ಬೆಂಗಳೂರು: ಕೊರೊನಾ ಎರಡನೇ ಅಲೆಯ ಸಂಕಷ್ಟ ಹಾಗೂ ಮೂರನೇ ಅಲೆ ಬರಬಹುದೆನ್ನುವ ಭೀತಿಯ ನಡುವೆ ರಾಜ್ಯ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕೋ, ಬೇಡವೋ ಎಂಬ ಗೊಂದಲಕ್ಕೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ತಜ್ಞರಾದಿಯಾಗಿ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದುಪಡಿಸಿದ ಕೇಂದ್ರ ಸರ್ಕಾರದ ನಡೆಯನ್ನೇ ಅನುಸರಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ. ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದಲೂ ವರದಿ ಸಲ್ಲಿಕೆಯಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕಾ? ಬೇಡವಾ? ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಏರ್ಪಡಿಸಿದ ಸಮೀಕ್ಷೆಯಲ್ಲಿ ಪರೀಕ್ಷೆ ಬೇಡವೆಂಬ ಅಭಿಪ್ರಾಯಕ್ಕೆ ಪುಷ್ಠಿ ಸಿಕ್ಕಿದೆ. ಈ ಕಾರಣದಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಗೊಳಿಸುವಂತೆ ವರದಿ ಸಲ್ಲಿಸಲಾಗಿದ್ದು, ಸಿಬಿಎಸ್ಇ ಮಾದರಿಯಲ್ಲಿ ಪರ್ಯಾಯ ವ್ಯವಸ್ಥೆ ಸಿದ್ಧಪಡಿಸುವಂತೆ ಶಿಫಾರಸು ಮಾಡಲಾಗಿದೆ. ಈ ಅಧ್ಯಯನದ ವರದಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸಲ್ಲಿಸಲಾಗಿದ್ದು, ಇಂದು ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಸಚಿವರು ಯಾವ ನಿರ್ಧಾರಕ್ಕೆ ಬರಲಿದ್ದಾರೆಂದು ತಿಳಿಯಲಿದೆ.
ಕೊರೊನಾ ಎರಡನೇ ಅಲೆ ಸಂಕಷ್ಟ ಕಾಲದಲ್ಲಿ ಪರೀಕ್ಷೆ ಆಯೋಜಿಸುವುದು ಶಿಕ್ಷಣ ಇಲಾಖೆ ಪಾಲಿಗೆ ನಿಜಕ್ಕೂ ಸವಾಲಿನ ವಿಷಯವಾಗಿದ್ದು, ಮೊದಲ ಅಲೆಗಿಂತಲೂ ಈಗಿನ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಸೋಂಕಿಗೆ ಸಂಬಂಧಿಸಿದ ಅಂಕಿ ಅಂಶಗಳು ತಿಳಿಸಿವೆ. ಮೊದಲ ಅಲೆ ವೇಳೆಯಲ್ಲಿ ರಾಜ್ಯದಲ್ಲಿ ಮಾರ್ಚ್ನಿಂದ ಸೆಪ್ಟೆಂಬರ್ ತನಕ 19,378 ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಎರಡನೇ ಅಲೆಯಲ್ಲಿ ಬೆಂಗಳೂರು ಒಂದರಲ್ಲೇ ಮಾರ್ಚ್ 1 ರಿಂದ ಮೇ 6 ರ ವರೆಗೆ 10 ವರ್ಷದೊಳಗಿನ 19,401 ಮಕ್ಕಳಿಗೆ ಸೋಂಕು ದೃಢಪಟ್ಟಿದೆ.
ಅಂದರೆ ಕಳೆದ ಬಾರಿ ಮಾರ್ಚ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಕಂಡುಬಂದ ಸೋಂಕಿತ ಮಕ್ಕಳ ಪ್ರಮಾಣಕ್ಕಿಂತಲೂ ಹೆಚ್ಚು ಮಕ್ಕಳು ಈ ಬಾರಿ ಮಾರ್ಚ್ನಿಂದ ಮೇ ತಿಂಗಳ ಒಳಗೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮೂರನೇ ಅಲೆ ಮಕ್ಕಳಿಗೆ ಮಾರಕ ಎಂಬ ಊಹೆಯ ನಡುವೆ ಎರಡನೇ ಅಲೆಯಲ್ಲೇ ಈ ಮಟ್ಟಿಗಿನ ಅವಾಂತರ ಆಗಿರುವುದು ಚಿಂತೆಗೆ ಕಾರಣವಾಗಿದೆ. ಅಲ್ಲದೇ, ಸೋಂಕಿಗೆ ಒಳಗಾದ ಶೇ.3 ರಿಂದ ಶೇ.5 ರಷ್ಟು ಮಕ್ಕಳಿಗೆ ತೀವ್ರ ರೋಗಲಕ್ಷಣ ಗೋಚರವಾಗುತ್ತಿದೆ. ಬೆಂಗಳೂರು ನಗರದಲ್ಲಿ ಮೊದಲ ಅಲೆಯಲ್ಲಿ 22 ಮಕ್ಕಳು ಸಾವಿಗೀಡಾಗಿದ್ದರೆ ಎರಡನೇ ಅಲೆಯಲ್ಲಿ ಈಗಾಗಲೇ 25ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಜತೆಗೆ ರಾಜ್ಯದಲ್ಲಿ 600ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡಿದ್ದು, ಸುರಕ್ಷಿತವಾಗಿ ಪರೀಕ್ಷೆ ಆಯೋಜಿಸುವುದು ರಾಜ್ಯ ಶಿಕ್ಷಣ ಇಲಾಖೆ ಪಾಲಿಗೆ ಸವಾಲಿನ ವಿಷಯವಾಗಿದೆ.