ಬೆಂಗಳೂರು: ಸುಪ್ರೀಂಕೋರ್ಟ್ ನಿದೇರ್ಶನದಂತೆ ಕಬ್ಬಿಣದ ಅದಿರು ಗಣಿ ಕಂಪನಿಗಳಿಂದ ದಂಡದ ರೂಪದಲ್ಲಿ ಕಳೆದ ಆರು ವರ್ಷಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ರೂಪಾಯಿ ನಿಧಿಯನ್ನು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪಡೆಯಲು ಕಾನೂನಿನ ನೆರವು ನೀಡಬೇಕೆಂದು ಸಚಿವ ಮುರುಗೇಶ್ ನಿರಾಣಿ ಅವರು, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಶನಿವಾರ ಬೆಂಗಳೂರಿನ ಬಿಜೆಪಿ ಕಚೇರಿಯನ್ನು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ನಿರಾಣಿ ಮಾತುಕತೆ ನಡೆಸಿದ್ದಾರೆ.
ಕಬ್ಬಿಣದ ಅದಿರು ಗಣಿಗಳಿಂದ ದಂಡ ಮತ್ತು ಲೆವಿ ರೂಪದಲ್ಲಿ 18,000 ಕೋಟಿ ರೂಪಾಯಿಯನ್ನು ಕಳೆದ ಆರು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೂಲಕ ಸಂಗ್ರಹಿಸಲಾಗಿದೆ. ಸಂಗ್ರಹವಾದ ನಿಧಿಯನ್ನು ರಾಜ್ಯದ ಬೊಕ್ಕಸಕ್ಕೆ ವರ್ಗಾಯಿಸಲು ಕಾನೂನು ನೆರವು ನೀಡುವಂತೆ ಕೋರಿದರು.
ಇದೇ ವೇಳೆ ನಿರಾಣಿ ಅವರು,ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಬಳ್ಳಾರಿ , ಚಿತ್ರದುರ್ಗ ಮತ್ತು ತುಮಕೂರುಗಳಿಗೆ ಪುನರ್ವಸತಿ ಕಲ್ಪಿಸಲು – ಸಿಇಪಿಎಂಐಜಡ್ ಅನುಷ್ಠಾನ ಮಾಡಲು ಅವಕಾಶ ನೀಡಬೇಕೆಂದು ಆಗ್ರಹ ಮಾಡಿದರು. ಇದು ದೀರ್ಘಾವಧಿಯ ಬೇಡಿಕೆಯಾಗಿದ್ದು, ಆದಷ್ಟು ಬೇಗ ಸೂಕ್ತವಾದ ನಿರ್ಧಾರ ತೆಗೆದುಕೊಂಡರೆ, ಹೆಚ್ಚಿನ ಅನುಕೂಲವಾಗಲಿದೆ ಜೋಶಿ ಅವರಿಗೆ ನಿರಾಣಿಯವರು ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಪ್ರಹ್ಲಾದ್ ಜೋಶಿ,ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗಾಗಿ ದೆಹಲಿಗೆ ಬರುವಂತೆ ನಿರಾಣಿಯವರಿಗೆ ಸೂಚನೆ ನೀಡಿದ್ದಾರೆ.
Published On - 9:59 pm, Sat, 6 February 21