ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ ರಾಜ್ಯ ಸರ್ಕಾರ: ರಾಷ್ಟ್ರೀಯ ಆಯೋಗದ ತನಿಖೆಯಲ್ಲಿ ಬಹಿರಂಗ
ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲಿಯೇ ಕರ್ನಾಟಕ ಸರ್ಕಾರವು (Karnataka Government) ಮಹತ್ವದ ತೀರ್ಮಾನವೊಂದು ತೆಗೆದುಕೊಂಡಿದ್ದು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಲೋಕಸಭೆ ಅಖಾಡದಲ್ಲಿ ಒಬಿಸಿ ವಾರ್ ಶುರುವಾಗಿದೆ.
ಬೆಂಗಳೂರು, (ಏಪ್ರಿಲ್ 24): ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲಿಯೇ ಒಬಿಸಿ ವಾರ್ ಶುರುವಾಗಿದೆ. ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ (reservation) ನೀಡುವ ದಿಸೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಮರನ್ನು (Muslim) ಇತರೆ ಹಿಂದುಳಿದ ವರ್ಗಗಳ ಕೆಟಗರಿಗೆ ಸೇರಿಸಿದೆ. ಆದ್ರೆ, ಇದಕ್ಕೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು (NCBC) ಆಕ್ರೋಶ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರವು ಮುಸ್ಲಿಮರಿಗೆ ಮೀಸಲಾತಿ ನೀಡುವ ದಿಸೆಯಲ್ಲಿ ಆ ಧರ್ಮದ ಎಲ್ಲರನ್ನೂ ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯೇ ಮಾಹಿತಿ ನೀಡಿದೆ. “ಮೀಸಲಾತಿ ನೀಡಲು ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿ ಕೆಟಗರಿಗೆ ಸೇರಿಸಿದೆ. ಇದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಒಬಿಸಿ ಮೀಸಲಾತಿ ನೀಡಬೇಕೇ ಹೊರತು, ಇಡೀ ಧರ್ಮವನ್ನೇ ಒಬಿಸಿಗೆ ಸೇರಿಸಿರುವುದು ಸರಿಯಲ್ಲ ಎಂದು ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.
ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯು ದಾಖಲೆಗಳನ್ನೂ ನೀಡಿದೆ. ಮಾಹಿತಿ ಪ್ರಕಾರ, “ಕರ್ನಾಟಕಲ್ಲಿ ಮುಸ್ಲಿಮರ ಸಂಖ್ಯೆ ಶೇ.12.92ರಷ್ಟಿದೆ. ಕೆಟಗರಿ II-B ಅನ್ವಯ ಕರ್ನಾಟಕದಲ್ಲಿರುವ ಎಲ್ಲ ಮುಸ್ಲಿಮರು ಒಬಿಸಿ ಕೆಟಗರಿ ವ್ಯಾಪ್ತಿಗೆ ಸೇರುತ್ತಾರೆ. ಕೆಟಗರಿ 1ರಲ್ಲಿ 17 ಮುಸ್ಲಿಂ ಸಮುದಾಯಗಳು, 2ಎ ಕೆಟಗರಿಯಲ್ಲಿ 19 ಮುಸ್ಲಿಂ ಸಮುದಾಯಗಳು ಬರುತ್ತವೆ. ಇದು ಸಾಮಾಜಿಕ ನ್ಯಾಯ ತತ್ವದ ವಿರುದ್ಧದ ತೀರ್ಮಾನವಾಗಿದೆ ಎಂಬುದಾಗಿ ಎನ್‌ಸಿಬಿಸಿ ತಿಳಿಸಿದೆ.
ಹಿಂದುಗಳು, ಮುಸ್ಲಿಮರು ಸೇರಿ ಎಲ್ಲ ಧರ್ಮಗಳಲ್ಲಿಯೇ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದವರಿಗೆ ಮಾತ್ರ ಒಬಿಸಿ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಒಂದಿಡೀ ಧರ್ಮಕ್ಕೇ ಒಬಿಸಿ ಮೀಸಲಾತಿ ನೀಡುವುದು ಆ ಮೀಸಲಾತಿಯ ತತ್ವಕ್ಕೆ ವಿರುದ್ಧವಾಗಿದೆ. ಆದರೆ, ಎಲ್ಲ ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರ್ಪಡೆ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಒಬಿಸಿ ಕೆಟಗರಿ ವ್ಯಾಪ್ತಿಯ ಹಿಂದುಳಿದ ಸಮುದಾಯದವರ ಹಕ್ಕುಗಳನ್ನು ಕಸಿದುಕೊಂಡಿದೆ. ಹಾಗೆಯೇ, ಮೀಸಲಾತಿ ನೀಡಿರುವ ಕುರಿತು ಯಾವುದೇ ಮಾಹಿತಿಯನ್ನೂ ರಾಜ್ಯ ಸರ್ಕಾರ ಒದಗಿಸಿಲ್ಲ ಎಂಬುದಾಗಿ ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಲಾಗಿರೋ ಮೀಸಲಾತಿಯಲ್ಲಿ ಅಕ್ರಮ ನಡೆದಿರೋದು ತನಿಖೆಯಲ್ಲಿ ಬಯಲಾಗಿದೆ ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಹೇಳಿದೆ. ಅಂದಹಾಗೆ ಮುಸ್ಲಿಮರಿಗೆ 2002ರಲ್ಲಿ ಶೇಕಡಾ 4ರಷ್ಟು ಮೀಸಲಾತಿ ನೀಡಲಾಗಿದೆ. ಹೀಗಿದ್ದರೂ ಕರ್ನಾಟಕದ 930 ಮೆಡಿಕಲ್ ಸೀಟುಗಳಲ್ಲಿ ಒಬಿಸಿ ಕೋಟಾದಡಿ ಶೇಕಡಾ 16ರಷ್ಟು ಮೀಸಲಾತಿ ನೀಡಲಾಗಿದೆ. ಮುಸ್ಲಿಮರನ್ನ ಒಬಿಸಿ ಕೋಟಾಗೆ ಸೇರಿಸಲಾಗಿದೆ. ಇದ್ರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಆಯೋಗ ಕಟುವಾಗಿ ಟೀಕಿಸಿದೆ.
As per the data from Karnataka government, all castes and communities of Muslims of Karnataka have been included in the list of OBCs for reservation in employment and educational institutions under the state govt. Under Category II-B, all Muslims of Karnataka state have been… pic.twitter.com/eh1IYF3FX0
— ANI (@ANI) April 24, 2024
ಕರ್ನಾಟಕದಲ್ಲಿ ಒಬಿಸಿಗಳಿಗೆ ಒಟ್ಟು ಶೇಕಡಾ 32ರಷ್ಟು ಮೀಸಲಾತಿ ಇದೆ. ಅದರಲ್ಲೂ ಎಸ್‌ಸಿ ಎಸ್ಟಿಗಳಿಗೆ ಪ್ರತ್ಯೇಕವಾಗಿದೆ. ಬಳಿಕ ಅದರಲ್ಲಿ ಮರುವಿಂಗಡಣೆ ಮಾಡಲಾಗಿದೆ. ಕೆಟಗರಿ 1, ಕೆಟಗರಿ 2B, ಕೆಟಗರಿ 1B, ಕೆಟಗರಿ 3B, ಕೆಟಗರಿ 2A ಮಾಡಲಾಗಿದೆ. ಈ ಐದೂ ಕೆಟಗರಿ ಪೈಕಿ ಕೆಟಗರಿ 1ರಲ್ಲಿ 95 ಜಾತಿಗಳಿದ್ದಾವೆ. ಅದರಲ್ಲಿ 17 ಜಾತಿಗಳು ಮುಸ್ಲಿಮರದ್ದಾಗಿವೆ. ಕೆಟಗರಿ1B ಹಾಗೂ ಕೆಟಗರಿ 2Bಯಲ್ಲೂ 103 ಜಾತಿಗಳಿವೆ. ಅದರಲ್ಲಿ ಹಲವು ಮುಸ್ಲಿಂ ಸಮುದಾಯದ ಜಾತಿಗಳಿವೆ. ಇಷ್ಟೆಲ್ಲಾ ಇದ್ದರೂ ಕರ್ನಾಟಕ ಸರ್ಕಾರ 2002ರಿಂದ ಶೇಕಡಾ 4ರಷ್ಟು ಮೀಸಲಾತಿ ಮುಸ್ಲಿಮರಿಗೆ ಕೊಟ್ಟಿದೆ. ಅಂದ್ರೆ ಎಲ್ಲಾ ಮುಸ್ಲಿಮರು ಒಬಿಸಿಯಲ್ಲಿದ್ದಾರೆ.
OBC ಮೀಸಲಾತಿ ಕದ್ದು ಮುಸ್ಲಿಮರಿಗೆ ಕೊಟ್ಟಿದ್ದಾರೆಂದ ಮೋದಿ
ಕಾಂಗ್ರೆಸ್‌ನವರು ನಿಮ್ಮ ಆಸ್ತಿ, ನಿಮ್ಮ ಸಂಪತ್ತು, ನಿಮ್ಮ ಚಿನ್ನವನ್ನ ಕಸಿದುಕೊಳ್ತಾರೆ ಅಂತಾ ಬ್ರಹ್ಮಾಸ್ತ್ರ ಹೂಡಿರೋ ಪ್ರಧಾನಿ ಮೋದಿ ಇವತ್ತು ಮತ್ತೊಂದು ಬಾಣ ಬಿಟ್ಟಿದ್ರು. ಎಸ್‌ಸಿ, ಎಸ್‌ಟಿ, ಒಬಿಸಿ ಕೋಟಾದಲ್ಲಿರೋ ಮೀಸಲಾತಿಯನ್ನ ಕದ್ದು ಧರ್ಮ ಆಧಾರದಲ್ಲಿ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದು, ಇದಕ್ಕೆ ಕರ್ನಾಟಕವನ್ನೇ ಉದಾಹರಣೆಯಾಗಿ ಕೊಟ್ರು.
ಹಿಂದುಳಿದ ಆಯೋಗದ ತನಿಖೆಯಿಂದ ಬಯಲಾದ ವಿಚಾರವೇ ಈಗ ಲೋಕಸಭಾ ಕಣದೊಳಗೆ ಸದ್ದು ಮಾಡ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಭುಗಿಲೆದ್ದಿದ್ದ ಮುಸ್ಲಿಂ ಮೀಸಲಾತಿ ಕಿಚ್ಚು ಮತ್ತೆ ಜ್ವಾಲೆಯಾಗಿ ಧಗಧಗಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.