ಮೈಸೂರು: ಹಿಂದೂ ಮಹಿಳೆಯ ಶವ ಹೊತ್ತು ಸಾಗಿದ ಮುಸ್ಲಿಮರು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಇಂತಹ ಮಾನವೀಯ ಘಟನೆ ಮಂಡಿ ಮೊಹಲ್ಲಾದಲ್ಲಿರುವ ಸುನ್ನಿ ಚೌಕ ಪ್ರದೇಶದಲ್ಲಿ ನಡೆದಿದೆ. ಶಿವಮ್ಮ ಎಂಬ ಮಹಿಳೆ ಸುಮಾರು 30 ವರ್ಷದಿಂದಲೂ ಇಲ್ಲೇ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದರು. ಆಕೆಗೆ ಮಗ, ಮಗಳು ಇದ್ದರೂ ಅಲ್ಲಿಗೆ ಹೋಗದೇ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದರು. ಮಗ ಮಾತ್ರ ಕೆಲವೊಮ್ಮೆ ಬಂದು ತಾಯಿಯನ್ನು ಮಾತನಾಡಿಸಿ ಹೊಗುತ್ತಿದ್ದ. ಆದರೆ ಶುಕ್ರವಾರದಂದು ಶಿವಮ್ಮ ಮೃತಪಟ್ಟಿದ್ದರು. ವಿಷಯ ತಿಳಿದ ಒಂದಷ್ಟು ಮುಸ್ಲಿಮರು ಶಿವಮ್ಮ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
ಶಿವಮ್ಮ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಮುಸ್ಲಿಮರು ಅಂತ್ಯಸಂಸ್ಕಾರ ನೆರವೇರಿಸಲು ಮುಂದೆಬಂದಿದ್ದಾರೆ. ಸುನ್ನಿ ಚೌಕದಿಂದ ಬನ್ನಿಮಂಟಪದ ಜೋಡಿ ತೆಂಗಿನ ಮರ ರುದ್ರಭೂಮಿಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಬಂದಿದ್ದಾರೆ. ಈ ವೇಳೆ ಮುಸ್ಲಿಂ ಬಾಂಧವರೇ ಶವಕ್ಕೆ ಹೆಗಲು ಕೊಟ್ಟಿದ್ದಾರೆ. ರುದ್ರಭೂಮಿಯಲ್ಲಿ ಶಿವಮ್ಮಳ ಮಗ, ಮಗಳು, ಸೊಸೆ ಹಾಗೂ ಮೊಮ್ಮಕ್ಕಳು ವಿಧಿವತ್ತಾಗಿ ಪೂಜೆ ಸಲ್ಲಿಸಿದ ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮುಸ್ಲಿಮರು ಕೊನೆವರೆಗೂ ಅಲ್ಲೇ ಇದ್ದು ಎಲ್ಲಾ ನೆರವನ್ನು ನೀಡಿದ್ದಾರೆ. ಶಿವಮ್ಮಳ ಕೊನೆ ಆಸೆ ಸಹಾ ಇದೇ ಆಗಿತ್ತಂತೆ. ಅವರು ಬದುಕಿದ್ದಾಗಲೇ ಮುಸ್ಲಿಮರೇ ನನ್ನ ಅಂತ್ಯ ಸಂಸ್ಕಾರ ಮಾಡಬೇಕು ಅಂತಾ ಮನವಿ ಮಾಡಿದ್ದರಂತೆ.
ಸದ್ಯ ಎಲ್ಲೆಡೆ ಧರ್ಮ ದಂಗಲ್ ಜೋರಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ರಾಗ ದ್ವೇಷದಿಂದ ಹೊಡೆದಾಟ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಈ ರೀತಿಯ ಸಾಮರಸ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ಆಗಲಿ. ಎಲ್ಲೆಡೆ ಶಾಂತಿ ನೆಮ್ಮದಿ ನೆಲಸಲಿ. ಇದು ಎಲ್ಲರಿಗೂ ಮಾದರಿಯಾಗಲಿ ಅನ್ನೋದೆ ಎಲ್ಲರ ಆಶಯ.
ವರದಿ: ರಾಮ್, ಟಿವಿ9 ಮೈಸೂರು
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Sun, 13 November 22