ಬೆಳಗಾವಿ, ಸೆಪ್ಟೆಂಬರ್ 06: ತಮ್ಮ 45ನೇ ವಯಸ್ಸಿನಲ್ಲಿ ಮಗನೊಂದಿಗೆ ತಾಯಿ (Mother-Son) ಹೊಸ ದಾಖಲೆ ಬರೆದಿರುವಂತಹ ಅಪರೂಪದ ಸಾಧನೆ ಮಾಡುವ ಮೂಲಕ ಎಲ್ಲರ ಹುಬ್ಬೆರಿಸುವಂತೆ ಮಾಡಿದೆ. ನಿರಂತರ ತಾಯಿ ಮತ್ತು ಮಗ ಸತತ 12 ಗಂಟೆಗಳ ಕಾಲ ಈಜುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಅದು ಕೂಡ ಒಂದೇ ದಿನ ಎರಡೆರೆಡು ದಾಖಲೆ ಮಾಡಿ ಬೆಳಗಾವಿಯ ಅಮ್ಮ-ಮಗ ಗಮನ ಸೆಳೆದಿದ್ದಾರೆ.
ಬೆಳಗಾವಿ ಈಜು ಪಟುಗಳಾದ ಜ್ಯೋತಿ ಎಸ್ ಕೋರಿ ಮತ್ತು ಅವರ ಪುತ್ರ ವಿಹಾನ್ ಎಸ್. ಕೋರಿ ವಿನೂತನ ಸಾಧನೆ ಮೆರೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಜ್ಯೋತಿ ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದು, ಪುತ್ರ ವಿಹಾನ್ ಸೆಂಟ್ ಕ್ಸೇವಿಯರ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಲ್ಲಿ ಊಟ ಹಾಕಿಸಿದ್ದ ಅಜ್ಜಿಯನ್ನು ಭೇಟಿಯಾದ ಸಿಎಂ: ಅಕ್ಕಾತಾಯಿ ಬೇಡಿಕೆ ಇಟ್ಟಿದ್ದೇನು ಗೊತ್ತಾ?
ಬೆಳಗಾವಿಯ ಕೆಎಲ್ಇ ಈಜುಕೋಳದಲ್ಲಿ ಸ್ವಿಮ್ಮರ್ಸ್ ಕ್ಲಬ್ ಆಫ್ ಬೆಲಗಾಮ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್ ಬೆಲಗಾಮ್ ವತಿಯಿಂದ ಲಾಂಗೆಸ್ಟ್ ನಾನ್ ಸ್ಟಾಪ್ ಸ್ವಿಮ್ಮಿಂಗ್ ರಿಲೇ ಏರ್ಪಡಿಸಲಾಗಿತ್ತು. ಬೆಳಿಗ್ಗೆ 5 ಗಂಟೆ 8 ನಿಮಿಷಕ್ಕೆ ಆರಂಭವಾದ ರಿಲೇ ಸತತ 12 ಗಂಟೆ 22 ನಿಮಿಷ ನಡೆಯಿತು. ಮಗ ವಿಹಾನ್ 18 ಕಿ.ಮೀ. ಮತ್ತು ತಾಯಿ ಜ್ಯೋತಿ 12 ಕಿ.ಮೀ. ಲೀಲಾಜಾಲವಾಗಿ ಈಜಾಡಿದ್ದಾರೆ. ಆ ಮೂಲಕ ಮಹಿಳೆಯರಲ್ಲಿ ಫಿಟ್ನೆಸ್ ಅರಿವು ಮೂಡಿಸಲು ಹೊಸ ಸಾಹಸ ಮಾಡಿದ್ದಾರೆ.
ಇನ್ನು ಮಳೆಯ ನಡುವೆಯೂ ಛಲ ಬಿಡದೇ ತಮ್ಮ ಗುರಿ ತಲುಪಿ ಸಾಧನೆಯ ಶಿಖರವನ್ನು ಏರಿದ್ದಾರೆ. ನೆರೆದಿದ್ದ ಜನರು ಬೆಳಿಗ್ಗೆಯಿಂದ ಚಪ್ಪಾಳೆ ತಟ್ಟಿ ಇಬ್ಬರನ್ನೂ ಹುರುದುಂಬಿಸಿದ್ದಾರೆ. ಬಳಿಕ ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರತಿನಿಧಿ ರೇಖಾ ಸಿಂಗ್ ಅವರು ಹೊಸ ಇತಿಹಾಸ ಬರೆದ ವಿಹಾನ್ ಮತ್ತು ಜ್ಯೋತಿ ಅವರಿಗೆ ಪದಕ ಪ್ರದಾನ ಮಾಡಿದರು.
ಪದಕ ಪ್ರದಾನ ಬಳಿಕ ಈಜುಪಟು ಜ್ಯೋತಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, 2018ರಲ್ಲಿ ನಾನು ಈಜು ಕಲಿತಿದ್ದೇನೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಅನೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ದಾಖಲೆ ಮಾಡಿದ್ದು, ತುಂಬಾ ಖುಷಿಯಾಗುತ್ತಿದೆ. ಭವಿಷ್ಯದಲ್ಲಿ ಇಬ್ಬರೂ ಕೂಡಿಕೊಂಡು ಸೀ ಸ್ವಿಮ್ಮಿಂಗ್ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ತಮ್ಮ ಕನಸು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ; ಅಧಿಕಾರಿಗಳ ಎಡವಟ್ಟಿಗೆ 20 ಕೋಟಿ ಠೇವಣಿಗೆ ಧಾರವಾಡ ಹೈಕೋರ್ಟ್ ಆದೇಶ
ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಬರೆದ ವಿಹಾನ್ ಮಾತನಾಡಿ, ಎಷ್ಟೇ ಕಷ್ಟ ಆದರೂ ನನ್ನ ಗುರಿ ತಲುಪಬೇಕು ಎಂಬ ಉದ್ದೇಶದಿಂದ ಮಳೆಯನ್ನೂ ಲೆಕ್ಕಿಸದೇ ಈಜಿದ್ದೇನೆ. ನನ್ನ ತಾಯಿ ಜೊತೆಗೆ ಸಾಧನೆ ಮಾಡಿದ್ದು, ನನಗೆ ತುಂಬಾ ಸಂತೋಷ ತಂದಿದೆ. ನನಗೆ ಅವರು ಪ್ರೇರಣೆ ಎಂದು ಅಭಿಪ್ರಾಯ ಪಟ್ಟಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:53 pm, Fri, 6 September 24