ಹೈಕೋರ್ಟ್ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ: ವಕೀಲ

ಹೈಕೋರ್ಟ್ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ: ವಕೀಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 19, 2024 | 8:09 PM

ರಾಜ್ಯ ಉಚ್ಛ ನ್ಯಾಯಾಲಯವು ವಿಶೇಷ ನ್ಯಾಯಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಸೂಚನೆ ನೀಡಿದೆಯೇ ಹೊರತು ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿಲ್ಲ, ಬಹಳ ಜನ ಅದನ್ನು ತಡೆಯಾಜ್ಞೆ ಎಂದು ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಅಬ್ರಹಾಂ ಅವರ ವಕೀಲ ಹೇಳಿದರು.

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಗೆ ಅನುಮತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಹೈಕೋರ್ಟ್ ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ಇವತ್ತು ನಡೆದು ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್ 29ರವರೆಗೆ ಮುಂದೂಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಇವತ್ತ್ತು ಹೈಕೋರ್ಟ್​ನಲ್ಲಿ ನಡೆದ ವಾದ ಪ್ರತಿವಾದಗಳ ಬಗ್ಗೆ ಖಾಸಗಿ ದೂರದಾರ ಟಿಜೆ ಅಬ್ರಹಾಂ ಪರ ವಕೀಲರು ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಶ್ನಿಸಿ ಮುಖ್ಯಮಂತ್ರಿಯವರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಸರ್ಕಾರ ಮೊದಲ ಪ್ರತಿವಾದಿ, ರಾಜ್ಯಪಾಲರ ಸೆಕ್ರಟರಿ ಎರಡನೇ ಪ್ರತಿವಾದಿ, ಮೂರನೇ ಪ್ರತಿವಾದಿಯಾಗಿ ವಕೀಲರ ಕಕ್ಷಿದಾರ ಟಿಜೆ ಅಬ್ರಹಾಂ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರುಗಳನ್ನು ಸಲ್ಲಿಸಿದವರನ್ನು ನಾಲ್ಕನೇ ಮತ್ತು 5ನೇ ಪ್ರತಿವಾದಿಗಳನ್ನಾಗಿ ಉಲ್ಲೇಖಿಸಲಾಗಿದೆ ಎಂದು ವಕೀಲರು ಹೇಳಿದರು.

ಮುಖ್ಯಮಂತ್ರಿಯವರ ಅಹವಾಲು ಎಂದರೆ ರಾಜ್ಯ ಸಚಿವ ಸಂಪುಟ ನೀಡಿದ ಶಿಫಾರಸ್ಸುಗಳನ್ನು ಮಾನ್ಯ ಮಾಡದೆ ರಾಜ್ಯಪಾಲರು ಒಂದೇ ದಿನನದಲ್ಲಿ ತರಾತುರಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆನ್ನುವುದು ಎಂದು ವಕೀಲರು ಹೇಳಿದರು. ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಹೈಕೋರ್ಟ್ ಆಗಸ್ಟ್ 29 ರವರೆಗೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚನೆ ನೀಡಿತು ಎಂದು ವಕೀಲ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಾಸಿಕ್ಯೂಷನ್​: ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಕಾರ್ಯಕರ್ತರಿಗೊಂದು ಸಿದ್ದರಾಮಯ್ಯ ಕಿವಿಮಾತು