ದಾವಣಗೆರೆ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ವಿವಿಧ ರೀತಿಯಲ್ಲಿ ಸಹಕಾರ ನೀಡಿ, ಕಾರ್ಯಗಳಿಂದ ಜನರ ಮನಗೆದ್ದಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಂದು (ಜೂನ್ 16) ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಅಂದುಕೊಳ್ಳುತ್ತಿರುವ ವೇಳೆಯಲ್ಲಿ ಎಂ.ಪಿ. ರೇಣುಕಾಚಾರ್ಯ ಮತ್ತೆ ಬೆಂಗಳೂರಿಗೆ ಬಂದು ತಲುಪಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡಲು ರೇಣುಕಾಚಾರ್ಯ ಬೆಂಗಳೂರು ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವಾರು ಶಾಸಕರ ನಿರಂತರ ಸಂಪರ್ಕದಲ್ಲಿ ಇರುವ ರೇಣುಕಾಚಾರ್ಯ, ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೊರೊನಾ ಪರಿಸ್ಥಿತಿ ನಿರ್ವಹಣೆ ಬಗ್ಗೆ ಇಂದು ಸಭೆಯಲ್ಲಿ ಮಾತನಾಡಿದ್ದೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ನಳಿನ್ ಕುಮಾರ್ ಕಟೀಲ್ ಸಭೆಯ ಬಳಿಕ ಹೇಳಿದ್ದರು.
ಸಿಎಂ, ಸಚಿವರ ಜೊತೆಗೆ ಉಸ್ತುವಾರಿ ಅರುಣ್ ಸಿಂಗ್ ಸಭೆ ನಡೆಸಿದ್ದರು. ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಅರುಣ್ ಕುಮಾರ್ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯ ಸಚಿವರು ಸೇರಿ 9 ಸಚಿವರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಉಳಿದಂತೆ ಯಾವುದೇ ಸಚಿವರೂ ಮಾತನಾಡಿಲ್ಲ. ಸಭೆಗೆ ತಡವಾಗಿ ಬಂದ ಯೋಗೇಶ್ವರ್ ಸಹ ಮಾತಾಡಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
30 ಶಾಸಕರ ಪ್ರತ್ಯೇಕ ಭೇಟಿ?
ನಾಳೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಅರುಣ್ ಸಿಂಗ್ರನ್ನು, ಸಿ.ಪಿ. ಯೋಗೇಶ್ವರ್ ಪ್ರತ್ಯೇಕವಾಗಿ ಭೇಟಿಯಾಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಅರುಣ್ ಸಿಂಗ್ ಜೊತೆ ಸಚಿವ ಯೋಗೇಶ್ವರ್ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ಅರುಣ್ ಸಿಂಗ್ ಭೇಟಿಗೆ 30ಕ್ಕೂ ಹೆಚ್ಚು ಬಿಜೆಪಿ ಶಾಸಕರು ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ಬೆಳಗ್ಗೆ 9ಗಂಟೆಗೆ ಶಾಸಕರ ಭೇಟಿ ಆರಂಭವಾಗಲಿದೆ. ಕುಮಾರಕೃಪಾ ಅತಿಥಿಗೃಹದಲ್ಲಿ ಅರುಣ್ ಸಿಂಗ್ ಭೇಟಿ ನಡೆಯಲಿದೆ.
ಈ ನಡುವೆ, ಶಾಸಕರ ಭವನದಲ್ಲಿ ಸಭೆ ಸೇರಿದ್ದ ಬಿಜೆಪಿ ಕೆಲ ಶಾಸಕರು ಯತ್ನಾಳ್ ಕೊಠಡಿಯಲ್ಲಿ ಸಂಜೆ ಸಭೆ ಸೇರಿದ್ದರು ಎಂದೂ ಮಾಹಿತಿ ದೊರಕಿದೆ. ಬೆಲ್ಲದ್ ಸೇರಿದಂತೆ 7-8 ಶಾಸಕರು ಸೇರಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ‘ಯಡಿಯೂರಪ್ಪರನ್ನು ಇಟ್ಟುಕೊಳ್ತೀರಾ ಕಿತ್ತುಹಾಕ್ತೀರಾ ಬೇಗ ನಿರ್ಧಾರ ಮಾಡಿ; ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ’
ಮುಖ್ಯಮಂತ್ರಿ ಬದಲಾವಣೆ ಇಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ