಇತ್ತಾದರೂ ತಿಂಗಳಾಂತ್ಯ ಮಳೆ ತಗ್ಗುತ್ತಾ ಬಂದು, ಬಿರು ಬೇಸಿಗೆ ಅನುಭವ ಕೊಡತೊಡಗಿತ್ತು. ಅದರಲ್ಲೂ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಲ್ಲಿ ಸುಡು ಬಿಸಿಲು ನೆಲೆಸಿತ್ತು. ಆದರೆ ಮುಂಗಾರು ಮತ್ತೆ ವೇಗ ಪಡೆದಿದ್ದು, ನಿನ್ನೆ ಇಡೀ ರಾತ್ರಿ ಜೋರು ಮಳೆಯಾಗಿದೆ. ಇದು ಬಹುತೇಕ ಎಲ್ಲೆಡೆಯೂ ಅನುಭವಕ್ಕೆ ಬಂದಿದೆ. ಇನ್ನು ದೇಶದಲ್ಲಿ ಈ ಬಾರಿಯ ಮುಂಗಾರು ನೋಡಿದಾಗ ಅನೇಕ ರಾಜ್ಯಗಳಲ್ಲಿ ಜೋರು ಮಳೆಯೇ ಆಗಿತ್ತು. ಆದರೆ ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ಬೇಸಿಗೆ ಅನುಭವ ಕಾಡತೊಡಗಿತ್ತು. ದಿಲ್ಲಿಯಲ್ಲಿ ಇನ್ನೂ ಬಿಸಿಲು ಜೋರಾಗಿಯೇ ಇದೆ. ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಸೈಕ್ಲೋನ್ ಉಂಟಾಗಿದ್ದು ಪಂಜಾಬ್, ದಿಲ್ಲಿ, ರಾಜಸ್ಥಾನಗಳಲ್ಲಿ ಮಳೆಯಾಗುವ ಲಕ್ಷಣಗಳಿವೆ.
ಕಳೆದ 24 ಗಂಟೆಗಳಲ್ಲಿ ಕೇರಳ, ಕರ್ನಾಟಕ, ಆಂಧ್ರ, ತಮಿಳುನಾಡು ಕರಾವಳಿ ಭಾಗಗಳಲ್ಲಿ ಮತ್ತು ಕೊಂಕಣ ಭಾಗಗಳಲ್ಲಿ ಹಗುರ ಮತ್ತು ಸಾಧಾರಣ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಕರಾವಳಿ ಭಾಗಗಳಲ್ಲಿ ಮತ್ತು ಕೊಂಕಣ ಭಾಗಗಳಲ್ಲಿ ಹಗುರ ಮತ್ತು ಸಾಧಾರಣ ಮಳೆಯಾಗಲಿದೆ. ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿಯೂ ಇಂದು ಮಳೆ ಆರ್ಭಟಿಸಲಿದೆ.
ನಿನ್ನೆ ಭಾನುವಾರ ತಂಪೆರೆದಿರುವ ಮಳೆ, ಜುಲೈ 9 ರವರೆಗೂ ದಿನಾ ಸಂಜೆ ವೇಳೆ ಇದೇ ರೀತಿ ಸುರಿಯಲಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕ ಹಾಗೂ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮಳೆ ಅಬ್ಬರಿಸಲಿದೆ.ಅಲ್ಲಲ್ಲಿ ಮಳೆಯ ಆರ್ಭಟ ತೀವ್ರವಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಮತ್ತೆ ಮುಂಗಾರು ಜೋರು, ಗರಿಗೆದರಲಿದೆ ಕೃಷಿ ಚಟುವಟಿಕೆ
ಮುಂಗಾರು ಆರಂಭವಾಗುತ್ತಿದ್ದಂತೆಯೇ ಸಹಜವಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೆಚ್ಚೂ ಕಡಿಮೆ ಜೂನ್ ಮಧ್ಯದವರೆಗೆ ಭಾರೀ ಪ್ರಮಾಣದಲ್ಲಿ ಸುರಿದಿದ್ದ ಮಳೆ ನಂತರ ಕ್ರಮೇಣ ಇಳಿಕೆಯಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ನೀಡಿರುವ ಸೂಚನೆ ಪ್ರಕಾರ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಜುಲೈ 9ರವರೆಗೂ ವರುಣನ ಆರ್ಭಟ ಮುಂದುವರೆಯುವ ಸಾಧ್ಯತೆಯಿದೆ.
ಮಲೆನಾಡು ಭಾಗವಾದ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 5ರವರೆಗೆ ಉತ್ತಮ ಮಳೆಯಾಗಲಿದೆ. ಮೂರ್ನಾಲ್ಕು ದಿನಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಾಗಿದ್ದ ಮಳೆ ಅಲ್ಲಿ ಇಂದಿನಿಂದ ಕೊಂಚ ಕಡಿಮೆಯಾಗಲಿದೆ. ಆದರೆ, ನೈರುತ್ಯ ಮುಂಗಾರು ದುರ್ಬಲವಾದ್ದರಿಂದ ಕರಾವಳಿಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇನ್ನೆರಡು ದಿನಗಳ ಕಾಲ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
Karnataka Weather: ಹವಾಮಾನ ವರದಿ- ಮುಂದಿನ 5 ದಿನ ವರುಣನ ಆರ್ಭಟ.. ಕರ್ನಾಟಕ ಸೇರಿ ಅನೇಕ ರಾಜ್ಯದಲ್ಲಿ ಮಳೆ
(monsoon 2021 Karnataka weather update and forecast for july 5 across karnataka)
Published On - 9:13 am, Mon, 5 July 21