ಮರಳಿ ತಾಯ್ನಾಡಿಗೆ ಬರಬೇಡ, ಭಾರತದಲ್ಲೇ ಉಳಿದುಬಿಡು ಎನ್ನುತ್ತಿದ್ದಾರೆ ಪೋಷಕರು; ಮೈಸೂರಿನಲ್ಲಿರುವ ಅಪ್ಘನ್ ವಿದ್ಯಾರ್ಥಿಗಳ ಅಳಲು

ನಾವು ಅವರಿಂದ ಸ್ವತಂತ್ರ ಪಡೆಯುವ ಭರವಸೆಯಲ್ಲಿ ಇದ್ದೇವೆ. ನಮ್ಮ ಜನ ಯಾವುದೇ ಭರವಸೆ ಕಳೆದುಕೊಂಡಿಲ್ಲ ಎಂದು ಬಿಎ ವಿದ್ಯಾರ್ಥಿನಿ ಹಲೀಮಾ ಪ್ರತಿಕ್ರಿಯಿಸಿದರು.

ಮರಳಿ ತಾಯ್ನಾಡಿಗೆ ಬರಬೇಡ, ಭಾರತದಲ್ಲೇ ಉಳಿದುಬಿಡು ಎನ್ನುತ್ತಿದ್ದಾರೆ ಪೋಷಕರು; ಮೈಸೂರಿನಲ್ಲಿರುವ ಅಪ್ಘನ್ ವಿದ್ಯಾರ್ಥಿಗಳ ಅಳಲು
ರೇಜಾ
Follow us
| Updated By: guruganesh bhat

Updated on: Aug 17, 2021 | 3:35 PM

ಮೈಸೂರು: ‘ನಾನು ಅಫ್ಘಾನಿಸ್ತಾನಕ್ಕೆ ಹೋಗಿ ಎರಡ್ಮೂರು ವರ್ಷವಾಗಿದೆ. ನಾನು ಅಲ್ಲಿಗೆ ಹೋಗಬೇಕು, ಪೋಷಕರ ಜೊತೆ ಇರಬೇಕು ಅಂತ ಅನಿಸುತ್ತಿದೆ. ಆದರೆ ಪೋಷಕರೇ ನೀನಿಲ್ಲಿ ಬರಬೇಡ ಎನ್ನುತ್ತಿದ್ದಾರೆ’ ಎಂದರು ಮೈಸೂರಿನಲ್ಲಿ ಎಂಎಸ್​ಸಿ ವ್ಯಾಸಂಗ ಮಾಡುತ್ತಿರುವ ಅಫ್ಘಾನಿಸ್ತಾನದ ರೇಜಾ. ತಮ್ಮ ತಾಯ್ನಾಡಿಗೆ ಬಂದೊದಗಿದ ದುಸ್ಥಿತಿ ಅವರ ಮನಸ್ಸನ್ನು ವ್ಯಾಕುಲಗೊಳಿಸಿದೆ. ಇದು ರೇಜಾ ಅವರ ಮನದಾಳವೊಂದೇ ಅಲ್ಲ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಅಪ್ಘನ್ ಮೂಲದ ವಿದ್ಯಾರ್ಥಿಗಳ ದುಗುಡವೂ ಹೌದು.

ಮೈಸೂರಿನಲ್ಲಿ ಅಪ್ಘಾನಿಸ್ತಾನದ 92 ವಿದ್ಯಾರ್ಥಿಗಳು ಜರ್ನಲಿಸಂ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ವಿವಿಧ ಕೋರ್ಸ್​ಗಳನ್ನು ಓದುತ್ತಿದ್ದಾರೆ. ಅವರ ಒಡಲ ದುಃಖವನ್ನು ಆಲಿಸಲು ಟಿವಿ9 ಕನ್ನಡ ಪ್ರಯತ್ನಿಸಿದೆ.

ನಿನ್ನೆ ರಾತ್ರಿ ನನ್ನ ಪೋಷಕರನ್ನ ಸಂಪರ್ಕ ಮಾಡಿದ್ದೆ. ಅಪ್ಘಾನಿಸ್ತಾನದ ಕ್ಯಾಪಿಟಲ್ ಸಿಟಿಯಲ್ಲಿ ಸದ್ಯ ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿ ಇಂಟರ್ನೆಟ್ ಸಂಪರ್ಕ ಕೂಡ ಇಲ್ಲ. 2001ರ ನಂತರ ಮತ್ತೆ ಅದೇ ರೀತಿಯ ಸಂಕಷ್ಟವನ್ನು ನಾವು ಎದುರಿಸುತ್ತಿದ್ದೇವೆ. ಅಫ್ಘಾನಿಸ್ತಾನದಲ್ಲಿರುವ ನನ್ನ ಪೋಷಕರು ಸಂತೋಷದಲ್ಲಂತೂ ಇಲ್ಲ. ನಮಗೆ ಮುಂದಿನ ತಿಂಗಳು ನಮಗೆ ಪರೀಕ್ಷೆ ಇದೆ. ಇಲ್ಲಿಯ ಬಗ್ಗೆ ಯೋಚನೆ ಬೇಡ, ನಿಮ್ಮ ಪರೀಕ್ಷೆಗಳ ಬಗ್ಗೆ ಯೋಚನೆ ಮಾಡಿ ಅಂತ ಪೋಷಕರು ಹೇಳುತ್ತಿದ್ದಾರೆ. ಜತೆಗೆ ಖಾಯಂ ಆಗಿ ಭಾರತದಲ್ಲಿಯೇ ಉಳಿದುಬಿಡು ಎಂದೂ ಅವರು ಹೇಳುತ್ತಿದ್ದಾರೆ ಎಂದು ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ರೇಜಾ ವಿವರಿಸಿದರು.

ಬಿಎ ವಿದ್ಯಾರ್ಥಿನಿ ಹಲೀಮಾ ಮಾತನಾಡುತ್ತಾ, ‘ನಾನು ಇಲ್ಲಿದ್ದೇನೆ. ಆದರೆ ನನ್ನ ಹೃದಯವೆಲ್ಲ ಅಫ್ಘಾನಿಸ್ತಾನದಲ್ಲಿದೆ. ನನ್ನ ದೇಶದ ಜನರು ಹಾಗೂ ಕುಟುಂಬಸ್ಥರು ಪ್ರತಿನಿಮಿಷ ಅಪಾಯದಲ್ಲಿದ್ದಾರೆ. ಮಹಿಳೆಯರು ಸ್ವತಂತ್ರ ಕಳೆದುಕೊಂಡಿದ್ದಾರೆ, ಶಾಲೆಗೆ ಹೋಗುವ ಹಕ್ಕನ್ನು ಕಳೆದುಕೊಂಡಿದ್ದೇವೆ. ಇಷ್ಟೆಲ್ಲ ಘಟನೆಗಳ ನಡುವೆ ನಮ್ಮ ವಿದ್ಯಾಭ್ಯಾಸದ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ಭರವಸೆ ಕಳೆದುಕೊಳ್ಳುವುದಿಲ್ಲ. ತಾಲಿಬಾನಿಗಳು ನಮ್ಮಗೆ ದೈಹಿಕವಾಗಿ ಹಾನಿಮಾಡಿಲ್ಲ. ಆದರೆ ಮಾನಸಿಕವಾಗಿ ತೊಂದರೆಯಾಗಿದೆ. ಸದ್ಯ ನಮ್ಮ ದೇಶವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಯಾವುದೇ ಹಲ್ಲೆ ಮಾಡಿಲ್ಲ. ನಾವು ಅವರಿಂದ ಸ್ವತಂತ್ರ ಪಡೆಯುವ ಭರವಸೆಯಲ್ಲಿ ಇದ್ದೇವೆ. ನಮ್ಮ ಜನ ಯಾವುದೇ ಭರವಸೆ ಕಳೆದುಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದರು.

ಮೈಸೂರು ವಿವಿ ಕುಲಪತಿ ಪ್ರತಿಕ್ರಿಯೆಯೇನು? ಮೈಸೂರು ವಿವಿಯಲ್ಲಿ 92 ಅಫ್ಘನ್ ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲರೂ ನಿರ್ಭೀತಿಯಿಂದ ಇದ್ದಾರೆ. ಯಾರಿಗೂ ಯಾವುದೇ ರೀತಿಯ ಆತಂಕ ಇಲ್ಲ. ಸದ್ಯಕ್ಕೆ ವಿದ್ಯಾರ್ಥಿಗಳಿಂದ ಯಾವುದೇ ಬೇಡಿಕೆ ಬಂದಿಲ್ಲ. ಎಲ್ಲರೂ ನಿರ್ಭೀತಿಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯಕ್ಕೆ ಯಾವ ವಿದ್ಯಾರ್ಥಿಯೂ ತಾಯ್ನಾಡಿಗೆ ಹೋಗುತ್ತಿಲ್ಲ. ಸೆಪ್ಟೆಂಬರ್ 20ರಿಂದ ಅವರಿಗೆ ವಿವಿಧ ಕೋರ್ಸ್ ಗಳಿಗೆ ಪರೀಕ್ಷೆ ಇದೆ. ಅಕ್ಟೋಬರ್ ಮೊದಲ ವಾರದವರೆಗೂ ಪರೀಕ್ಷೆ ನಡೆಯುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‌ಕುಮಾರ್ ತಿಳಿಸಿದರು.

ಅಫ್ಘಾನ್ ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಆದರೂ ಇಂಟರ್ ನ್ಯಾಷನಲ್ ಡೈರೆಕ್ಟರ್ ಬಗೆಹರಿಸುತ್ತಾರೆ. ಅವರಿಂದ ಸಮಸ್ಯೆ ಬಗೆಹರಿಯದ ಸಮಯದಲ್ಲಿ ನಾವು ಮುಂದೆ ಬರುತ್ತವೆ. ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಬೇಡಿಕೆಗೆ ವಿವಿ ಸ್ಪಂದಿಸುತ್ತದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಹಿನ್ನೆಲೆ ಆಫ್ಘನ್ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ನಾವಿದ್ದೇವೆ. ವೀಸಾ ಅವಧಿ ವಿಸ್ತರಣೆ ಮಾಡಿದರೆ ಸಹಾಯ ಮಾಡ್ತೇವೆ. ವಿದ್ಯಾರ್ಥಿಗಳು ಮೈಸೂರಿನಲ್ಲಿಯೇ ಇರಲು ವ್ಯವಸ್ಥೆ ಮಾಡುತ್ತೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‌ಕುಮಾರ್ ಭರವಸೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: 

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು

Taliban Rule In Afghanistan: ಮೊಬೈಲ್, ಇಂಟರ್​ನೆಟ್, ಬಂದೂಕು, ಬದುಕು; ತಾಲಿಬಾನ್ 2.0 ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ

(Afghanistan students studies in Mysuru University says their parents suggestions permanently live in India)