ಧಾರವಾಡ, ಸೆ.27: ಕಳೆದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡ(Dharwad)ದ ಕೆಸಿಡಿ ಮೈದಾನ, ಹುಬ್ಬಳ್ಳಿಯ ರೈಲ್ವೆ ಮೈದಾನ, ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನ ಹಾಗೂ ಕುಂದಗೋಳ, ಕಲಘಟಗಿಯಲ್ಲಿ ಗ್ಯಾರಂಟಿ ಸಮಾವೇಶ (Guarantee convention)ನಡೆದಿತ್ತು. ನವಲಗುಂದದಲ್ಲಿ ಫೆಬ್ರುವರಿ 24ರಂದು ನಡೆದ ಸಮಾವೇಶದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಆದರೆ, ಸಿಎಂ ಭಾವಹಿಸಿದ್ದ ಸಮಾವೇಶ ಲೆಕ್ಕಪತ್ರದಲ್ಲಿಯೇ ಏರುಪೇರಾಗಿದ್ದು, ಅನೇಕ ಸಂಶಯಗಳು ಬರುತ್ತಿವೆ ಎಂದು ನವಲಗುಂದದ ಸಾಮಾಜಿಕ ಹೋರಾಟಗಾರ ಮಾಬುಸಾಬ್ ಯರಗುಪ್ಪಿ ಆರೋಪಿಸಿದ್ದಾರೆ.
ಐದು ಸಮಾವೇಶಗಳ ಖರ್ಚು ವೆಚ್ಚದ ಬಗ್ಗೆ ಆರ್.ಟಿ.ಐ ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡಿರುವ ಅವರು, ನವಲಗುಂದ ಸಮಾವೇಶ ಮುಗಿದ ಒಂದು ತಿಂಗಳ ಬಳಿಕ ಕೆಟರಿಂಗ್ ಕೊಟೇಶನ್ ಪಡೆದಿದ್ದಾರೆ. ಕುಂದಗೋಳದಲ್ಲಿ ನಡೆದಿದ್ದ ಸಮಾವೇಶದ ಊಟದ ಕೊಟೇಶನ್ನಲ್ಲಿ ಕೆಟರಿಂಗ್ ಗುತ್ತಿಗೆ ಪಡೆದವರ ಸಹಿಯೂ ಇಲ್ಲ ಎನ್ನುವುದು ಗೋಲ್ಮಾಲ್ ನಡೆದಿರುವ ಸಾಕಷ್ಟು ಅನುಮಾನ ಹುಟ್ಟುಹಾಕಿವೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿ ಮಾಬುಸಾಬ್, ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಲೋಕಾಯುಕ್ತ ವ್ಯೂಹ: ಸಿಎಂ ಮುಂದಿರುವ ಮೂರು ಆಯ್ಕೆಗಳು ಇಲ್ಲಿವೆ
ಸಮಾವೇಶ ನಡೆದ ದಿನಾಂಕ ಹಾಗೂ ಅದಕ್ಕಾಗಿ ಖರ್ಚು ಮಾಡಿದ ಅನೇಕ ಬಿಲ್ಗಳಲ್ಲಿ ನಮೂದಿಸಿರುವ ದಿನಾಂಕಕ್ಕೂ ತಾಳೆಯಾಗುತ್ತಿಲ್ಲ. ಎಲ್ಲ ಸಮಾವೇಶಗಳ ಉಪಹಾರದ ಟೆಂಡರ್ ಒಂದೇ ಏಜೆನ್ಸಿಗೆ ಕೊಟ್ಟಿದ್ದಾರೆ. ಒಂದು ಲಕ್ಷ ರೂಪಾಯಿ ಮೇಲಿನ ಮೊತ್ತವಿದ್ದರೂ ಟೆಂಡರ್ ಕರೆದಿಲ್ಲ. ಹೀಗಾಗಿ ಇಡೀ ಅನುದಾನ ಬಳಕೆ ಬಗ್ಗೆ ಅನುಮಾನಗಳು ಬರುತ್ತಿವೆ ಎಂದು ಆರೋಪಿಸಿರುವ ಮಾಬುಸಾಬ, ಗ್ಯಾರಂಟಿ ನಿರ್ವಹಣಾ ಸಮಿತಿಯಲ್ಲಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಲೋಕೋಪಯೋಗಿ ಇಲಾಖೆಯ ಎಇ ವಿಜಯಕುಮಾರ, ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ಎಂಬುವವರ ಹೆಸರನ್ನು ನಮೂದಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಹಲವಾರು ಹಗರಣಗಳು ಹೊರಗೆ ಬಂದಿವೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಮುಡಾ ಹಗರಣದಲ್ಲಿ ಆರೋಪಿಯಾಗಿ, ಇದೀಗ ಲೋಕಾಯುಕ್ತ ತನಿಖೆ ಎದುರಿಸಲಿದ್ದಾರೆ. ಇದೇ ವೇಳೆ ಅವರೇ ಭಾಗವಹಿಸಿದ್ದ ಸಮಾವೇಶದ ಖರ್ಚು-ವೆಚ್ಚದ ತನಿಖೆಯೂ ಈಗ ಲೋಕಾಯುಕ್ತ ಅಂಗಳಕ್ಕೆ ಹೋಗಿರುವುದು ಕಾಕತಾಳೀಯವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ