ಬೆಂಗಳೂರು, ಏಪ್ರಿಲ್ 5: ಬೆಂಗಳೂರಿನ ಮೂಲಕ ಮೈಸೂರು ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಶುಕ್ರವಾರ ಸಂಚಾರ ಆರಂಭಿಸಿದೆ. ಮೈಸೂರಿನಲ್ಲಿ ಪ್ರೀಮಿಯಂ ರೈಲನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ (SWR) ಗುರವಾರವೇ ತಿಳಿಸಿತ್ತು. ಈ ರೈಲಿಗೆ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಆನ್ಲೈನ್ ಮೂಲಕ ಚಾಲನೆ ನೀಡಿದ್ದರು. ನಂತರ ರೈಲು ಭಾಗಶಃ ಸಂಚಾರ ಆರಂಭಿಸಿತ್ತು.
ವಂದೇ ಭಾರತ್ ರೈಲುಗಳನ್ನು ನಿರ್ವಹಿಸಲು ಮೈಸೂರಿನಲ್ಲಿ ಸೌಲಭ್ಯದ ಕೊರತೆಯಿಂದಾಗಿ ಮಾರ್ಚ್ 14 ರಿಂದ ಏಪ್ರಿಲ್ 4 ರ ನಡುವಣ ಅವಧಿಯಲ್ಲಿ ರೈಲು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ಬೈಯಪ್ಪನಹಳ್ಳಿ ಮತ್ತು ಚೆನ್ನೈ ಸೆಂಟ್ರಲ್ ನಡುವೆ ಸಂಚರಿಸುತ್ತಿತ್ತು. ಈ ರೈಲು ಬುಧವಾರ ಹೊರತುಪಡಿಸಿ ಪ್ರತಿ ದಿನ ಸಂಚರಿಸುತ್ತದೆ.
ಏಪ್ರಿಲ್ 5 ಮತ್ತು ಜುಲೈ 29 ರ ನಡುವೆ, ಬುಧವಾರದಂದು ಈ ರೈಲು ಸಂಚರಿಸುವುದಿಲ್ಲ. ಜುಲೈ 30 ರಿಂದ, ಇದು ಗುರುವಾರದಂದು ಕಾರ್ಯನಿರ್ವಹಿಸುವುದಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಇದು ಮೈಸೂರು ಮತ್ತು ಚೆನ್ನೈ ನಡುವಿನ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಮೊದಲ (ರೈಲು ಸಂಖ್ಯೆ 20607/20608) ರೈಲು 2022 ರ ನವೆಂಬರ್ ತಿಂಗಳಿನಿಂದ ಸಂಚರಿಸುತ್ತಿದೆ. ಇದು ಚೆನ್ನೈ ಸೆಂಟ್ರಲ್‌ನಿಂದ ಬೆಳಿಗ್ಗೆ 5.50 ಕ್ಕೆ ಹೊರಟು ಮಧ್ಯಾಹ್ನ 12.20 ಕ್ಕೆ ಮೈಸೂರು ತಲುಪುತ್ತದೆ. ಮೈಸೂರಿನಿಂದ ಮಧ್ಯಾಹ್ನ 1.05 ಕ್ಕೆ ಹೊರಟು ರಾತ್ರಿ 7.20 ಕ್ಕೆ ಚೆನ್ನೈ ಸೆಂಟ್ರಲ್ ತಲುಪುತ್ತದೆ.
ಇದನ್ನೂ ಓದಿ: ಮೈಸೂರು ಚೆನ್ನೈ ಮಧ್ಯೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್, ವೇಳಾಪಟ್ಟಿ ಇಲ್ಲಿದೆ
ರೈಲ್ವೇ ಸಚಿವಾಲಯದ ಅಧಿಸೂಚನೆಯ ಪ್ರಕಾರ, ರೈಲು ಸಂಖ್ಯೆ 20663 ಮೈಸೂರು-ಎಂಜಿಆರ್ ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮತ್ತು ಮಧ್ಯಾಹ್ನ 12.20 ಕ್ಕೆ ಎಂಜಿಆರ್ ಚೆನ್ನೈ ತಲುಪಲಿದೆ. ಚೆನ್ನೈ ಸೆಂಟ್ರಲ್‌ನಿಂದ ಸಂಜೆ 5 ಗಂಟೆಗೆ ಹೊರಟು ರಾತ್ರಿ 11.20 ಕ್ಕೆ ಮೈಸೂರು ತಲುಪುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ