ಬೆಂಗಳೂರು: ದಿನದಿಂದ ದಿನಕ್ಕೆ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ಸೋಮವಾರದಿಂದ ನಗರದ ಕೆಲವೆಡೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಕಡ್ಡಾಯವಾಗಿರಲಿದೆ. ಹೆಲ್ಮೆಟ್ ಇಲ್ಲದಿದ್ದರೆ ದಂಡ ಖಚಿತ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಚಿನ್ನಾಭರಣ ಅಂಗಡಿ ತೆರೆಯಲು ಅನುಮತಿ:
ಸಂಜೆ 7 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುತ್ತೆ. ನಗರದಲ್ಲಿ ಚಿನ್ನಾಭರಣ ಅಂಗಡಿ ತೆರೆಯಲು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಅನುಮತಿ ನೀಡಲಾಗಿದೆ. ನಗರದಲ್ಲಿ ಎಲ್ಲಾ ರೀತಿಯ ಅಂಗಡಿಗಳನ್ನು ಓಪನ್ ಮಾಡಬಹುದು. ಅನಗತ್ಯವಾಗಿ ಓಡಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಸ್ ಚೆಕ್ ಮಾಡಲ್ಲ, ಐಡಿ ಕಾರ್ಡ್ ಕಡ್ಡಾಯ:
ನಾಳೆಯಿಂದ ಯಾರಿಗೂ ಪಾಸ್ ಚೆಕ್ ಮಾಡುವುದಿಲ್ಲ. ಐಡಿ ಕಾರ್ಡ್ ಕಡ್ಡಾಯ, ಅಗತ್ಯವಿದ್ರೆ ಮಾತ್ರ ಹೊರಗೆಬನ್ನಿ. ಅನುಮಾನ ಬಂದ್ರೆ ಮಾತ್ರ ಪಾಸ್ ಚೆಕ್ ಮಾಡುತ್ತೇವೆ. ಕಂಟೇನ್‌ಮೆಂಟ್ ಜೋನ್ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆಸಬಹುದು. ಪಾತ್ರೆ, ಚಿನ್ನ, ಬೆಳ್ಳಿ ಅಂಗಡಿ ಓಪನ್ ಇರುತ್ತೆ. ಆದ್ರೆ, ಸಂಜೆ 6.30ರೊಳಗೆ ಎಲ್ಲಾ ವ್ಯಾಪಾರ ಸ್ಥಗಿತಗೊಳಿಸಬೇಕು.
ನಗರದ ಮುಖ್ಯ ರಸ್ತೆಗಳಲ್ಲಿ ಸಂಚಾರ ಎಂದಿನಂತೆ ಬಂದ್ ಆಗಲಿದೆ. ವಾಹನಗಳು ನಿಧಾನವಾಗಿ ಚಲಿಸಬೇಕು. ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ವಹಿಸ್ತೇವೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಗ್ರಾಹಕರ ಮೇಲೆ ಅಂಗಡಿಯವರು ನಿಗಾ ವಹಿಸಬೇಕು. ಇಲ್ಲದಿದ್ರೆ ಅಂಗಡಿಗಳ ಓಪನ್‌ಗೆ ಅನುಮತಿ ನೀಡುವುದಿಲ್ಲ.
ನಿಯಮ ಉಲ್ಲಂಘಿಸಿದ್ರೆ ಕೇಸ್ ದಾಖಲು:
ಮದ್ಯದಂಗಡಿ 6 ಗಂಟೆಗೆ ಬಂದ್ ಮಾಡಲು ಅಬಕಾರಿ ಇಲಾಖೆಗೆ ಸೂಚನೆ ನೀಡಿದ್ದೇವೆ. ಮದ್ಯದಂಗಡಿ ಎದುರು ಬ್ಯಾರಿಕೇಡ್ ಹಾಕಲಾಗುತ್ತೆ. ಅಲ್ಲಿ ಖಾಸಗಿ ಭದ್ರತೆ, ಸಿಸಿಟಿವಿ, ಡಿವಿಆರ್ ಕಡ್ಡಾಯ. ಉಲ್ಲಂಘನೆ ಮಾಡಿದ್ರೆ ಐಪಿಸಿ 188 ಸೆಕ್ಷನ್, NDMA 51ರ ಅಡಿ ಪ್ರಕರಣ ದಾಖಲಿಸಲಾಗುವುದು.
ಮದುವೆ ಕಾರ್ಯಕ್ರಮಗಳಲ್ಲಿ 50 ಜನ ಮಾತ್ರ ಭಾಗಿ:
ಕೇಂದ್ರ ಸರ್ಕಾರದ ಸಡಿಲಿಕೆ ದುರುಪಯೋಗ ಪಡಿಸಿಕೊಂಡ್ರೆ ಕ್ರಮ ಕೈಗೊಳ್ಳಲಾಗುವುದು. ಮದುವೆ ಕಾರ್ಯಕ್ರಮಗಳಲ್ಲಿ 50 ಜನ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿದೆ. ದೇವಸ್ಥಾನ, ಮಸೀದಿ, ಮಂದಿರ ಎಂದಿನಂತೆ ಕ್ಲೋಸ್ ಆಗಲಿದೆ. ನಾಳೆ ಯಾವುದೇ ಬಿಎಂಟಿಸಿ ಬಸ್, ಮೆಟ್ರೋ ರೈಲು ಇರುವುದಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
Published On - 8:06 pm, Sun, 3 May 20