ಗ್ಯಾರಂಟಿ ಬಗ್ಗೆ ಅಪಪ್ರಚಾರ: ಕುಮಾರಸ್ವಾಮಿ, ವಿಜಯೇಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಲೋಕಸಭಾ ಚುನಾವಣೆ ಹಿನ್ನಲೆ ನಾಳೆ(ಏ.26) ರಾಜ್ಯದ 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ನಿನ್ನೆಯಷ್ಟೇ ಈ ಜಿಲ್ಲೆಗಳಲ್ಲಿ ಬಹಿರಂಗ ಪ್ರಚಾರಕ್ಕೂ ತೆರೆಬಿದ್ದಿದೆ. ಇನ್ನು ಪ್ರಚಾರದ ವೇಳೆ ಉಭಯ ಪಕ್ಷಗಳು ಭರ್ಜರಿ ಮತಬೇಟೆ ನಡೆಸಿದ್ದು, ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದಿದ್ದಾರೆ. ಈ ವೇಳೆ ಕಾಂಗ್ರೆಸ್ನ ಗ್ಯಾರಂಟಿಗಳು ನಿಲ್ಲುತ್ತದೆ ಎಂಬ ಬಿಜೆಪಿ-ಜೆಡಿಎಸ್ ಪ್ರಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಬಿಜೆಪಿ ಮತ್ತು ಜೆಡಿಎಸ್(BJP-JDS) ನಾಯಕರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
ಬೆಂಗಳೂರು, ಏ.25: ಚುನಾವಣೆ ಬಳಿಕ ಕಾಂಗ್ರೆಸ್ನ ಗ್ಯಾರಂಟಿಗಳು ನಿಲ್ಲುತ್ತದೆ ಎಂಬ ಬಿಜೆಪಿ-ಜೆಡಿಎಸ್ ಪ್ರಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಬಿಜೆಪಿ ಮತ್ತು ಜೆಡಿಎಸ್(BJP-JDS) ನಾಯಕರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ. ಹೌದು, ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಈ ಹಿನ್ನಲೆ ಬಿಜೆಪಿ, ಜೆಡಿಎಸ್ ನಾಯಕರಾದ ಹೆಚ್ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು(Ramesh Babu) ಅವರು ದೂರು ನೀಡಿದ್ದಾರೆ.
ಕಾಂಗ್ರೆಸ್ ಮೇಲೂ ಬಿಜೆಪಿ ನಿಯೋಗದಿಂದ ದೂರು
ಬೆಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಸುಳ್ಳು ಕರ ಪತ್ರ ಹಂಚುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಚುನಾವಣಾ ಆಯೋಗಕ್ಕೆ ಮಾಜಿ ಡಿಸಿಎಂ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ನೇತೃತ್ವದ ಬಿಜೆಪಿ ನಿಯೋಗ ದೂರು ನೀಡಿದೆ. ಈ ವೇಳೆ ಮಾತನಾಡಿದ ಅವರು, ‘ಎಲೆಕ್ಷನ್ ಕಮಿಷನ್ ಅನುಮತಿ ಇಲ್ಲದೆ ಮುದ್ರಣ ಮಾಡಿ ಹಂಚುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೇಲೆ ನಮಗೆ ಅನುಮಾನ ಇದೆ. ಅದರಲ್ಲಿ ಉತ್ತರ ಕ್ಷೇತ್ರದಲ್ಲಿ ಯಾರಿಗೆ ನಿಮ್ಮ ಮತ ಎಂದು ಇದೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಬೇಸ್ ಲೆಸ್ ಅಲಿಗೇಷನ್ ಮಾಡಿದ್ದಾರೆ. ಮಾಸ್ಟರ್ಸ್ ಮಾಡಿದ್ರೂ, ನಮ್ಮ ಅಭ್ಯರ್ಥಿ ಒಂಬತ್ತನೇ ತರಗತಿ ಎಂದು ಮುದ್ರಿಸಿದ್ದಾರೆ. ತಕ್ಷಣವೇ ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಗ್ಯಾರಂಟಿ ಕಾರ್ಡ್ ಹಂಚಿಕೆ
ನಿನ್ನೆಯಷ್ಟೇ ಬಿಜೆಪಿ ಅಧಿಕೃತ ಎಕ್ಸ್ ಖಾತೆ ಮೇಲೆ ಎಫ್ಐಆರ್
ಇನ್ನು ನಿನ್ನೆಯಷ್ಟೇ (ಏ.24) ಕಾಂಗ್ರೆಸ್ ಪ್ರಣಾಳಿಕೆ ಕುರಿತು ‘ಕೈ’ ಪ್ರಣಾಳಿಕೆಯೋ, ಮುಸ್ಲಿಂ ಲೀಗ್ ಪ್ರಣಾಳಿಕೆಯೋ ಎಂದು ಬಿಜೆಪಿ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು. ಈ ಬಗ್ಗೆ ಎಫ್ಎಸ್ಟಿ ತಂಡ ಮಲ್ಲೇಶ್ವರಂ ಠಾಣೆಗೆ ದೂರು ನೀಡಿತ್ತು. ಈ ಹಿನ್ನಲೆ ಆರ್ ಪಿ ಆ್ಯಕ್ಟ್ 125 ಮತ್ತು ಐಪಿಸಿ 153 ಅಡಿಯಲ್ಲಿ ದ್ವೇಷ ಮತ್ತು ಎರಡು ಗುಂಪುಗಳ ನಡುವೆ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಅಧಿಕೃತ ಎಕ್ಸ್ ಖಾತೆ ಮೇಲೆ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಅಷ್ಟೇ ಅಲ್ಲ, ಏ.20 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ಪೋಸ್ಟ್ ಹಾಕಲಾಗಿತ್ತು. ಹೀಗಾಗಿ ಬಿವೈ ವಿಜಯೇಂದ್ರ ಹಾಗೂ ಖಾತೆ ನಿರ್ವಹಣೆ ಮಾಡುವವರ ವಿರುದ್ದ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಮತ್ತೊಂದು ದೂರು ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Thu, 25 April 24