ದಾವಣಗೆರೆ: ಮಹಾಮಾರಿ ಕೊರೊನಾ ಭೀಕರತೆಯ ನಡುವೆ ಜೀವನ ಸಾಗಿಸುವುದು ಕಷ್ಟವಾಗಿದೆ. ಸೋಂಕಿತರು ಧೈರ್ಯ ಕಳೆದುಕೊಂಡು ಜೀವನವೇ ಮುಗಿತಾ ಎಂಬಂತೆ ಚಿಂತೆಗೀಡಾಗುತ್ತಿದ್ದಾರೆ. ಇದರ ನಡುವೆ ಶಾಸಕ ಎಂಪಿ ರೇಣುಕಾಚಾರ್ಯ ಜನಪ್ರತಿನಿಧಿಯಾಗಿ ಜನ ಸೇವೆಯಲ್ಲಿ ತೊಡಗಿದ್ದಾರೆ. ಒಂದಲ್ಲ ಒಂದು ಸೇವಾ ಕಾರ್ಯದಲ್ಲಿ ಭಾಗಿಯಾಗಿ ಸೋಂಕಿತರ ಬಗ್ಗೆ ಕಾಳಜಿ ವಹಿಸುತ್ತಾ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೊವಿಡ್ ಕೇರ್ ಸೆಂಟರ್ನಲ್ಲಿ ಎಂಪಿ ರೇಣುಕಾಚಾರ್ಯ ವಾಸ್ತವ್ಯ ಹೂಡಿದ್ದಾರೆ. ಕೊವಿಡ್ ಕೇರ್ ಸೆಂಟರ್ನಲ್ಲಿ ಪ್ರತೇಕ ಕೊಠಡಿಯಲ್ಲಿ ವಾಸ್ತವ್ಯ ಮಾಡಿದ್ದು ಸೋಂಕಿತರಿಗಾಗಿಯೇ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೊವಿಡ್ ಸೆಂಟರ್ನಲ್ಲಿ ವಾಸ್ತವ್ಯ ಹೂಡುವ ಮೂಲಕ ಸೋಂಕಿತರಲ್ಲಿ ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ. ಇನ್ನು ಇಂದಿನಿಂದ ಮೂರು ದಿನಗಳ ಕಾಲ ವಾಸ್ತವ್ಯ ಮಾಡಲಿದ್ದು ಸೋಂಕಿತರ ಕಷ್ಟ-ಸುಖಗಳಲ್ಲಿ ಭಾಗಿಯಾಗಲಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿಯಲ್ಲಿರುವ ಕೊವಿಡ್ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳನ್ನು ಹೇಳಿಕೊಟ್ಟಿದ್ದಾರೆ. ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಸೋಂಕಿತರಿಗೂ ಮಾಡಿಸಿದ್ದಾರೆ. ಯೋಗ ಮಾಡುವವರಿಗೆ ರೋಗವಿಲ್ಲ ಎಂಬ ಸಂದೇಶ ಸಾರಿದ್ದಾರೆ. ಹಾಗೂ ಪ್ರತಿಯೊಬ್ಬರೂ ಯೋಗಾಸನ ಮೈ ಗೂಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಇನ್ನು ರೇಣುಕಾಚಾರ್ಯ ಕೊವಿಡ್ ಕೇರ್ ಸೆಂಟರ್ನಲ್ಲಿ ಚಪಾತಿ ತಯಾರಿಸಿದ್ದಾರೆ. ಅರಬಗಟ್ಟೆಯ ಕೊವಿಡ್ ಕೇರ್ ಸೆಂಟರ್ನಲ್ಲಿ ಚಪಾತಿ ಲಟ್ಟಿಸಿ, ಚಪಾತಿ ಸುಟ್ಟಿದ್ದಾರೆ. ಹಾಗೂ ಸೋಂಕಿತರಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಿ, ಗುಣಮಟ್ಟದ ಆಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಶಾಸಕರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕೊವಿಡ್ ತಡೆಯಲು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದೇವೆ, ಸಿಎಂ ಯಡಿಯೂರಪ್ಪರ ಜತೆ ನಾವಿದ್ದೇವೆ: ಶಾಸಕ ರೇಣುಕಾಚಾರ್ಯ
Published On - 9:01 am, Fri, 4 June 21