ಬೆಂಗಳೂರು/ಮಂಗಳೂರು, (ಆಗಸ್ಟ್ 19): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇನ್ನು ಮಂಗಳೂರಿನಲ್ಲಿ ಕಾಂಗ್ರೆಸ್ MLC ಐವನ್ ಡಿಸೋಜಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಡೆದಿದ್ದು ಈ ವೇಳೆ ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಐವನ್ ಡಿಸೋಜಾ, ಬಾಂಗ್ಲಾದೇಶದ ಹಿಂದಿನ ಪ್ರಧಾನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ನೀವು ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಎಚ್ಚರಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ಇದೀಗ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ.
ಈ ಬಗ್ಗೆ ವಿಧಾನಪರಿಷತ್ ಸದಸ್ಯ ಸಿಟಿ ರವಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ಸಿನ ಹತಾಶ ಮನಸ್ಥಿತಿಗಳು ಹೇಗೆಲ್ಲ ಕಾರ್ಯಾಚರಿಸುತ್ತವೆ ಎಂಬುದನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರು ಬಿಚ್ಚಿಟ್ಟಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಕೆಳಗಿಳಿಸುತ್ತೇವೆ ಎಂಬ ಹೇಳಿಕೆಯ ಹಿಂದಿನ ಮರ್ಮವೇನು? ರಾಜಭವನಕ್ಕೆ ಕಾಂಗ್ರೆಸ್ ಪುಢಾರಿಗಳನ್ನು ನುಗ್ಗಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Muda Case: ಪ್ರಾಸಿಕ್ಯೂಷನ್: ಬೀಸುವ ದೊಣ್ಣೆಯಿಂದ ಸಿದ್ದರಾಮಯ್ಯ ಪಾರು!
ಕಾಂಗ್ರೆಸ್ ಶಾಸಕರ ಈ ಹೇಳಿಕೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಿಸಲಿ. ಕೂಡಲೇ ರಾಜ್ಯ ಪೋಲಿಸ್ ಇಲಾಖೆಯ ಮಹಾನಿರ್ದೇಶಕರು, ಪರಿಷತ್ ಸದಸ್ಯರಾದ ಐವಾನ್ ಡಿಸೋಜ ಅವರ ವಿರುದ್ದ ದೂರುನ್ನು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಟಿ ರವಿ ಆಗ್ರಹಿಸಿದ್ದಾರೆ.
ಇನ್ನು ರಾಜ್ಯಪಾಲರ ವಿರುದ್ಧ ಎಂ.ಎಲ್.ಸಿ ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಐವನ್ ಡಿಸೋಜಾ ವಿರುದ್ಧ ಎಫ್.ಐ.ಆರ್ ದಾಖಲು ಮಾಡುವಂತೆ ಒತ್ತಾಯಿಸಿ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬರ್ಕೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.ಐವನ್ ಡಿಸೋಜಾ ವಿರುದ್ಧ ದೂರು ಅರ್ಜಿ ಸ್ವೀಕರಿಸಿದ ಬರ್ಕೆ ಠಾಣೆ ಪೊಲೀಸರು, ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹಿಂಬರಹ ಬರೆದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದುಕೊಂಡರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಥಾವರ್‌ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಈ ವೇಳೆ ಐವಾನ್ ಡಿಸೋಜಾ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿಗಳು ವಾಪಸ್ ಕರೆಸಬೇಕು ಇಲ್ಲವಾದಲ್ಲಿ ಬಾಂಗ್ಲಾ ಪ್ರಧಾನಿಗೆ ಆದಂತೆ ರಾಜ್ಯಪಾಲರಿಗೂ ಆಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 pm, Mon, 19 August 24