AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vande Bharat Express: ಮೈಸೂರು ಚೆನ್ನೈ ಮಧ್ಯೆ ಮತ್ತೊಂದು ವಂದೇ ಭಾರತ್ ಎಕ್ಸ್​ಪ್ರೆಸ್, ವೇಳಾಪಟ್ಟಿ ಇಲ್ಲಿದೆ

ಮೈಸೂರು ಹಾಗೂ ಚೆನ್ನೈ ಮಧ್ಯೆ ಬೆಂಗಳೂರು ಮಾರ್ಗವಾಗಿ ಮತ್ತೊಂದು ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ನೂತನ ರೈಲಿಗೆ ಮಾರ್ಚ್​ 12ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಆದಾಗ್ಯೂ, ರೈಲಿನ ಅಧಿಕೃತ ಕಾರ್ಯಾರಂಭ ಏಪ್ರಿಲ್ 5ರಿಂದ ಆಗಲಿದೆ. ನೂತನ ರೈಲಿನ ವಿಶೇಷತೆ, ವೇಳಾಪಟ್ಟಿ ಇತ್ಯಾದಿ ವಿವರ ಇಲ್ಲಿದೆ.

Vande Bharat Express: ಮೈಸೂರು ಚೆನ್ನೈ ಮಧ್ಯೆ ಮತ್ತೊಂದು ವಂದೇ ಭಾರತ್ ಎಕ್ಸ್​ಪ್ರೆಸ್, ವೇಳಾಪಟ್ಟಿ ಇಲ್ಲಿದೆ
ವಂದೇ ಭಾರತ್ ಎಕ್ಸ್​ಪ್ರೆಸ್
Ganapathi Sharma
|

Updated on: Mar 11, 2024 | 10:09 AM

Share

ಬೆಂಗಳೂರು, ಮಾರ್ಚ್​ 11: ಮೈಸೂರು ಮತ್ತು ಚೆನ್ನೈ ನಡುವೆ ಬೆಂಗಳೂರು ಮಾರ್ಗವಾಗಿ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಸಂಚಾರ ನಡೆಸಲಿದೆ. ನೂತನ ರೈಲಿನ ಘೋಷಣೆಯೊಂದಿಗೆ ಮೂರು ನಗರಗಳ ನಡುವಿನ ರೈಲು ಸಂಪರ್ಕಕ್ಕೆ ಗಮನಾರ್ಹ ಉತ್ತೇಜನ ದೊರೆತಂತಾಯಿತು. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ನೀಡಿದ ಮಾಹಿತಿ ಪ್ರಕಾರ, ಬೆಂಗಳೂರು ಮತ್ತು ಚೆನ್ನೈ ನಡುವೆ ಹೊಸ ವಂದೇ ಭಾರತ್ ಎಕ್ಸ್​ಪ್ರೆಸ್ ಸೇವೆಯು ಏಪ್ರಿಲ್ 5 ರಿಂದ ಆರಂಭವಾಗಲಿದೆ.

ರೈಲ್ವೇ ಸಚಿವಾಲಯದ ಅಧಿಸೂಚನೆಯ ಪ್ರಕಾರ, ರೈಲು ಸಂಖ್ಯೆ 20663 ಮೈಸೂರು-ಎಂಜಿಆರ್ ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಡಲಿದೆ ಮತ್ತು ಮಧ್ಯಾಹ್ನ 12.20 ಕ್ಕೆ ಎಂಜಿಆರ್ ಚೆನ್ನೈ ತಲುಪಲಿದೆ. ಬುಧವಾರ ಹೊರತುಪಡಿಸಿ ಪ್ರತಿದಿನ ಈ ರೈಲು ಸೇವೆ ಇರಲಿದೆ.

ಎಲ್ಲೆಲ್ಲಿ ನಿಲುಗಡೆ?

ನೂತನ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮಂಡ್ಯ, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್​ಎಂವಿಟಿ) ಬೆಂಗಳೂರು ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಮತ್ತು ಕಟಪಾಡಿಯಲ್ಲಿ ನಿಲುಗಡೆ ಹೊಂದಿದೆ.

ಚೆನ್ನೈನಿಂದ ಹಿಂದಿರುಗುವಾಗ, ರೈಲು ಸಂಖ್ಯೆ 20664 ಚೆನ್ನೈನಿಂದ ಸಂಜೆ 5 ಗಂಟೆಗೆ ಹೊರಟು ಪ್ರತಿದಿನ ರಾತ್ರಿ 11.20 ಕ್ಕೆ ಮೈಸೂರು ತಲುಪಲಿದೆ. ಬುಧವಾರ ಹೊರತುಪಡಿಸಿ ಪ್ರತಿ ದಿನ ಈ ರೈಲು ಸಂಚಾರ ಇರಲಿದೆ. ಇದು ಕಟಪಾಡಿ, ಕೃಷ್ಣರಾಜಪುರಂ, ಎಸ್‌ಎಂವಿಟಿ ಬೆಂಗಳೂರು ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಈ ವರ್ಷ ಮಾರ್ಚ್​ 8 ರಂದು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಪ್ರತಾಪ್ ಸಿಂಹ, ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಮೈಸೂರಿನಿಂದಲೇ ನೇರವಾಗಿ ಪ್ರಾರಂಭಿಸುವಂತೆ ಒತ್ತಾಯಿಸಿದ್ದರು.

ಪ್ರಧಾನಿ ಮೋದಿಯಿಂದ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ನೂತನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಆದರೆ, ಪ್ರತಿ ದಿನದ ರೈಲು ಸಂಚಾರ (ಬುಧವಾರ ಹೊರತುಪಡಿಸಿ) ಏಪ್ರಿಲ್ ಐದರಿಂದ ಆರಂಭವಾಗಲಿದೆ. ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದಿನ ಬಿಳಿ ಮತ್ತು ನೀಲಿ ಬಣ್ಣಕ್ಕಿಂತ ಭಿನ್ನವಾಗಿ ಕಿತ್ತಳೆ ಮತ್ತು ಬಿಳಿ ಬಣ್ಣಗಳಲ್ಲಿ ಇರಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಾರ್ಚ್​ ಅಂತ್ಯದ ವೇಳೆ ಬೆಂಗಳೂರಿನ ಕೆಎಸ್​ಆರ್​, ಎಸ್​ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ರೈಲು ಕೋಚ್​ ರೆಸ್ಟೋರೆಂಟ್ ಆರಂಭ

2022 ರ ನವೆಂಬರ್​​​ನಲ್ಲಿ, ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ಮಧ್ಯೆ ಸಂಚರಿಸುವ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ