ಯಾರೂ ವ್ಯವಸ್ಥೆ ಮೀರಬಾರದು; ಸೀನಿಯರ್ ಮೇಲೆ ಬೇಸರವಿದ್ದರೆ ವ್ಯವಸ್ಥಿತವಾಗಿ ದೂರು ನೀಡಬೇಕು: ಶಿಲ್ಪಾ ವಿರುದ್ಧ ಸಿಂಧೂರಿ ಗುಡುಗು

Rohini Sindhuri vs Shilpa Nag: ಫೆಬ್ರವರಿ 14 ಕ್ಕೆ ಶಿಲ್ಪ ನಾಗ್ ಜಿಲ್ಲೆಗೆ ಬಂದಿದ್ದಾರೆ. ಆಗ ಆರೋಪ ಇರಲಿಲ್ಲ. ಈಗ ಒಂದು ವಾರದಿಂದ ಏಕೆ? ಒತ್ತಡ ಯಾರಿಗೆ ಇರೋಲ್ಲ. ಎಲ್ಲರೂ ಒತ್ತಡದಲ್ಲಿದ್ದಾರೆ. ನಾನು ಮುಖ್ಯ ಕಾರ್ಯದರ್ಶಿಗೆ ಎಲ್ಲಾ ವರದಿ ನೀಡುತ್ತೇನೆ ಎಂದು ರೋಹಿಣಿ ಸಿಂಧೂರಿ ಹೇಳಿದರು.

ಯಾರೂ ವ್ಯವಸ್ಥೆ ಮೀರಬಾರದು; ಸೀನಿಯರ್ ಮೇಲೆ ಬೇಸರವಿದ್ದರೆ ವ್ಯವಸ್ಥಿತವಾಗಿ ದೂರು ನೀಡಬೇಕು: ಶಿಲ್ಪಾ ವಿರುದ್ಧ ಸಿಂಧೂರಿ ಗುಡುಗು
ರೋಹಿಣಿ ಸಿಂಧೂರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 04, 2021 | 12:40 PM

ಮೈಸೂರು: ನಿನ್ನೆ ದಿಢೀರನೇ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಮುದುಕಿನ ಗುದ್ದಾಟ ಬಹಿರಂಗವಾಗುತ್ತಿದ್ದಂತೆ ಮೈಸೂರು ಜಿಲ್ಲಾ ಆಡಳಿತದಲ್ಲಿ ಕೋಪ-ತಾಪಗಳು ಹೆಚ್ಚಾಗಿವೆ. ಜಿಲ್ಲಾ ಆಡಳಿತವು ಜಿಲ್ಲಾಧಿಕಾರಿ ​ರೋಹಿಣಿ ಸಿಂಧೂರಿ ಮತ್ತು ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಬಣಗಳಾಗಿ ಪರಿವರ್ತನೆಗೊಂಡಿವೆ. ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಶಕ್ತ್ಯಾನುಸಾರ ಅವರ ಪರ ಬಣಗಳು ಸಕ್ರಿಯಗೊಂಡಿದ್ದು, ಮೈಸೂರಿನಲ್ಲಿ ಅದರ ಪರಿಣಾಮ, ಪ್ರಭಾವಗಳು ಢಾಳಾಗಿ ಕಡುಬರುತ್ತಿವೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಳಿಕ ಶಿಲ್ಪಾ ನಾಗ್ ಯಾದವಗಿರಿಯಲ್ಲಿರುವ ತಮ್ಮ ಮನೆಯಲ್ಲೇ ಇದ್ದಾರೆ. ನಿನ್ನೆ ರಾತ್ರಿಯಿಂದ ತಮ್ಮ ನಿವಾಸದಲ್ಲೇ ಇರುವ ಶಿಲ್ಪಾ ನಾಗ್ ಇಂದು ಸಂಜೆ ನಗರಕ್ಕೆ ಆಗಮಿಸಲಿರುವ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

mysore corporation commissioner shilpa nag

ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಳಿಕ ಶಿಲ್ಪಾ ನಾಗ್ ಯಾದವಗಿರಿಯಲ್ಲಿರುವ ತಮ್ಮ ಮನೆಯಲ್ಲೇ ಇದ್ದಾರೆ

ಈ ಮಧ್ಯೆ, ಜಿಲ್ಲಾಧಿಕಾರಿ ​ರೋಹಿಣಿ ಸಿಂಧೂರಿ ಅವರು ಶಿಲ್ಪಾ ನಾಗ್ ಆರೋಪಗಳ ಬಗ್ಗೆ ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಿ, ಅವರ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಯಾವುದಕ್ಕೂ ಒಂದು ಪ್ರೋಸಸ್ ಅಂತಾ ಇರುತ್ತದೆ. ಯಾರೇ ಅಧಿಕಾರಿಗಳು ಇದ್ದರೂ ಅದನ್ನ ಫಾಲೋ ಮಾಡಬೇಕು. ನಮ್ಮ ಹೋರಾಟ ಕೋವಿಡ್ ವಿರುದ್ದ. ಎಲ್ಲರು ಕೂಡ ಅದರಲ್ಲಿ ಕೈ ಜೋಡಿಸಿ ಎಂದಿದ್ದೆ. ನಾನು ವಾರ್ಡ್ ವೈಸ್ ಸರಿಯಾದ ಅಂಕಿಅಂಶ ಕೊಡಬೇಕು ಅಂತಾ ಅವರನ್ನು (ಪಾಲಿಕೆ ಆಯುಕ್ತೆ ಶಿಲ್ಪಾ) ಕೇಳಿದ್ದೆ. ಒಂದು ದಿನ 400 ಕೇಸ್ ಬಂದು, ಮರು ದಿನ 40 ಬಂದರೆ ಅದು ಸರಿ ಅಲ್ಲ. ನಾನು ಮುಖ್ಯ ಕಾರ್ಯದರ್ಶಿಗೆ ಎಲ್ಲಾ ಮಾಹಿತಿ ನೀಡ್ತಿನಿ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಕಾರ್ಪೊರೇಟ್​ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್​ಆರ್ ಫಂಡ್) ಜಿಲ್ಲಾಧಿಕಾರಿ ನಿಯಂತ್ರಣದಲ್ಲಿದೆ. ಹಾಗಾಗಿ ಏನು ಖರ್ಚು ಮಾಡಿದ್ದೀರಿ ಎಂದು ಕಾರ್ಪೋರೇಷನ್ ಗೆ ಕೇಳಿದ್ದಿವಿ. ಎಲ್ಲಾ 12 ಕೋಟಿ ಖರ್ಚು ಮಾಡಿದಿರಾ? ಯಾವುದಕ್ಕೆ ಖರ್ಚು ಮಾಡಿದಿರೀ ಎಂದು ಕೇಳಿದ್ದೆ. ಹಳ್ಳಿ ಕಡೆ ವೈದ್ಯರ ನಡೆ ಯೋಜನೆಗೂ ನಾವು ಹಣ ನೀಡಬೇಕಿದೆ. ಅದಕ್ಕೇ ಆದರ ವಿವರವನ್ನೂ ಕೇಳಿದ್ದೆ. ಸೀನಿಯರ್ ಮೇಲೆ ಬೇಸರ ಇದ್ದರೆ ವ್ಯವಸ್ಥಿತವಾಗಿ ದೂರ ನೀಡಬೇಕು. ದೂರಿಗೂ ಒಂದು ವ್ಯವಸ್ಥೆ ಅಂತಾ ಇದೆ. ಯಾರು ಕೂಡ ಆ ಚೌಕಟ್ಟು ಮೀರಬಾರದು. ಸರಿಯಾದ ಅಂಕಿ ಅಂಶ ನೀಡಿ ಎಂದಷ್ಟೇ ನಾನು ಕೇಳಿರುವುದು ಎಂದು ರೋಹಿಣಿ ಸಿಂಧೂರಿ ವಿವರಿಸಿದ್ದಾರೆ.

ಫೆಬ್ರವರಿ 14 ಕ್ಕೆ ಶಿಲ್ಪ ನಾಗ್ ಜಿಲ್ಲೆಗೆ ಬಂದಿದ್ದಾರೆ. ಆಗ ಆರೋಪ ಇರಲಿಲ್ಲ. ಈಗ ಒಂದು ವಾರದಿಂದ ಏಕೆ? ಒತ್ತಡ ಯಾರಿಗೆ ಇರೋಲ್ಲ. ಎಲ್ಲರೂ ಒತ್ತಡದಲ್ಲಿದ್ದಾರೆ. ನಾನು ಮುಖ್ಯ ಕಾರ್ಯದರ್ಶಿಗೆ ಎಲ್ಲಾ ವರದಿ ನೀಡುತ್ತೇನೆ ಎಂದು ರೋಹಿಣಿ ಸಿಂಧೂರಿ ಇದೇ ವೇಳೆ ಹೇಳಿದರು.

ಶಿಲ್ಪಾ ನಾಗ್ ಪರವಾಗಿ ಅಖಾಡಕ್ಕಿಳಿದ ಪಾಲಿಕೆ ಸದಸ್ಯರು:

ಈ ಮಧ್ಯೆ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಪರವಾಗಿ ಪಾಲಿಕೆ ಸದಸ್ಯರು ಅಖಾಡಕ್ಕಿಳಿದಿದ್ದಾರೆ. ಪಾಲಿಕೆಯ 50ಕ್ಕೂ ಹೆಚ್ಚು ಸದಸ್ಯರಿಂದ ಪ್ರತಿಭಟನೆ ನಡೆದಿದೆ. ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ಹಿಂಪಡೆಯಬೇಕು, ಮೈಸೂರು ಡಿಸಿಯನ್ನು ವರ್ಗಾವಣೆ ಮಾಡಬೇಕೆಂಬುದು ಅವರ ಆಗ್ರಹವಾಗಿದೆ.

ಶಿಲ್ಪಾನಾಗ್ ಪರ ‘ನಿಮ್ಮ ಕೆಲಸಕ್ಕೆ‌ ಇದೆ ಸಾಕ್ಷಿ’ ಎಂದು ಫಲಕ‌ ಹಿಡಿದು ಪೌರ ಕಾರ್ಮಿಕರು ಧರಣಿ ನಡೆಸಿದ್ದಾರೆ. ಕೊವಿಡ್ ಮಿತ್ರ, ಮನೆ ಮನೆ ಕೋವಿಡ್ ಸಮೀಕ್ಷೆ ನಿಮ್ಮದು, ಸಿಎಸ್​ಆರ್​ ಅನುದಾನ ಬಳಕೆ ಮಾಡುವುದು ನಿಮ್ಮ ಹಕ್ಕು. ಕೊವಿಡ್ ಟೆಲಿಕೇರ್, ಕೊವಿಡ್ ಕೇರ್ ಸೆಂಟರ್ ನಿಮ್ಮದು. ಎಲ್ಲ ಯೋಜನೆ ನಿಮ್ಮವು ಎಂದು ಪೌರ ಕಾರ್ಮಿಕರು ಘೋಷಣೆ ಹಾಕಿದ್ದಾರೆ.

ಅಧಿಕಾರಿಗಳ ಮುಸುಕಿನ ಗುದ್ದಾಟಕ್ಕೆ ಜನಪ್ರತಿನಿಧಿಗಳು ಕಾರಣ:

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲ. ಅಧಿಕಾರಿಗಳ ಮುಸುಕಿನ ಗುದ್ದಾಟಕ್ಕೆ ಜನಪ್ರತಿನಿಧಿಗಳು ಕಾರಣ ಎಂದು ಟಿವಿ9 ಜೊತೆ ಮಾತನಾಡುತ್ತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ. ಪ್ರತಾಪ್ ಸಿಂಹ ಮೊದಲು ಡಿಸಿಯನ್ನು ಸಮರ್ಥಿಸಿಕೊಂಡಿದ್ದರು. ನಂತರ ಈಗ ಮೈಸೂರು ಡಿಸಿ ವಿರುದ್ಧ ಮಾತನಾಡುತ್ತಿದ್ದಾರೆ. ಇದೀಗ ಶಿಲ್ಪಾ ನಾಗ್ ಪರ ಪ್ರತಾಪ್ ಸಿಂಹ ಮಾತಾಡುತ್ತಿದ್ದಾರೆ. ಮೈಸೂರಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಧ್ರುವನಾರಾಯಣ ಬೇಸರ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಶಾಸಕರ ಮಧ್ಯೆಯೇ ಸಮನ್ವಯತೆ ಇಲ್ಲ. ಇವರುಗಳ ಕೆಸರೆರಚಾಟದಿಂದಲೇ ಇಷ್ಟೆಲ್ಲಾ ನಡೆಯುತ್ತಿದೆ. ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ಕೊಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಒತ್ತಾಯಿಸಿದ್ದಾರೆ.

(mysuru deputy commissioner rohini sindhuri and mysore corporation commissioner shilpa nag)

Published On - 12:29 pm, Fri, 4 June 21