ಬೆಂಗಳೂರು, (ಸೆಪ್ಟೆಂಬರ್ 27): ಅಕ್ರಮವಾಗಿ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಿದ್ದರಾಮಯ್ಯ A1 ಆರೋಪಿಯಾಗಿದ್ದಾರೆ. ಆದ್ರೆಮ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಇನ್ನೂ ತೃಪ್ತಿ ಆದಂತೆ ಕಾಣುತ್ತಿಲ್ಲ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಇಂದು (ಸೆಪ್ಟೆಂಬರ್ 27) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆಗೆ ಸಿಬಿಐಗೆ ವಹಿಸುವಂತೆ ಆಗ್ರಹಗಳು ವ್ಯಕ್ತವಾಗುತ್ತಿವೆ, ಈ ನಡುವೆ ಸಿಎಂ ಸಿದ್ದರಾಮಯ್ಯ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದು, ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಮನವಿ ಮಾಡಿದ್ದು, ಸೋಮವಾರ ಅರ್ಜಿ ವಿಚಾರಣೆಗೆ ಬರಲಿದೆ.
ಇದನ್ನೂ ಓದಿ: ಸಿಎಂ ವಿರುದ್ಧದ ಎಫ್ಐಆರ್ನಲ್ಲಿ ಯಾವೆಲ್ಲಾ ಸೆಕ್ಷನ್ ದಾಖಲು? ಯಾವ ಸೆಕ್ಷನ್ಗೆ ಏನು ಶಿಕ್ಷೆ?
ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರಮಾಣವಚನದ ಅಂಶಗಳನ್ನು ಉಲ್ಲಂಘಿಸಿ ವೈಯಕ್ತಿಕ ಲಾಭಕ್ಕೆ ಅಧಿಕಾರ ಬಳಕೆ ಮಾಡಿದ್ದು, ಡಿಸಿಎಂ ಆಗಿದ್ದಾಗ ಸರ್ಕಾರದ ಜಮೀನು ಡಿನೋಟಿಫಿಕೇಷನ್ ಮಾಡಿದ್ದಾರೆ. ಆ ಮೂಲಕ ಜನರಿಟ್ಟ ನಂಬಿಕೆ ದ್ರೋಹ ಮಾಡಿದ್ದಾರೆ. ಡಿನೋಟಿಫಿಕೇಷನ್ ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಸಿದ್ದರಾಮಯ್ಯ, ಯತೀಂದ್ರ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಪ್ರಭಾವ ಬೀರಿಯೇ ಕಾನೂನುಬಾಹಿರವಾಗಿ ಪತ್ನಿ ಹೆಸರಿಗೆ ಸೈಟ್ ಹಂಚಿಕೆ ಪಡೆದಿದ್ದು, ಹಲವು ನಿಯಮಾವಳಿ ಉಲ್ಲಂಘಿಸಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ಮುಡಾ, ಕಂದಾಯ ಅಧಿಕಾರಿಗಳೊಂದಿಗೆ ಸೇರಿ ಕುಟುಂಬದವರಿಗೆ ಲಾಭ ಮಾಡಿಕೊಟ್ಟಿದ್ದಾರೆ. ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಕೆಲವರಿಗೆ ಲಾಭ ಮಾಡಿಕೊಟ್ಟಿದ್ದಾರೆ.
ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ಪ್ರಭಾವ ಬೀರಬಹುದು. ಪೊಲೀಸ್ ಇಲಾಖೆ, ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವವಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ತನಿಖಾ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ತನಿಖೆ ನಂತರವೂ ನ್ಯಾಯಯುತ ಫಲಿತಾಂಶ ಬರಲು ಸಾಧ್ಯವಿಲ್ಲ. ಕಾಲಮಿತಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕಾದ ಅಗತ್ಯವಿದೆ.. ಸ್ವತಹ ಸಿಎಂ ತನಗೆ ಎಲ್ಲರ ಬೆಂಬಲವಿದೆ ಎಂದಿದ್ದಾರೆ. ಹೈಕಮಾಂಡ್, ಸಚಿವ ಸಂಪುಟ, ಸರ್ಕಾರ, ವ್ಯವಸ್ಥೆಯ ಬೆಂಬಲವಿದೆ ಎಂದಿದ್ದಾರೆ.. ಹೀಗಾಗಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಅಗತ್ಯವಿದೆ.
ಸ್ವತಂತ್ರ ಹಾಗೂ ನ್ಯಾಯಸಮ್ಮತ ತನಿಖೆಯೂ ಮೂಲಭೂತ ಹಕ್ಕು. ಸತ್ಯಶೋಧನೆಯೇ ತನಿಖೆಯ ಗುರಿಯಾಗಿರುವಾಗ ಸ್ವತಂತ್ರ ತನಿಖೆ ನಡೆಯಬೇಕು. ಪಾರದರ್ಶಕ ತನಿಖೆ ನಡೆಯುತ್ತಿರುವ ಭಾವನೆ ಜನರಿಗೂ ಬರಬೇಕಿದೆ.. 2020 ರಲ್ಲಿ ಸೈಟ್ ಹಂಚಿಕೆಗೆ ಕಾರಣರಾದ ಅಧಿಕಾರಿ ಅಮಾನತುಪಡಿಸಿದ್ದರು.. ಆದರೆ ಕೆಲ ದಿನಗಳಲ್ಲೇ ಆ ಅಮಾನತು ರದ್ದುಪಡಿಸಿರುವುದು ಇದಕ್ಕೆ ಸಾಕ್ಷಿ. ಸಂಪೂರ್ಣ ವ್ಯವಸ್ಥೆಯೇ ಸಿಎಂ, ಕುಟುಂಬದವರನ್ನು ರಕ್ಷಿಸುತ್ತಿದೆ. ಹೀಗಾಗಿ ಹೈಕೋರ್ಟ್ ನಿಗಾದಲ್ಲಿಯೇ ಸಿಬಿಐ ತನಿಖೆ ನಡೆಸುವಂತೆ ನಿರ್ದೇಶಿಸಲು ರಿಟ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೂರುದಾರ ದೂರುದಾರ ಸ್ನೇಹಮಯಿ ಕೃಷ್ಣ, ಎಫ್ಐಆರ್ನಲ್ಲಿ ಸಿದ್ದರಾಮಯ್ಯರನ್ನ ಎ1 ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಘಟನೆ. ಒಬ್ಬ ಸಾಮಾನ್ಯ ವ್ಯಕ್ತಿ ಸಿಎಂ ವಿರುದ್ಧ ಹೋರಾಡಿದ್ದಾನೆ. ನನ್ನ ಹಿಂದೆ ಹಲವಾರು ಸಾಮಾಜಿಕ ಹೋರಾಟಗಾರರಿದ್ದಾರೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸುವವರೆಗೂ ಹೋರಾಟ ನಿಲ್ಲಿಸಲ್ಲ. ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಅರ್ಜಿ ಸಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಲೋಕಾಯುಕ್ತ ತನಿಖೆಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದ ವಿರುದ್ಧ ಇಂದು ಎಫ್‌ಐಆರ್ ದಾಖಲಾಗಿದೆ. ಈ ನಡುವೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ದೂರುದಾರ ಒತ್ತಾಯಿಸಿದ್ದಾರೆ.
ಇನ್ನು ಮುಡಾ ಹಗರಣದಲ್ಲಿ ಯಾರಾದರೂ ಸಿಬಿಐ ತನಿಖಗೆ ಒತ್ತಾಯಿಸುವ ಸಾಧ್ಯತೆಗಳಿವೆ ಎಂದು ಅರಿತೇ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿಬಿಐ ಮುಕ್ತ ಅಧಿಕಾರವನ್ನು ಮೊಟಕುಗೊಳಿಸುವ ನಿರ್ಣಯ ಕೈಗೊಂಡಿದೆ. ಆದ್ರೆ, ದೂರುದಾರ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕೋರ್ಟ್ ಏನು ಆದೇಶ ನೀಡುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಕೋರ್ಟ್ ಆದೇಶಿಸಿದರೆ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Fri, 27 September 24