SSLC Exams 2021: ಎಸ್ಎಸ್ಎಲ್ಸಿ ಪರೀಕ್ಷೆ ಬೇಕೆ ಬೇಡವೇ? ವಿದ್ಯಾರ್ಥಿ, ಪಾಲಕರು ಮತ್ತು ಶಿಕ್ಷಕರ ಸಮೀಕ್ಷೆ ನಡೆಸಿದ ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆಯ ಸಮೀಕ್ಷೆಯಲ್ಲಿ 16,111 ಮಕ್ಕಳು ಪರೀಕ್ಷೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, 5,474 ವಿದ್ಯಾರ್ಥಿಗಳು ಪರೀಕ್ಷೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಇಲಾಖೆ ಜಿಲ್ಲೆಯ ಮಕ್ಕಳು, ಪೋಷಕರು, ಶಿಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಪರೀಕ್ಷೆ ನಡೆಸಬೇಕೇ ಅಥವಾ ನಡೆಸಬಾರದೇ ಎಂಬ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು, ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ತರಗತಿಗೆ 20,696 ಮಕ್ಕಳ ನೊಂದಣಿ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ಸಮೀಕ್ಷೆಯಲ್ಲಿ 16,111 ವಿದ್ಯಾರ್ಥಿಗಳು ಪರೀಕ್ಷೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, 5,474 ವಿದ್ಯಾರ್ಥಿಗಳು ಪರೀಕ್ಷೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ 1,695 ಜನ ಶಿಕ್ಷಕರು ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದು, 544 ಶಿಕ್ಷಕರು ಪರೀಕ್ಷೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಪೋಷಕರ ಬಳಿಯೂ ಸರ್ವೆ ನಡೆಸಲಾಗಿದ್ದು, ಜಿಲ್ಲೆಯ 16,555 ಪೋಷಕರು ಪರೀಕ್ಷೆ ನಡೆಸುವಂತೆ ಅಭಿಪ್ರಾಯ ತಿಳಿಸಿದ್ದಾರೆ. 5,533 ಪೋಷಕರು ಪರೀಕ್ಷೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯ ವರದಿಯನ್ನು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಆಯುಕ್ತರಿಗೆ ಕಳಸಿದ್ದೇವೆ ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ವಿಚಾರವಾಗಿ ನಾಳೆ (ಮೇ 3 ರಂದು) ಬೆಳಗ್ಗೆ 10 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಗಳ ಬಗ್ಗೆ ಅತ್ಯಂತ ಮಹತ್ವದ ನಿರ್ಧಾರವನ್ನು ಘೋಷಿಸುವ ಸಂಭವವಿದೆ. ಇಂದು ಸಿಎಂ ಯಡಿಯೂರಪ್ಪ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯು ಪರೀಕ್ಷೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟದಿಂದ ಮನವಿ ಸಲ್ಲಿಸಲಾಗಿದೆ. ಕಾಲೇಜು ಹಂತದಲ್ಲೇ ಪರೀಕ್ಷೆ ನಡೆಸುವಂತೆಯೂ ಸಲಹೆ ನೀಡಲಾಗಿದ್ದು, ಆಯಾ ಕಾಲೇಜುಗಳಲ್ಲೇ ಪರೀಕ್ಷೆ ನಡೆಸಿ ಫಲಿತಾಂಶ ನೀಡಬೇಕು. ಹಿಂದಿನ ವರ್ಷ ಯಶಸ್ವಿಯಾಗಿ SSLC ಪರೀಕ್ಷೆ ನಡೆದಿದೆ. ಈಗ ಮತ್ತಷ್ಟು ಸೂಕ್ತ ಕ್ರಮಗಳೊಂದಿಗೆ ಪರೀಕ್ಷೆ ನಡೆಸಬಹುದು ಎಂದು ಸಲಹೆ ನೀಡಲಾಗಿದೆ.
ಇದನ್ನೂ ಓದಿ: Ugliest Language of India: ಕನ್ನಡಿಗರ ಕ್ಷಮೆ ಕೇಳಿದ ಗೂಗಲ್; ಕನ್ನಡದಲ್ಲೇ ಟ್ವೀಟ್ ಮಾಡಿ ತಪ್ಪೊಪ್ಪಿಕೊಂಡ ಸಂಸ್ಥೆ
(Education department conducts survey about SSLC exam 2021 in Koppal)
Published On - 10:29 pm, Thu, 3 June 21