ಗ್ಯಾರಂಟಿ ಯೋಜನೆಗೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಹಣ ಬಳಸುತ್ತಿರುವುದಕ್ಕೆ ವಿರೋಧವಿದೆ ಎಂದ ಮಾವಳ್ಳಿ ಶಂಕರ್
ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ವಿಚಾರವಾಗಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆ ಮಾಡುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಣ ದುರುಪಯೋಗ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಜುಲೈ 20: ಗ್ಯಾರಂಟಿ ಯೋಜನೆ (guarantee scheme) ಜಾರಿಗೆ ತಂದಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದಕ್ಕೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಹಣ ಬಳಸುತ್ತಿರುವುದಕ್ಕೆ ನಮ್ಮ ವಿರೋಧ ಇದೆ ಎಂದು ದಲಿತ ಸಂಘರ್ಷ ಸಮಿತಿ ಸಂಘಟನೆಗಳ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ (Mavalli Shankar) ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಉಚಿತ ಅಂದ ಮೇಲೆ ಈ ಹಣ ಯಾಕೆ ಬಳಸಿದ್ದೀರಿ? ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಆಗಸ್ಟ್ನಲ್ಲಿ ದೊಡ್ಡ ಹೋರಾಟ
ಗ್ಯಾರಂಟಿ ಯೋಜನೆಗಳಿಗೆ ದಲಿತರ ಅಭಿವೃದ್ಧಿಗೆ ಇಟ್ಟ ಹಣ ಬಳಕೆ ಮಾಡುತ್ತಿದೆ. ಅಲ್ಲದೆ ದಲಿತರ ಅಭಿವೃದ್ಧಿಗೆ ಈ ಹಣ ಬಳಸಬೇಕೇ ಹೊರತು ಚರಂಡಿ, ರಸ್ತೆ ಕಾಮಗಾರಿಗೆ ಬಳಸಬಾರದು. ಕೂಡಲೇ ಈ ಹಣವನ್ನು ಸಮುದಾಯದ ಸಬಲೀಕರಣಕ್ಕೆ ಬಳಸಬೇಕು ಎಂದು ನಾವು ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸೋದಿಲ್ಲ; ಸಿದ್ದರಾಮಯ್ಯ ಸ್ಪಷ್ಟನೆ
ನಾವು ಸಚಿವರಿಗೆ ಕೂಡಲೇ ಮನವಿ ಮಾಡಿಕೊಳ್ಳುತ್ತೇವೆ. ಈ ಹಣವನ್ನ ದುರುಪಯೋಗ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಆಗಸ್ಟ್ನಲ್ಲಿ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಎಸ್ಇಎಸ್ಟಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 13-14ರಲ್ಲಿ ವಿಶೇಷ ಘಟಕ ಜಾರಿಗೆ ತಂದಿತ್ತು. ಈ ಹಿಂದೆ ಸಿದ್ದರಾಮಯ್ಯ ಒಂದು ಕಾನೂನು ಜಾರಿಗೆ ತಂದಿತ್ತು. ಆದರೆ ಸಮುದಾಯಕ್ಕೆ ಕಾಯ್ದಿರಿಸಿದ ಹಣ ಪೂರ್ಣ ಪ್ರಮಾಣವಾಗಿ ಬಳಕೆಯಾಗಿಲ್ಲ. 7ಡಿ ಕಾಯ್ದೆ ರದ್ದು ಗೊಳಿಸಿದ್ದಂತೆ 7ಸಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ ಇದೀಗ ಅನುದಾನದ ಹಣವನ್ನ ಬೇರೆ ಕಡೆ ಬಳಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಗ್ಯಾರಂಟಿ ಬಗ್ಗೆ ಅಪಪ್ರಚಾರ: ಕುಮಾರಸ್ವಾಮಿ, ವಿಜಯೇಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಚುನಾವಣೆಗೂ ಮುನ್ನ ಸಮುದಾಯದ ಹಣ ಬಳಕೆ ಮಾಡುತ್ತೇವೆ ಎಂದು ಹೇಳಿರಲಿಲ್ಲ. ಆದರೆ ಈಗ ಅನುದಾನದ ಹಣ ದಲಿತರಿಗೆ ಬಳಕೆಯಾಗುತ್ತಿದೆ ಅಂತ ಹೇಳುತ್ತಿದ್ದಾರೆ. ಈ ಸಾಲಿನಲ್ಲಿ 14 ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ಬಳಸಿದ್ದಾರೆ. ಈ ಸರ್ಕಾರ ದೊಡ್ಡ ಅನ್ಯಾಯ ಮಾಡುತ್ತಿದೆ. ಆದರೆ ಈ ಸರ್ಕಾರದ ರಚನೆಗೆ ನಮ್ಮ ಸಂಘಟನೆಗಳು ಮುಂದಾಗಿತ್ತು ಎಂದು ಕಿಡಿಕಾರಿದ್ದಾರೆ.
ಬಿಜೆಪಿಯ ವಿರುದ್ದವಾಗಿ ಹೋರಾಡಿ ನಾವು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇವೆ. ನಾವು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ಈಗಾಗಲೇ ಮೀಸಲಿಟ್ಟ ಹಣವನ್ನ ಸಮುದಾಯಕ್ಕೆ ಬಳಸಬೇಕು. ಸಮುದಾಯದ ಹಿತ ಕಾಪಾಡಬೇಕು. ಈಗಾಗಲೇ ಏನೇ ಆಗಿದ್ದರೂ ಅದನ್ನ ಬಹಿರಂಗಗೊಳಿಸಬೇಕು. ಸಮುದಾಯಕ್ಕೆ ತಲುಪಿರುವ ಮಾಹಿತಿಯನ್ನ ನೀಡಬೇಕು. ಇದನ್ನ ಗಂಭೀರವಾಗಿ ತೆಗೆದುಕೊಳ್ಳದಿದ್ದರೇ ಇಡೀ ರಾಜ್ಯದಲ್ಲಿ ಬೀದಿಗೆ ಇಳಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.