ಮೈಸೂರು: ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಸಂತ್ರಸ್ತೆಯಿಂದ ಯಾವುದೇ ಮಾಹಿತಿ ಸಿಗದೇ, ಸಂತ್ರಸ್ತೆಯ ಸ್ನೇಹಿತನಿಂದ ಮಾಹಿತಿ ಪಡೆದು ಇಲಾಖೆ ವತಿಯಿಂದಲೇ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. 376D, 397 ಕಲಂನಡಿ ಡಕಾಯಿತಿ ಹಾಗೂ ಸಾಮೂಹಿಕ ಅತ್ಯಾಚಾರ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಐದು ತಂಡಗಳ ಮೂಲಕ ಈಗಾಗಲೇ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿಯೇ ಹೊರ ಜಿಲ್ಲೆಗಳಿಂದಲೂ ಸಿಬ್ಬಂದಿ ಕರೆಸಿದ್ದೇವೆ. ಪ್ರಕರಣ ತನಿಖೆ ವರದಿಯನ್ನ ಸರ್ಕಾರಕ್ಕೆ ವರದಿ ಮಾಡಲಾಗುತ್ತಿದೆ. ಕರ್ನಾಟಕ ಪೊಲೀಸ್ ಸಾಕಷ್ಟು ಕ್ಲಿಷ್ಟ ಪ್ರಕರಣಗಳನ್ನ ಭೇದಿಸಲಾಗಿದೆ. ಈ ಪ್ರಕರಣವನ್ನು ಶೀಘ್ರದಲ್ಲಿ ಭೇದಿಸುತ್ತೇವೆ ಎಂದು ಮೈಸೂರಿನಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು.
ಘಟನೆಗೆ ಸಂಬಂಧಿಸಿ ಸಂತ್ರಸ್ತ ಯುವತಿಯ ಸ್ನೇಹಿತನಿಂದಲೂ ಒಂದಷ್ಟು ಮಾಹಿತಿ ಪಡೆಯಲಾಗಿದೆ. 7:30 ರಿಂದ 8: 30 ರ ವೇಳೆಯಲ್ಲಿ ಘಟನೆ ನಡೆದಿದೆ. ಇಂತಹ ಪ್ರಕರಣಗಳು ಮುಂದೆ ಎಂದಿಗೂ ನಡೆಯಬಾರದು. ಈ ರೀತಿಯ ವಿಚಾರಗಳಲ್ಲಿ ಸಾಕಷ್ಟು ಗೌಪ್ಯತೆಯನ್ನು ಕಾಪಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಆಕ್ಷೇಪಾರ್ಹ ಹೇಳಿಕೆ ಹಿಂಪಡೆದ ಗೃಹ ಸಚಿವ
ಅತ್ಯಾಚಾರ ಆಗಿದ್ದು ಅಲ್ಲಿ, ಕಾಂಗ್ರೆಸ್‌ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ’ ಎಂಬ ಮಾತನ್ನು ಹಿಂಪಡೆಯುವುದಾಗಿ ಸೆಂಟ್ರಲ್ ಜೈಲಿನ ಬಳಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನನಗೆ ಬಹಳ ಆತಂಕ ಆಗಿತ್ತು, ಆತಂಕದಲ್ಲಿ ಈ ಮಾತು ಹೇಳಿದ್ದೆ. ನಾನು ನೀಡಿದ್ದ ಹೇಳಿಕೆ ಹಿಂಪಡೆಯುತ್ತೇನೆ. ಸಂತ್ರಸ್ತೆಯನ್ನು ನನ್ನ ಮಗಳ ಸ್ಥಾನದಲ್ಲಿ ನೋಡುವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ನವರು ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ. ಅತ್ಯಾಚಾರ ಆಗಿದ್ದು ಅಲ್ಲಿ, ಆದರೆ ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡ್ತಿದ್ದಾರೆ’ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲಿ ಆಗಿರುವುದು ಅಮಾನುಷವಾದ ಕೆಲಸ. ಅದನ್ನು ಮಾನವೀಯ ದೃಷ್ಟಿಯಿಂದ ನೋಡಿ, ಡಿಟೆಕ್ಟ್ ಮಾಡಿ ಅನ್ನಬೇಕು. ಕಾಂಗ್ರೆಸ್‌ನವರು ಹಾಗೆ ಮಾಡದೇ ನನ್ನ ಮೇಲೆ ಹರಿಹಾಯುತ್ತಿದ್ದಾರೆ. ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಅವರು ಕಿಡಿಕಾರಿದ್ದರು.
ಆ ಯುವಕ, ಯುವತಿ ಸಂಜೆ 7.30ರ ವೇಳೆಗೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯೋದಕ್ಕೂ ಆಗೋದಿಲ್ಲ. ಸದ್ಯಕ್ಕೆ ಯುವಕ,ಯುವತಿ ಶಾಕ್ನಲ್ಲಿ ಇದ್ದಾರೆ. ಅವರ ಸಂಪೂರ್ಣ ಸ್ಟೇಟ್ ಮೆಂಟ್ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಎಂದು ಸಹ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಮ್ಮ ಈ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನವರು ಗೃಹ ಸಚಿವರ ಮೇಲೆ ರೇಪ್ ಮಾಡ್ತಿದ್ದಾರೆ ಎಂದು ಅವರ ಮನಸ್ಸಿಗೆ ನೋವು ಮಾಡುವುದಕ್ಕೆ ಈ ಮಾತು ಹೇಳಿಲ್ಲ. ತಮಾಷೆ ರೀತಿಯಲ್ಲಿ ಮಾತಾಡಿದ್ದೇನೆ ಎಂದು ತಿದ್ದಿಕೊಂಡಿದ್ದರು. ಇದು ಮೈಸೂರಿನಂತರ ಶಾಂತಿಯುವ ಸುಸಂಸ್ಕೃತರು ವಾಸಿಸುವ ನಾಡು. ಘಟನೆಗೆ ಯಾರು ಕಾರಣ ಅವರನ್ನ ಹಿಡಿಯುತ್ತೇವೆ. 12 ಗಂಟೆಯಲ್ಲಿ FIR ಆಗಿದೆ. ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ:
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯ ಟೀಕೆ
ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು
(ADGP Pratap Reddy says Mysuru gang rape case should never happen again )