ಬೆಂಗಳೂರು: ನೈರುತ್ಯ ಮುಂಗಾರು ಕರ್ನಾಟಕವನ್ನು ಪ್ರವೇಶಿಸಿದೆ. ಆದ ಕಾರಣ ಇಂದಿನಿಂದ ಮಳೆ ಆರ್ಭಟ ಹೆಚ್ಚಾಗುವ ಸಾಧ್ಯತೆಯಿದ್ದು, ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಧಿಕ ಪ್ರಮಾಣದ ಮಳೆಯನ್ನು ನಿರೀಕ್ಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರವಾಗಿರುವುದರಿಂದ ಇನ್ನೂ 2 ದಿನಗಳ ಕಾಲ ಮಳೆ ಮುಂದುವರೆಯುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಹಾಗೂ ನಾಳೆ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಸುರಿಯಲಿದ್ದು, ಬೀದರ್, ಗದಗ, ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಕೋಲಾರ, ತುಮಕೂರು, ಹಾಸನ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು ಇಂದು ಮುಂಜಾನೆ ಕೂಡಾ ತುಂತುರು ಮಳೆಯ ಸಿಂಚನವಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಮಳೆಯ ಅಬ್ಬರಕ್ಕೆ ಐವರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ. ವಿಜಯಪುರ, ಬೆಳಗಾವಿ, ಗದಗ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಇಂದು ಭಾರೀ ಮಳೆ ಸುರಿಯಬಹುದೆಂದು ಅಂದಾಜಿಸಲಾಗಿದೆ. ಜೂನ್ 3ರಂದು ಕೇರಳಕ್ಕೆ ಮುಂಗಾರಿನ ಪ್ರವೇಶವಾಗಿರುವ ಕಾರಣ ಕರ್ನಾಟಕದ ಕರಾವಳಿ ತೀರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಅಂತೆಯೇ ಜೂನ್ 6ರವರೆಗೆ ಕರ್ನಾಟಕದ ವಿವಿಧೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಜಾಸ್ತಿಯಾದ ಹಿನ್ನೆಲೆ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು, ಜೂನ್ ಮೂರನೇ ವಾರದ ವೇಳೆಗೆ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸೂಚನೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಇಂದು ಕೇರಳ, ಅಸ್ಸಾಂ, ಮೇಘಾಲಯ, ಮಿಜೋರಾಂ, ತೆಲಂಗಾಣ, ರಾಯಲಸೀಮೆ, ಗೋವಾ, ಗುಜರಾತ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶ ಸೇರಿದಂತೆ ಇನ್ನೂ ಕೆಲವೆಡೆ ಮಳೆ ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಆರಂಭವಾದ ನಂತರ ಅದರ ಪರಿಣಾಮದ ಬಗ್ಗೆ ಒಂದು ಅಂದಾಜು ಸಿಗುತ್ತದೆ. ಅದರಂತೆ ಈ ಬಾರಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಮಳೆಯ ಆರ್ಭಟವಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
Bengaluru Rain: ಜೂನ್ 3, ಕಳೆದ 7 ವರ್ಷಗಳ ಜೂನ್ ತಿಂಗಳುಗಳಲ್ಲೇ ಅತಿಹೆಚ್ಚು ಮಳೆ ಸುರಿದ ದಿನ