AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂ ಮೀಸಲಾತಿ ಇತಿಹಾಸ ಬಿಚ್ಚಿಟ್ಟ ಶೋಷಿತ ಸಮುದಾಯಗಳ ಮಹಾ ಒಕ್ಕೂಟ

ಕರ್ನಾಟಕ ಸರ್ಕಾರವು ಮುಸ್ಲಿಮರಿಗೆ ಮೀಸಲಾತಿ ನೀಡುವ ದಿಸೆಯಲ್ಲಿ ಆ ಧರ್ಮದ ಎಲ್ಲರನ್ನೂ ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯೇ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಟೀಕಿಸಿದ್ದಾರೆ. ಇದೀಗ ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮುಸ್ಲಿಂ ಮೀಸಲಾತಿ ಸಮರಕ್ಕೆ ಕಾರಣವಾಗಿದೆ. ಇದೀಗ ಇದರ ಮಧ್ಯೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಪ್ರವೇಶಿಸಿದ್ದು, ಮುಸ್ಲಿಂ ಮೀಸಲಾತಿ ಬಗ್ಗೆ ಸ್ಟಷ್ಟನೆ ನೀಡಿದೆ.

ಮುಸ್ಲಿಂ ಮೀಸಲಾತಿ ಇತಿಹಾಸ ಬಿಚ್ಚಿಟ್ಟ ಶೋಷಿತ ಸಮುದಾಯಗಳ ಮಹಾ ಒಕ್ಕೂಟ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Apr 25, 2024 | 4:24 PM

Share

ಬೆಂಗಳೂರು, (ಏಪ್ರಿಲ್ 25): ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ(Muslim Reservation)  ನೀಡಲು ಕಾಂಗ್ರೆಸ್ ಹೊರಟಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಪ್ರವೇಶಿಸಿದ್ದು, ಮುಸ್ಲಿಂ ಮೀಸಲಾತಿ ಬಗ್ಗೆ ಸ್ಟಷ್ಟನೆ ನೀಡಿದೆ. ಇಂದು (ಏಪ್ರಿಲ್ 25) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಮಾಜಿ ಅಡ್ವೋಕೆಟ್ ಜನರಲ್ ರವಿವರ್ಮ ಕುಮಾರ್, ಮುಸ್ಲಿಮರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಮರಿಗೆ ಕೊಡಲಾಗಿದೆ ಅಂತಿದ್ದಾರೆ. ಪ್ರಧಾನಿಯವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ಮಹಾ ಸುಳ್ಳು. ಚುನಾವಣೆ ಸಂದರ್ಭದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಆಗುತ್ತಿದೆ ಎಂದು ಸ್ಪಷ್ಟಪಡಿಸಿದರು.

1874ರಲ್ಲಿ ಮೀಸಲಾತಿ ಬಂತು. 1876 ರಲ್ಲಿ ಜಾತಿ ಜನಗಣತಿ ನಡೆಯಿತು. ಅದರ ಆಧಾರದ ಮೇಲೆ ಮೀಸಲಾತಿ ಒಡೆಯರ್ ಮೀಸಲಾತಿ ಕೊಟ್ಟರು. 1874ರಲ್ಲಿ 10 ಹುದ್ದೆಗಳಲ್ಲಿ ಬ್ರಾಹ್ಮಣರಿಗೆ 2 ಹುದ್ದೆ, ಉಳಿದ 8 ಹುದ್ದೆ ಮುಸ್ಲಿಂ ಮತ್ತು ಇತರರಿಗೆ ಕೊಡಲಾಯಿತು. 1874ರಿಂದ ಮುಸ್ಲಿಮರಿಗೆ ಮೀಸಲಾತಿ ಇದೆ. ಆದ್ರೆ, ಇದೀಗ ಸತ್ಯವನ್ನು ಮರೆಮಾಚಿ ಸುಳ್ಳು ಹೇಳಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ ರಾಜ್ಯ ಸರ್ಕಾರ: ರಾಷ್ಟ್ರೀಯ ಆಯೋಗದ ತನಿಖೆಯಲ್ಲಿ ಬಹಿರಂಗ

ಮೀಸಲಾತಿ ಬದಲಾವಣೆ ಬಗ್ಗೆ ಈ ಸರ್ಕಾರ ಏನೂ ಮಾಡಿಲ್ಲ. ದೇವರಾಜ್ ಅರಸು ಸರ್ಕಾರ 1972ರಲ್ಲಿ ಹಾವನೂರು ಆಯೋಗ ಮಾಡಿದೆ. 1975 ರಲ್ಲಿ ಆಯೋಗ ವರದಿ ಸಲ್ಲಿಕೆ ಮಾಡಿತ್ತು. ಆದ್ರೆ, ವರದಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. 1977ರಲ್ಲಿ ಹಾವನೂರು ಆಯೋಗದ ವರದಿಯನ್ನು ದೇವರಾಜ್ ಅರಸು ಅವರು ವರದಿ ಜಾರಿ ಮಾಡಿ‌ ಹಿಂದುಳಿದವರಿಗೆ ಮೀಸಲಾತಿ ಕೊಟ್ಟರು. ಜೊತೆಗೆ ಮುಸ್ಲಿಮರನ್ನು ಹಿಂದುಳಿದ ಜಾತಿ ಎಂದು ಮೀಸಲಾತಿ ಕೊಡಲಾಯಿತು ಎಂದರು.

ಮುಸ್ಲಿಮರಿಗೆ ಮೀಸಲಾತಿಗೆ ಸುಮಾರು 150 ವರ್ಷ ಇತಿಹಾಸವಿದೆ. ಇದರ ವಿರುದ್ದ ಕೋ ಚನ್ನಬಸಪ್ಪ ಮೊಕದ್ದಮೆ ಹೂಡಿದ್ದರು. ಲಿಂಗಾಯತ ಪರ ವಾದ ಮಂಡಿಸಿದ್ದರು. ಸೋಮಶೇಖರ್ ಎಂಬುವರು ವಾದಿಯಾಗಿದ್ದರು. ಆದ್ರೆ, 1979ರಲ್ಲಿ ಹೈಕೋರ್ಟ್ ಮುಸ್ಲಿಂ ಮೀಸಲಾತಿ ಪರ ತೀರ್ಪು ನೀಡಿತ್ತು. ಬಳಿಕ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಸುಪ್ರೀಂ ಕೋರ್ಟ್ ಸಹ ಮುಸ್ಲಿಂ ಮೀಸಲಾತಿ ಎತ್ತಿಹಿಡಿಯಿತು. ಪ್ರಧಾನಮಂತ್ರಿ ಸುಳ್ಳು ಹೇಳುತ್ತಿದ್ದಾರೆ. ಇದು ಈಗಿನ ಮೀಸಲಾತಿ ಅಲ್ಲ. ಇದು 150 ವರ್ಷಗಳಿಂದ ಕೊಡಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ವಿರುದ್ಧ ಕಿಡಿ

ಧರ್ಮದ ಆಧಾರಿತ ಮುಸ್ಲಿಂ ಮೀಸಲಾತಿ ಕೊಟ್ಟಿಲ್ಲ. ಅದು ಸುಳ್ಳು. ಇದು ರಾಜಕೀಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಟ್ಟಿದ್ದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಗಂಗಾರಾಮ್ ಅಹೀರ್ ಬಿಜೆಪಿ ಬಾಲಬುಡುಕ. ಚುನಾವಣೆಯಲ್ಲಿ ಸೋತವನು ಅವನು. ಆತನಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಈಗ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಆಗಿದ್ದಾರೆ. 1997ರಲ್ಲಿ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಯಾವತ್ತೂ ರಾಷ್ಟ್ರೀಯ ಆಯೋಗ ಕರ್ನಾಟಕ ಮೀಸಲಾತಿ ಬಗ್ಗೆ ಚಕಾರ ಎತ್ತಿಲ್ಲ. ಮುಸ್ಲಿಂ ಹಿಂದುಗಳ ವಿಂಗಡಣೆ ಪ್ರಯತ್ನದ ಭಾಗವಾಗಿ ಈ ಹೇಳಿಕೆ ಕೊಟ್ಟಿದ್ದಾನೆ. ರಾಷ್ಟ್ರೀಯ ಆಯೋಗಕ್ಕೆ ರಾಜ್ಯದ ಜಾತಿ ಪಟ್ಟಿ ಬಗ್ಗೆ ಮಾತಾಡುವ ಅಧಿಕಾರ ಇಲ್ಲ. ಇದು ಆಯೋಗದ ತಿರ್ಮಾನ ಅಲ್ಲ. ಅಧ್ಯಕ್ಷ ರ ವೈಯಕ್ತಿಕ ಅಭಿಪ್ರಾಯ ಅಷ್ಟೇ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರಕ್ಕೆ ಹಿಂದುಳಿದ ಪಟ್ಟಿ ಮಾಡಲು ಅವಕಾಶ ಇದೆ ಎಂದು ಮೋದಿ ಸರ್ಕಾರ ತಿದ್ದುಪಡಿ ಮಾಡಿದೆ. 15-9-2021ರಲ್ಲಿ 105 ಸಂವಿಧಾನ ತಿದ್ದುಪಡಿ ಮೂಲಕ ಆದೇಶ ಮಾಡಲಾಗಿದೆ. ಸಂವಿಧಾನದ ಸೆಕ್ಷನ್ 147/ಎ/3 ಅನ್ವಯ ಆದೇಶ ಮಾಡಲಾಗಿದೆ. ಇಷ್ಟಾದರೂ ಆಯೋಗದ ಅಧ್ಯಕ್ಷ ಸುಳ್ಳು ಹೇಳಿಕೆ ನೀಡಿದ್ದಾನೆ. ಬಿಜೆಪಿ ಪರವಾಗಿ ಹೇಳಿಕೆ ನೀಡಿದ್ದಾನೆ. ಆಯೋಗದ ಅಧ್ಯಕ್ಷನ ಹೇಳಿಕೆ ಖಂಡಿಸುತ್ತೇನೆ. ಅಧ್ಯಕ್ಷ ಸ್ಥಾನದಿಂದ ಆತನನ್ನು ತೆಗೆಯಬೇಕು. ಆತನ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಈ ಹೇಳಿಕೆ ಚುನಾವಣೆಗಾಗಿಯೇ ನೀಡಿದ ಹೇಳಿಕೆ. ಆತನನ್ನು ತಕ್ಷಣ ವಜಾ ಮಾಡಬೇಕು. ಮುಸ್ಲಿಮರಿಗೆ ಕೊಟ್ಟ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಕಿತ್ತು ಹಾಕಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಈ ಪ್ರಕರಣದ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ, ಮೀಸಲಾತಿ ಆದೇಶ ಜಾರಿ ಮಾಡಲ್ಲ ಅಂತ ಹೇಳಿತ್ತು. ಅದು ಇನ್ನೂ ಕೋರ್ಟ್ ನಲ್ಲಿದೆ.

ಮುಸ್ಲಿಮರಿಗೆ 4% ಮೀಸಲಾತಿ ರಾಮಕೃಷ್ಣ ಹೆಗಡೆ ಸರ್ಕಾರ ಮಾಡಿದ್ದು. ಲಿಂಗಾಯತರಿಗೆ ಹಿಂದುಳಿದ 3ಬಿ ಅನ್ವಯ ಮೀಸಲಾತಿ ಕೊಡಲಾಯಿತು. 2ಬಿ ಅನ್ವಯ ಮುಸ್ಲಿಮರಿಗೆ ಮೀಸಲಾತಿ ನೀಡಲಾಯಿತು. ಇದು ಕಾಂಗ್ರೆಸ್ ಸರ್ಕಾರ ಮಾಡಿದ್ದಲ್ಲ. ರಾಮಕೃಷ್ಣ ಹೆಗಡೆ ಸರ್ಕಾರ ಮಾಡಿದ್ದು. ದೇವೆಗೌಡರು ಆ ಸರ್ಕಾರದಲ್ಲಿ ಈ ಆದೇಶ ಮಾಡಿದ್ದು. ಇದನ್ನು ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ, ಶೆಟ್ಟರ್ ಸರ್ಕಾರ ಈ ಮೀಸಲಾತಿಯನ್ನು ಮುಂದುವರಿಸಿದೆ ಎಂದು ವಿವರಿಸಿದರು.

ಆಯೋಗದ ಅಧ್ಯಕ್ಷನಾಗಿ ಆತ ಮುಂದುವರಿಯಬಾರದು. ಚುನಾವಣಾ ಆಯೋಗ ಎನು ಕ್ರಮ ಕೈಗೊಳ್ಳಲಿದೆ ಎಂದು ನೋಡುತ್ತೇನೆ. ಸೂಕ್ತ ಕಾನೂನು ಕ್ರಮವನ್ನು ಜರುಗಿಸುವ ಬಗ್ಗೆ ತಿರ್ಮಾನ ಮಾಡುತ್ತೇವೆ ಎಂದು ರವಿವರ್ಮ ಕುಮಾರ್ ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:01 pm, Thu, 25 April 24