ಮೈಸೂರು: ಮೈಸೂರು ಜಿಲ್ಲಾಡಳಿತ ನಿನ್ನೆಯಷ್ಟೇ (ಸೆ.28) ಬಿಡುಗಡೆ ಮಾಡಿದ್ದ ಮೈಸೂರು ದಸರಾ ಗೋಲ್ಡ್ ಕಾರ್ಡ್ (Mysore Dasara Gold Card) ಇದೀಗ ಕಾಳಸಂತೆ (Black Market)ಯಲ್ಲಿ ಮಾರಾಟ ಆಗಲು ಪ್ರಾರಂಭವಾಗಿದೆ. ದಿನಗಳು ಉರುಳುತ್ತಿದ್ದಂತೆ ಇದರ ಬೆಲೆಯಲ್ಲೂ ಏರಿಕೆ ಮಾಡಲಾಗುತ್ತಿದೆ. ಐದು ಸಾವಿರ ರೂಪಾಯಿ ಮೌಲ್ಯದ ಒಂದು ಗೋಲ್ಡ್ ಕಾರ್ಡ್ ಅನ್ನು ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು, ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಅಂತನೂ ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಟಿವಿ9 ಪ್ರತಿನಿಧಿ ಕ್ರಾಸ್ ಚೆಕ್ ಮಾಡುವ ನಿಟ್ಟಿನಲ್ಲಿ ದೂರವಾಣಿ ಕರೆ ಮಾಡಿದಾಗ 5 ಗೋಲ್ಡ್ ಕಾರ್ಡ್ ಖರೀದಿಸಿದರೆ 7 ಸಾವಿರಕ್ಕೆ ನೀಡುವುದಾಗಿ ಆಫರ್ ನೀಡಿದ್ದಾರೆ. ಅಷ್ಟಕ್ಕೂ ಈ ಕಾಳಸಂತೆಯಲ್ಲಿ ಸವಾರಿ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಹೆಸರಿನಲ್ಲಿ ದಂಧೆ ನಡೆಸಲಾಗುತ್ತಿದೆ.
ವಿಶ್ವವಿಖ್ಯಾತ ನಾಡಹಬ್ಬ ಸಾಂಕೃತಿಕ ಐತಿಹ್ಯ ಹೊಂದಿರುವ ಮೈಸೂರು ದಸರಾ ಮಹೋತ್ಸವವನ್ನು ವೀಕ್ಷಿಸಲು ದೇಶಿ, ವಿದೇಶಿ ಪ್ರವಾಸಿಗಳಿಗೆ ಅನುಕೂಲವಾಗಲೆಂದು ಮೈಸೂರು ಜಿಲ್ಲಾಡಳಿತವು ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿತ್ತು. ಈ ಗೋಲ್ಡ್ ಕಾರ್ಡ್ನ್ನು ಆನ್ಲೈನ್ ಮೂಲಕ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಪ್ರತಿ ಗೋಲ್ಡ್ ಕಾರ್ಡ್ಗೆ 4,999 ರೂಪಾಯಿ ನಿಗದಿ ಮಾಡಲಾಗಿದೆ. ಅದಾಗ್ಯೂ ಇಂದಿನಿಂದ ಕೆಎಸ್‌ಡಿಟಿಸಿ (ಪ್ರವಾಸೋದ್ಯಮ ಇಲಾಖೆ) ಮಯೂರ ಹೋಟೆಲ್ ಹತ್ತಿರ ಗೋಲ್ಡ್ ಕಾರ್ಡ್ನ್ನು ವಿತರಿಸಲಾಗುತ್ತದೆ. ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ಗೋಲ್ಡ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಈ ಎಲ್ಲದರ ನಡುವೆ ಗೋಲ್ಡ್ ಕಾರ್ಡ್ ಕಾಳಸಂತೆಯಲ್ಲಿ ಮಾರಾಟ ಆಗಲು ಪ್ರಾರಂಭವಾಗಿದೆ. 4999 ರೂ. ಮೌಲ್ಯದ ಗೋಲ್ಡ್ ಕಾರ್ಡ್ ಅನ್ನು ಬ್ಲಾಕ್ ಮಾರ್ಕೆಟ್ನಲ್ಲಿ 8 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದ್ದು, ಸವಾರಿ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಹೆಸರಿನಲ್ಲಿ ಈ ಮಾರಾಟ ನಡೆಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಇನ್ನೂ ಸ್ವಲ್ಪ ದಿನ ಕಳೆದರೆ ಪ್ರತಿ ಕಾರ್ಡ್ ಬೆಲೆ 10 ಸಾವಿರ ರೂ. ಆಗುತ್ತೆ ಎಂಬ ವದಂತಿಯೂ ಇದೆ.
ಈ ಎಲ್ಲದರ ಬಗ್ಗೆ ಮಾಹಿತಿ ತಿಳಿದ ಟಿವಿ9 ಪ್ರತಿನಿಧಿ ಕ್ರಾಸ್ ಚೆಕ್ ಮಾಡುವ ನಿಟ್ಟಿನಲ್ಲಿ ದೂರವಾಣಿ ಕರೆ ಮಾಡಿದಾಗ ಇನ್ನು ಎರಡೇ ಗೋಲ್ಡ್ ಕಾರ್ಡ್ ಉಳಿದಿದೆ ಎಂದು ಮಾರಾಟಗಾರರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ, ನೀವು ಐದು ಗೋಲ್ಡ್ ಕಾರ್ಡ್ ಖರೀದಿಸುವುದಾದರೆ ಅದನ್ನು 7 ಸಾವಿರಕ್ಕೆ ನೀಡುವುದಾಗಿ ಟ್ರಾವೆಲ್ಸ್ ಎಕ್ಸಿಕ್ಯೂಟಿವ್ ಆಫರ್ ಹೇಳಿದೆ.
ಟಿವಿ9 ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ
ದಸರಾ ಗೋಲ್ಡ್ ಕಾರ್ಡ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಟಿವಿ9 ವರದಿ ಮಾಡಿದ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಪತ್ರಿಕಾ ಪ್ರಕಟಣೆ ಹೊರಡಿಸಿ ಕಾಳಸಂತೆಯಿಂದ ಕಾರ್ಡ್ ಖರೀದಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಟ್ರಾವೆಲ್ ಏಜೆನ್ಸಿಯಿಂದ ಖರೀದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿರುವ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ಕಾಳಸಂತೆಯಲ್ಲಿ ಕಾರ್ಡ್ ಮಾರಾಟವಾಗುತ್ತಿರುವ ಬಗ್ಗೆ ಈಗಾಗಲೇ ಕಾನೂನು ಕ್ರಮ ವಹಿಸಲಾಗಿದೆ ಎಂದಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Thu, 29 September 22