ಮಂಡ್ಯ: ಲೊಗೋ ಮತ್ತು ಟ್ರೇಡ್ಮಾರ್ಕ್ ಕೇರಳ ರಾಜ್ಯದ ಪಾಲಾದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಗೆ ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ ಎಂದು ಹೆಸರಿಡುವಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಮನವಿ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿರುವ ಅವರು, ಕನ್ನಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆಗೆ ಹೊಸ ಹೆಸರು ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಲೋಗೊ ಕರ್ನಾಟಕದ ಕೈ ತಪ್ಪಿ, ಕೇರಳ ಪಾಲಾಗಿದೆ. ಕೆಎಸ್ಆರ್ಟಿಸಿ- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಂಬ ಹೆಸರಿನಲ್ಲಿ ಕರ್ನಾಟಕದ ಸಾರಿಗೆ ಬಸ್ಗಳು ಸಂಚರಿಸುತ್ತಿದ್ದವು. ಜೊತೆಗೆ, ಕೇರಳ ರಾಜ್ಯದಲ್ಲೂ ಕೆಎಸ್ಆರ್ಟಿಸಿ ಎಂಬ ಅದೇ ಹೆಸರಿನಲ್ಲಿ ಬಸ್ಗಳ ಸಂಚಾರ ನಡೆಯುತ್ತಿತ್ತು. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಹೆಸರಿನಲ್ಲಿ ಅಲ್ಲಿನ ಬಸ್ಗಳು ಸಂಚಾರ ಮಾಡುತ್ತಿದ್ದವು.
ಎರಡೂ ರಾಜ್ಯದ ಸಾರಿಗೆ ಬಸ್ಗಳು ‘ಕೆಎಸ್ಆರ್ಟಿಸಿ’ ಎಂಬ ಒಂದೇ ಟ್ರೇಡ್ ಮಾರ್ಕ್ ಬಳಸುತ್ತಿದ್ದವು. 2014ರಲ್ಲಿ ಈ ಟ್ರೇಡ್ ಮಾರ್ಕ್ ಬಳಸದಂತೆ ಕೇರಳಕ್ಕೆ ಕರ್ನಾಟಕ ಸೂಚನೆ ನೀಡಿತ್ತು. ಈ ಬಗ್ಗೆ ಕೇರಳಕ್ಕೆ ನೋಟಿಸ್ ಕೂಡ ಜಾರಿ ಮಾಡಿತ್ತು. ಅಷ್ಟೇ ಅಲ್ಲದೆ, ಕೇರಳ ಸರ್ಕಾರ ಟ್ರೇಡ್ ಮಾರ್ಕ್ಗಳ ರಿಜಿಸ್ಟ್ರಾರ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು.
ಕೇರಳ ಸರ್ಕಾರ ಆ ಸಂದರ್ಭ ಟ್ರೇಡ್ ಮಾರ್ಕ್ಗಳ ರಿಜಿಸ್ಟ್ರಾರ್ಗೆ ಅರ್ಜಿ ಸಲ್ಲಿಸಿತ್ತು. ಸುದೀರ್ಘ 8 ವರ್ಷಗಳಿಂದ ನಡೆದಿದ್ದ ಕಾನೂನು ಹೋರಾಟ ನಡೆದಿತ್ತು. ಕೊನೆಗೆ ಅಂತಿಮವಾಗಿ ಕೇರಳಕ್ಕೆ KSRTC ಟ್ರೇಡ್ಮಾರ್ಕ್ ಲಭಿಸಿದೆ. ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ ಕೇರಳ ರಾಜ್ಯಕ್ಕೆ ಒಲಿದ ಬಗ್ಗೆ ಕೇರಳ ರಸ್ತೆ ಸಾರಿಗೆ ಸಂಸ್ಥೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಪ್ರತಿಕ್ರಿಯೆ
ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ಕೇರಳ ಪಾಲಾದ ವಿಚಾರವಾಗಿ ಟಿವಿ9ಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಆದರೆ, ನಮಗೆ ಯಾವುದೇ ರೀತಿಯ ಅಧಿಕೃತ ಆದೇಶ ಬಂದಿಲ್ಲ. ಅಧಿಕೃತ ಆದೇಶ ಕೈಸೇರಿದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಕಾನೂನು ಹೋರಾಟದ ಬಗ್ಗೆ ಮುಂದೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.
ಟ್ರೇಡ್ ಮಾರ್ಕ್ಗಳ ರಿಜಿಸ್ಟ್ರಾರ್ ಚೆನ್ನೈನಲ್ಲಿದೆ. ಈ ಟ್ರೇಡ್ಮಾರ್ಕ್ ವಿವಾದ 6-7 ವರ್ಷದಿಂದ ನಡೀತಿದೆ. ನಾವು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಟಿವಿ9ಗೆ KSRTC ಎಂಡಿ ಶಿವಯೋಗಿ ಕಳಸದ್ ಮಾಹಿತಿ ನೀಡಿದ್ಧಾರೆ.
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದೇನು?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಳಸುತ್ತಿದ್ದ ಕೆಎಸ್ಆರ್ಟಿಸಿ ಎಂಬ ಟ್ರೇಡ್ಮಾರ್ಕ್ ಕೇರಳದ ಪಾಲಾಗಿರುವ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿದ್ದಾರೆ. ಕೇರಳ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಎರಡರಲ್ಲೂ ಕೆಎಸ್ಆರ್ಟಿಸಿ ಎಂದೇ ಬಳಸಲಾಗುತ್ತಿತ್ತು. ಈಗ ಕೇರಳ ರಾಜ್ಯವು ಕೆಎಸ್ಆರ್ಟಿಸಿ ಎಂಬ ಶಬ್ದವನ್ನು ತಾನೇ ಮೊದಲು ಬಳಸಿದ್ದರಿಂದ ಕರ್ನಾಟಕ ಅದನ್ನು ಬಳಸಕೂಡದು ಎಂದು ತಕರಾರು ತೆಗೆದ ಕಾರಣ ಆ ಬಗ್ಗೆ ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ತೀರ್ಪು ನೀಡಿದೆ ಎಂದು ಮಾಹಿತಿ ಬಂದಿದೆ. ಆದರೆ, ತೀರ್ಪಿನಲ್ಲಿ ಏನಿದೆ ಎಂಬ ಅಂಶ ನಮಗೆ ಅಧಿಕೃತವಾಗಿ ಇನ್ನೂ ಸಿಕ್ಕಿಲ್ಲ, ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟ ಏನು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿಲ್ಲ: ಸಿಎಂ ಯಡಿಯೂರಪ್ಪ
ಸ್ಲಂ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ತ್ವರಿತವಾಗಿ ಲಸಿಕೆ ವಿತರಿಸಿ: ಹೈಕೋರ್ಟ್ನಿಂದ ರಾಜ್ಯ ಸರ್ಕಾರಕ್ಕೆ ಸೂಚನೆ
(MP Sumalatha Ambarish suggested that KSRTC be named Baba Saheb Transport Corporation)