ಬೆಂಗಳೂರು, ಜುಲೈ 20: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ (BJP) ಮುಖಂಡ ಎನ್.ಆರ್. ರಮೇಶ್ (NR Ramesh) ದಾಖಲೆ ಸಮೇತ ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಹಣಕಾಸು ಸಚಿವ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದ ವೇಳೆ ಭೂಹಗರಣ, ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆಂದು 400ಕ್ಕೂ ಹೆಚ್ಚು ಪುಟಗಳ ದಾಖಲೆಗಳ ಸಮೇತ ದೂರು ನೀಡಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1997-98ರಲ್ಲಿ ಜೆಹೆಚ್ ಪಟೇಲ್ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸ್ವಾಧೀನಪಡಿಸಿಕೊಂಡ ದೇವನೂರು ಮೂರನೇ ಬಡಾವಣೆಯನ್ನು ಮುಡಾ ಕೈ ಬಿಡುವಂತೆ ಅಧಿಸೂಚನೆ ಹೊರಡಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ 2024-05ರಲ್ಲಿ ಧರ್ಮಸಿಂಗ್ ಅವರ ಸರ್ಕಾರದಲ್ಲೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಇದೇ ಭೂಮಿಯನ್ನು ಮೃತ ಲಿಂಗ ಎಂಬ ಹೆಸರಿನ ವ್ಯಕ್ತಿಯ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿಸಿದ್ದರು ಎಂದು ಆರೋಪಿಸಿದರು.
ಇದನ್ನೂ ಓದಿ: ಮುಡಾ ಅಕ್ರಮ ಆರೋಪ: ಬಾಮೈದ ಜಮೀನನ್ನ ಅರಿಶಿನ, ಕುಂಕಮ ರೀತಿಯಲ್ಲಿ ನನ್ನ ಹೆಂಡಿತಿಗೆ ಗಿಫ್ಟ್ ನೀಡಿದ್ದಾನೆ; ಸಿದ್ದರಾಮಯ್ಯ
ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮೈಸೂರಿನ ವಿಜಯನಗರದ 2 ಮತ್ತು 3 ಬಡಾವಣೆಯಲ್ಲಿ ಸುಮಾರು 39 ಸಾವಿರ ಚದರ ಅಡಿನ 14 ನಿವೇಶನಗಳನ್ನು ಬದಲಿ ನಿವೇಶನ ಹೆಸರಿನಲ್ಲಿ ತಮ್ಮ ಹೆಸರಿಗೆ ಮಾಡುವಂತೆ ಮುಡಾ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ನಂತರ 2022ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಮಯದಲ್ಲಿ ಈ 14 ನಿವೇಶನಗಳನ್ನು ತಮ್ಮ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ದೇವನೂರು ಬಡವಾಣೆಯಲ್ಲಿ ಒಂದು ನಿವೇಶನ ಬೆಲೆ 5-6 ಕೋಟಿ ಇದ್ದರೆ, ವಿಜಯನಗರದಲ್ಲಿನ 14 ಬಡವಾಣೆಯಗಳ ಬೆಲೆ ಸುಮಾರು 50-60 ಕೋಟಿ ರೂ. ಇದೆ. ಒಟ್ಟಿನಲ್ಲಿ ಪ್ರಭಾವಿ ಹುದ್ದೆಯಲ್ಲಿರುವಾಗಲೇ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಹಗರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಹಾಗೂ ಆ ಸಮಯದಲ್ಲಿ ಮೂಡಾದಲ್ಲಿದ್ದ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದೇನೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆಗಿದ್ದು ಸತ್ಯ. ಆದರೆ ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ವಾಲ್ಮೀಕಿ ನಿಗಮದ ಹಗರಣ ಬಗ್ಗೆ ಎಸ್ಐಟಿ, ಇಡಿ ತನಿಖೆ ನಡೆಸುತ್ತಿದೆ. ಬ್ಯಾಂಕ್ ಅಧಿಕಾರಿಗಳ ತಪ್ಪಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ. ಕೇಂದ್ರ ವಿತ್ತ ಸಚಿವರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲೂ ಹಗರಣಗಳು ನಡೆದಿವೆ ಎಂದರು.
ಬಿಜೆಪಿ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆ ನಡೆಸುತ್ತೇವೆ. ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ವಿರುದ್ಧ ನೇರವಾಗಿ ಆರೋಪವಿಲ್ಲ. ತನಿಖೆ ಆಗುತ್ತಿದೆ, ಅವರ ಪಾತ್ರ ಇದೆಯೋ ಇಲ್ಲವೋ ಎಂಬುವುದು ಗೊತ್ತಾಗುತ್ತದೆ. ನಿಗಮಗಳಲ್ಲಿ ಮೌಖಿಕ ಆದೇಶ ಇಲ್ಲ. ಲಿಖಿತವಾಗಿ ಆದೇಶ ನೀಡಿದರೂ ಕಾನೂನು ಬಾಹಿರವಾಗಿ ವ್ಯವಸ್ಥಾಪಕ ನಿರ್ದೇಶಕರು ಮಾಡಬಾರದು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ವ್ಯವಸ್ಥಾಪಕ ನಿರ್ದೇಶಕರ ಪಾತ್ರ ಇದೆ. ತಪ್ಪಿತಸ್ಥರು ಯಾರೇ ಇದ್ರೂ ಶಿಕ್ಷೆ ಆಗಲಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Sat, 20 July 24