ವಿಜಯಪುರ: ಮಿಸ್ ವರ್ಲ್ಡ್, ಮಿಸ್ ಇಂಡಿಯಾ ಎಂಬ ಸ್ಪರ್ಧೆಗಳ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಇವುಗಳ ಜೊತೆಗೆ ಮಿಸೆಸ್ ವರ್ಲ್ಡ್ ಕಾಂಫಿಟೇಷನ್ ಸಹ ನಡೆಯುತ್ತದೆ. ಅಂದರೆ ವಿವಾಹವಾದ ಮಹಿಳೆಯರಿಗಾಗಿ ಈ ಸ್ಪರ್ಧೆ ನಡೆಯುತ್ತಿದ್ದು, ಮಿಸ್ ವರ್ಲ್ಡ್ ಹಾಗೂ ಮಿಸ್ ಇಂಡಿಯಾ ಮಾದರಿಯಲ್ಲಿಯೇ ಮಿಸೆಸ್ ವರ್ಲ್ಡ್ ಕಾಂಪಿಟೇಷನ್ ನಡೆಯುತ್ತದೆ. ಈ ಸ್ಪರ್ಧೆಗೆ ಭಾಗಿಯಾಗುವ ಸ್ಪರ್ಧಿಗಳು ಆಯಾ ದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಗೆದ್ದು ಮಿಸೆಸ್ ವರ್ಲ್ಡ್ ಸ್ಪರ್ಧೆಗೆ ಅಣಿಯಾಗುತ್ತಾರೆ. ನವ ದೆಹಲಿಯಲ್ಲಿ ನಡೆದ ಈ ಬಾರಿಯ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ದೆಯನ್ನು ಗ್ಲೋಬಲ್ ಪೆಜೆಂಟ್ ಸಂಸ್ಥೆ ಆಯೋಜನೆ ಮಾಡಿತ್ತು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಸ್ಪರ್ಧಾಳುಗಳು ಭಾಗಿಯಾಗಿದ್ದು, ಅಂತಿಮ ಸುತ್ತಿನಲ್ಲಿ ವಿಜಯಪುರದ ಅರುಣಾ ತುಂಬಗಿಗೆ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಒಲಿದು ಬಂತು (Mrs. Queen of India 2020).
ಅರುಣಾ ತುಂಬಗಿ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಬಾಚಿಕೊಂಡಿದ್ದಕ್ಕೆ ವಿಜಯಪುರ ಜಿಲ್ಲೆಯಲ್ಲಿ ಸಂತಸ ವ್ಯಕ್ತವಾಗಿದ್ದು, ಇದಕ್ಕೆ ಕಾರಣ ಅರುಣಾ ತುಂಬಗಿ ಈ ಜಿಲ್ಲೆಯ ಸೊಸೆಯಾಗಿರುವುದೇ ಆಗಿದೆ. ಪತಿ ಪ್ರವೀಣ ತುಂಬಗಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದು ಇದರಿಂದಾಗಿ ಅರುಣಾ ಹಾಗೂ ಪ್ರವೀಣ ದಂಪತಿ ಸದ್ಯ ಜಮ್ಮು ಕಾಶ್ಮೀರದಲ್ಲಿ ನೆಲೆಸಿದ್ದಾರೆ.
ಅರುಣಾ ಮೂಲತಃ ಬೀದರ್ ಜಿಲ್ಲೆಯವರು. ಕಾಂಗ್ರೆಸ್ ಮುಖಂಡ ರಾಜಶೇಖರ್ ಪಾಟೀಲ್ ಅಷ್ಟೂರ್ ಅವರ ಪುತ್ರಿ. ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ ಅರುಣಾರನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ಚರ ಗ್ರಾಮದ ಪ್ರವೀಣ ತುಂಬಗಿ ಅವರಿಗೆ ಕೊಟ್ಟು ವಿವಾಹ ಮಾಡಿದ್ದಾರೆ. ಕಳೆದ 2018 ರಲ್ಲಿ ಅರುಣಾ ಹಾಗೂ ಪ್ರವೀಣ ವಿವಾಹವಾಗಿದ್ದು, ಅರುಣಾ ಪತಿ ಪ್ರವೀಣ ತುಂಬಗಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ವಾಸವಿರುವ ಅರುಣಾ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಸದ್ಯ ಗೃಹಿಣಿಯಾಗಿದ್ದಾರೆ.
ಅರುಣಾ ತುಂಬಗಿ
ಪತಿ ಹಾಗೂ ಕುಟುಂಬದವರ ಬೆಂಬಲ:
ಮಿಸೆಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಗೆ ಅಣಿಯಾಗಲು ಪತಿ ಪ್ರವೀಣ ಹಾಗೂ ಪತಿಯ ಮನೆಯವರ ಬೆಂಬಲವೇ ಕಾರಣ. ಸ್ಪರ್ಧೆ ಮಾಡಲು ಪತಿ ಪ್ರವೀಣ ಒತ್ತಾಸೆಯಾಗಿ ನಿಂತು ಬೆಂಬಲಿಸಿದರು. ಮನೆ ಮಂದಿಯೆಲ್ಲಾ ಸಹಕಾರ ನೀಡಿ ಪ್ರೋತ್ಸಾಹಿಸಿದರು. ಇವರೆಲ್ಲರ ಕಾರಣದಿಂದ ನಾನು ಸ್ಪರ್ಧೆಯಲ್ಲಿ ಜಯ ಗಳಿಸಿದೆ ಎಂದು ಅರುಣಾ ಹೇಳಿದ್ದಾರೆ.
ಮಿಸೆಸ್ ಕ್ವೀನ್ ಆಫ್ ಇಂಡಿಯಾ 2020 ಸ್ಪರ್ಧೆಯ ದೃಶ್ಯ
ಸಾಧನೆಯ ಮೆಟ್ಟಿಲು:
ಮಿಸೆಸ್ ಕ್ವೀನ್ ಆಫ್ ಇಂಡಿಯಾ 2020 ಸ್ಪರ್ಧೆಗೆ ದೇಶದ ವಿವಿಧ ರಾಜ್ಯಗಳ 30 ಸುಂದರಿಯರು ಭಾಗಿಯಾಗಿದ್ದರು. ಪ್ರತಿ ಹಂತದಲ್ಲಿಯೂ ಅರುಣಾ ತುಂಬಗಿ ಇತರೆ ಸ್ಪರ್ಧಿಗಳನ್ನು ಹಿಂದಿಕ್ಕಿ ಜಯದತ್ತ ಮುನ್ನಡೆಯುತ್ತಿದ್ದರು. ಆದರೂ ಪ್ರತಿ ಸುತ್ತಿನಲ್ಲಿ ಕಠಿಣತೆ ಎದುರಾಗುತ್ತಿತ್ತು. ಇದನ್ನೆಲ್ಲಾ ಹಿಂದಿಕ್ಕಿ ಮಿಸೆಸ್ ಕ್ವೀನ್ ಆಫ್ ಇಂಡಿಯಾ 2020 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ ಅರುಣಾ ತುಂಬಗಿ.
ಮಿಸೆಸ್ ಕ್ವೀನ್ ಆಫ್ ಇಂಡಿಯಾ 2020 ಸ್ಪರ್ಧೆಯಲ್ಲಿ ವಿಜೇತರಾಗಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಸುವರ್ಣಾವಕಾಶವನ್ನು ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ಇತರೆ ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸೆಸ್ ವರ್ಲ್ಡ್ ಆಗಿ ಜಯ ಗಳಿಸಲಿ ಎಂಬುವುದು ಜಿಲ್ಲೆಯ ಜನರ ಹಾಗೂ ಅರುಣಾ ಪತಿ ಪ್ರವೀಣ ತುಂಬಗಿ ಮತ್ತು ಕುಟುಂಬದವರ ಹಾರೈಕೆಯಾಗಿದೆ. ಈ ಮೂಲಕ ದೇಶದ, ಕರ್ನಾಟಕ ರಾಜ್ಯದ ಹಾಗೂ ವಿಜಯಪುರ ಜಿಲ್ಲೆಯ ಹೆಸರು ತರಲಿ ಎಂದು ಶುಭ ಕೋರಿದ್ದಾರೆ.
ಮಿಸೆಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಪಡೆದ ಚಿತ್ರಣ
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮಹಿಳೆಯರ ಜೀವನ ನಿಲ್ಲುವುದಿಲ್ಲ, ಸಾಕಷ್ಟು ಅವಕಾಶಗಳು ಹಾಗೂ ಮಿಸೆಸ್ ಕ್ವೀನ್ ಆಫ್ ಇಂಡಿಯಾ ತರಹದ ವಿವಿಧ ವೇದಿಕೆಗಳು ಸಿಗುತ್ತವೆ. ನಮ್ಮ ಕಲೆ, ಪ್ರತಿಭೆ ಇಲ್ಲಿ ಪ್ರದರ್ಶಿಸಬಹುದು. ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ವಿವಾಹದ ನಂತರ ಮಹಿಳೆಯರು ಸೌಂದರ್ಯದ ಬಗ್ಗೆ ಉದಾಸೀನ ಮಾಡುತ್ತಾರೆ. ಆದರೆ ನನ್ನ ಪತಿ ಪ್ರವೀಣ ಹಾಗೂ ನನ್ನ ಪತಿಯ ಮನೆಯವರೆಲ್ಲಾ ನನಗೆ ಪ್ರೋತ್ಸಾಹ ನೀಡಿದರು. ಅವರೆಲ್ಲರ ಪ್ರೋತ್ಸಾಹದಿಂದ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ದೆಯಲ್ಲಿ ಗೆದ್ದಿದ್ದೇನೆ. ಮುಂದಿನ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಗೆಲುವು ಪಡೆಯುತ್ತೇನೆ ಎಂದು ಅರುಣಾ ತುಂಬಗಿ ಸಂತೋಷ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Miss India 2020: ದಕ್ಷಿಣ ಭಾರತದ ಚೆಲುವೆ ಮಾನಸಾ ವಾರಣಾಸಿಗೆ ಒಲಿಯಿತು ‘ಮಿಸ್ ಇಂಡಿಯಾ 2020’ ಮುಕುಟ
Published On - 12:52 pm, Mon, 15 February 21