ಸಾರಿಗೆ ಮುಷ್ಕರ ಮುಂದುವರೆದರೆ ಜನರೇ ಬಸ್ ಖಾಸಗೀಕರಣದ ಧ್ವನಿ ಎತ್ತುತ್ತಾರೆ -ಸಂಸದ ಪ್ರತಾಪ್ ಸಿಂಹ ಗುಡುಗು

privatization of public transportation: ಪ್ರೊ.‌ ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಖಂಡರು, ಹೋರಾಟದ ಬಗ್ಗೆ ಗೌರವವಿತ್ತು. ಅವರಿಬ್ಬರು ಅಸ್ತಂಗತ ಆದ ನಂತರ ಈಗ ಅಂತಹ ಮುಖ ಹೋರಾಟದಲ್ಲಿ ಇಲ್ಲ. ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಆಗುತ್ತಿದೆ.

  • TV9 Web Team
  • Published On - 10:47 AM, 8 Apr 2021
ಸಾರಿಗೆ ಮುಷ್ಕರ ಮುಂದುವರೆದರೆ ಜನರೇ ಬಸ್ ಖಾಸಗೀಕರಣದ ಧ್ವನಿ ಎತ್ತುತ್ತಾರೆ -ಸಂಸದ ಪ್ರತಾಪ್ ಸಿಂಹ ಗುಡುಗು
ಸಾರಿಗೆ ಸಿಬ್ಬಂದಿ ಮುಷ್ಕರ ಮತ್ತು ಸಂಸದ ಪ್ರತಾಪ್ ಸಿಂಹ

ಮೈಸೂರು: ರೈತರ ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ KSRTC ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ನಾಯಕನನ್ನಾಗಿ ಮಾಡಿಕೊಂಡು ಹೋರಾಟ ಮಾಡುತ್ತಿರುವುದೇ ತಪ್ಪು ನಿರ್ಧಾರ. KSRTC ಈಗ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಹೋರಾಟ ನಡೆಸುವುದು ಸರಿಯಲ್ಲ. ಈಗ ಹೋರಾಟ ಮುಂದುವರಿದರೆ ಖಾಸಗೀಕರಣದ ಕೂಗು ಏಳುತ್ತದೆ. ಜನರೇ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಬಸ್ ಬಂದ್ ಹೋರಾಟವನ್ನು ಟೀಕಿಸಿದ್ದಾರೆ.

ಜನರು ಈ ರೀತಿ ಧ್ವನಿ ಎತ್ತುವಂತೆ ಮಾಡಬೇಡಿ. ಕೆಎಸ್​ಆರ್​ಟಿಸಿ ಸಿಬ್ಬಂದಿ ಮೇಲೆ ಮೇಲೆ ಜನರಿಟ್ಟಿರುವ ಪ್ರೀತಿ ಕಳೆದುಕೊಳ್ಳಬೇಡಿ. ಎಸ್ಮಾ ಜಾರಿ ಮಾಡುವ ಪರಿಸ್ಥಿತಿ ತಂದುಕೊಳ್ಳಬೇಡಿ. ಸಿದ್ದರಾಮಯ್ಯ ಬೇಡಿಕೆ ಈಡೇರಿಸಿ ಎಂದು ಹೇಳುತ್ತಾರೆ. ಆದರೆ, ಅವರ ಅವಧಿಯಲ್ಲಿ ಈ ಕೆಲಸ ಮಾಡಬಹುದಿತ್ತಲ್ಲಾ? ಎಂದು ಅವರು ಪ್ರಶ್ನಿಸಿದರು.

ಯಾರ ಹೆಸರನ್ನೂ ನೇರವಾಗಿ ಹೇಳದೇ ಟೀಕೆ ಮುಂದುವರೆಸಿದ ಸಂಸದ ಪ್ರತಾಪ್ ಸಿಂಹ, ‘ಆ ಮುಖಂಡನನ್ನು ಕೆಎಸ್​ಆರ್​ಟಿಸಿ ನೌಕರರು ತಮ್ಮ ನಾಯಕ ಎಂದು ಮಾಡಿಕೊಡದ್ದೇ ತಪ್ಪು ನಿರ್ಧಾರ. ರೈತರನ್ನು ದಾರಿ ತಪ್ಪಿಸಿದವರನ್ನು ಕೆಎಸ್​ಆರ್​ಟಿಸಿ ನೌಕರರು ತಮ್ಮ ನಾಯಕನಾಗಿ ಮಾಡಿಕೊಂಡಾಗ ಇವರು ದಾರಿ ತಪ್ಪದೆ ಇರುತ್ತಾರಾ?

ಪ್ರೊ.‌ ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಖಂಡರು, ಹೋರಾಟದ ಬಗ್ಗೆ ಗೌರವವಿತ್ತು. ಅವರಿಬ್ಬರು ಅಸ್ತಂಗತ ಆದ ನಂತರ ಈಗ ಅಂತಹ ಮುಖ ಹೋರಾಟದಲ್ಲಿ ಇಲ್ಲ. ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಆಗುತ್ತಿದೆ. ಕೆಎಸ್​ಆರ್​ಟಿಸಿ ನೌಕರರು ರಾಜ್ಯ ಸರಕಾರ ಸಂಕಷ್ಟದಲ್ಲಿ ಇರುವಾಗ ಈ ರೀತಿ ಹೋರಾಟಕ್ಕೆ ಇಳಿಯುವುದು ತಪ್ಪು. ಇದು ಮುಂದುವರಿದರೆ ಜನರೇ ಈ ವಿಭಾಗದಲ್ಲೂ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನ ಈ ರೀತಿ ಧ್ವನಿ ಎತ್ತುವಂತೆ ಮಾಡಬೇಡಿ ಎಂದು ಅವರು ಎಚ್ಚರಿಕೆಪೂರ್ವಕ ಮನವಿ ಮಾಡಿಕೊಂಡರು.

ಮುಂದುವರೆದಿದೆ ಮುಷ್ಕರ
ರಾಜ್ಯ ಸರ್ಕಾರ ಮತ್ತು ಕೆಎಸ್​ಆರ್​ಟಿಸಿ ನೌಕರರ ನಡುವಿನ ಗುದ್ದಾಟದಿಂದ ಜನಸಾಮಾನ್ಯರು ಪರದಾಡುತ್ತಿದ್ದಾರೆ. 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ಸಾರಿಗೆ ಸಿಬ್ಬಂದಿಗಳ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಹ ಯಾವುದೇ ಬಸ್ ಸಂಚಾರ ಕಂಡುಬಂದಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕೇ ತಿಂಗಳಲ್ಲಿ ಎರಡನೇ ಬಾರಿಗೆ ಸಾರಿಗೆ ನೌಕರರು ಮುಷ್ಕರ ಹೂಡಿದ್ದು, ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿಗೆ ಮುಷ್ಕರ ಮುಂದುವರೆಸುವುದಾಗಿ ಸಿಬ್ಬಂದಿ ವರ್ಗದವರು ಎಚ್ಚರಿಕೆ ನೀಡಿದ್ದಾರೆ.

ನೀ ಕೊಡೆ, ನಾ ಬಿಡೆ ಎನ್ನುವ ರೀತಿಯಲ್ಲಿ ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿ ಪಟ್ಟು ಹಿಡಿದಿದ್ದು, ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪುಹಾಕದೇ ಇರಲು ಬಿಎಂಟಿಸಿ ನಿರ್ಧರಿಸಿದೆ. ಮುಷ್ಕರದ ನಡುವೆಯೂ ಇಂದಿನಿಂದ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದ್ದು, ತರಬೇತಿ ನಿರತ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ತರಬೇತಿ ನಿರತ ಚಾಲಕ, ಕಂಡಕ್ಟರ್, ಮೆಕ್ಯಾನಿಕ್‌ಗಳಿಗೆ ಇಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿರುವ ಬಿಎಂಟಿಸಿ, ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಬಿಎಂಟಿಸಿಯಲ್ಲಿ ಒಟ್ಟು 1,484 ತರಬೇತಿ ನಿರತ ಸಿಬ್ಬಂದಿ ಇರುವುದರಿಂದ ಅವರಿಂದಲೇ ಸಾರಿಗೆ ಸೇವೆ ಆರಂಭಿಸುವ ಯೋಚನೆಯಲ್ಲಿ ಬಿಎಂಟಿಸಿ ಇದೆ. ಈ ನಿರ್ಧಾರದ ಮೂಲಕ ಮುಷ್ಕರ ನಿರತ ನೌಕರರಿಗೆ ತಿರುಗೇಟು ನೀಡಲಾಗಿದ್ದು, ಮುಷ್ಕರ ಕೈ ಬಿಡದಿದ್ದರೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಪರೋಕ್ಷವಾಗಿ ರವಾನಿಸಿಲಾಗಿದೆ. ಈ ನಡುವೆ, ನಗರದ ಪ್ರಮುಖ ಮಾರ್ಗಗಳಲ್ಲಿ ಮಾತ್ರ ಖಾಸಗಿ ವಾಹನ ಸಂಚಾರ ನಡೆಯುತ್ತಿದ್ದು, ಲಗೇಜ್, ಮಕ್ಕಳನ್ನು ಹೊತ್ತು ಜನರು ಬಸ್‌ಗೆ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬಸ್ ಓಡಿಸದಿದ್ದರೆ ಸಂಬಳ ಸಿಗಲ್ಲ: ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ

Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪ್ರಯಾಣಿಕರ ಬದುಕು ದುಸ್ತರ