Taliban Rule In Afghanistan: ಮೊಬೈಲ್, ಇಂಟರ್​ನೆಟ್, ಬಂದೂಕು, ಬದುಕು; ತಾಲಿಬಾನ್ 2.0 ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ

ತಾಲಿಬಾನ್​ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ ಮೊದಲ ದಿನ ಹೇಗಿತ್ತು? ಈ ಬಗ್ಗೆ ಕಣ್ಣಿಗೆ ಕಟ್ಟುವಂಥ ವರದಿ ಇಲ್ಲಿದೆ. ಭಾರತದಲ್ಲಿ ಕೂತು ಅಫ್ಘಾನಿಸ್ತಾನದ ಸ್ಥಿತಿ ಏನು ಎಂದು ಅರ್ಥ ಮಾಡಿಕೊಳ್ಳಲು ಸ್ವಲ್ಪವಾದರೂ ಈ ವರದಿ ನೆರವಾಗುತ್ತದೆ.

Taliban Rule In Afghanistan: ಮೊಬೈಲ್, ಇಂಟರ್​ನೆಟ್, ಬಂದೂಕು, ಬದುಕು; ತಾಲಿಬಾನ್ 2.0 ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ
ಖಜಾನೆ ಬರಿದಾದ ದೇಶವೊಂದನ್ನು ಇಟ್ಟುಕೊಂಡು ಏನು ಆಡಳಿತ ಮಾಡುವುದಕ್ಕೆ ಸಾಧ್ಯ? ಸರಿ, ನೆರೆಹೊರೆಯವರ ಸಹಕಾರ ಇದೆಯಾ? ಆಡಳಿತಗಾರರ ಸಲುವಾಗಿ ಮನಸಾರೆ ತ್ಯಾಗ ಮಾಡುವುದಕ್ಕಾದರೂ ಅಲ್ಲಿನ ಪ್ರಜೆಗಳು ಸಿದ್ಧರಿದ್ದಾರಾ? ಈ ಪೈಕಿ ಯಾವುದಕ್ಕೂ ಸಕಾರಾತ್ಮಕ ಉತ್ತರ ಸಿಗಲ್ಲ. ಈಗ ಹೇಳಲು ಹೊರಟಿರುವುದು ಆರ್ಥಿಕ ಪತನದ ಅಂಚಿನಲ್ಲಿ ಭರವಸೆ ಕೂಡ ದಿವಾಳಿಯಾದ ಅಫ್ಘಾನಿಸ್ತಾನದ ಬಗ್ಗೆ. 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಸೇನೆಯನ್ನು ಬಿಟ್ಟಿದ್ದ ಅಮೆರಿಕಾ, ಅಲ್ಲಿಂದ ಹೊರಗೆ ಕಾಲಿಡುತ್ತಾ, ತಾಲಿಬಾನ್​ಗಳು ದೇಶದ ಆಡಳಿತದ ಚುಕ್ಕಾಣಿ ಕೈಗೆತ್ತಿಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಏನು ಗೊತ್ತಾ? ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಅಫ್ಘಾನಿಸ್ತಾನವೂ ಒಂದು ಅಂತಾಗಿದೆ. ಇನ್ನು ವಿಶ್ವದ ಇತರ ದೇಶಗಳು ಸಹ ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ಹಾಗೂ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿವೆ.
Follow us
TV9 Web
| Updated By: ಆಯೇಷಾ ಬಾನು

Updated on: Aug 17, 2021 | 7:12 AM

ಅಫ್ಘಾನಿಸ್ತಾನದ (Afghanistan) ರಾಜಧಾನಿಯಾದ ಕಾಬೂಲ್​ನಲ್ಲಿ ತಾಲಿಬಾನ್ (Taliban)​ ಆಳ್ವಿಕೆಯ ಮೊದಲ ದಿನದ ಬಗ್ಗೆ ಅಲ್ ಜಜೀರಾದಲ್ಲಿ ಬಂದ ವರದಿಯ ಕನ್ನಡ ಭಾವಾನುವಾದವನ್ನು ಇಲ್ಲಿ ನೀಡಲಾಗಿದೆ. ಅಂದರೆ ಆಗಸ್ಟ್​ 16, 2021ರಂದು ಕಾಬೂಲ್ ಹೇಗಿತ್ತು, ತಾಲಿಬಾನ್​ಗಳು ಹೇಗಿದ್ದರು, ಆಫ್ಘನ್ನರ ಮನದಾಳದ ಮಾತೇನು ಇತ್ಯಾದಿ ಸಂಗತಿಗಳು ಇಲ್ಲಿವೆ. ​ ಭಾರತದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಿಸುತ್ತಿದ್ದರೆ, ಅಫ್ಘಾನಿಸ್ತಾನದಲ್ಲಿ ಜನರು ಮನೆಗಳೊಳಗೆ ಅಡಗಿ ಕುಳಿತಿದ್ದರು. ಏಕೆಂದರೆ ಅಫ್ಘಾನಿಸ್ತಾನದಲ್ಲಿ ಇನ್ನು ಪ್ರಜಾಪ್ರಭುತ್ವ ಇಲ್ಲ. ಷರಿಯಾ (ಇಸ್ಲಾಂನ ಕಾನೂನು) ಪಾಲಿಸದಿದ್ದರೆ ಕುತ್ತಿಗೆ ಮೇಲಿನ ತಲೆಯನ್ನು ಮುಟ್ಟಿ ನೋಡಿಕೊಳ್ಳಬೇಕಾದ ಪರಿಸ್ಥಿತಿ. ಇನ್ನು ಮುಂದೆ ತಾಲಿಬಾನಿಗಳದೇ ಆಧಿಪತ್ಯ ಇತ್ಯಾದಿ ಆತಂಕ ಆಫ್ಘನ್ನರಲ್ಲಿದೆ. ತಾಲಿಬಾನ್ ಪಾಲಿಗೆ ಇದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ. ಆಗಸ್ಟ್ 16ನೇ ತಾರೀಕಿನ ಸೋಮವಾರ ತಾಲಿಬಾನ್ ಆಡಳಿತದ ಮೊದಲ ದಿನ. ರಾಜಧಾನಿ ಕಾಬೂಲ್​ನಲ್ಲಿ ಏನು ಪರಿಸ್ಥಿತಿ ಇತ್ತು ಗೊತ್ತಾ? ಅರವತ್ತು ಲಕ್ಷ ಜನಸಂಖ್ಯೆ ಇರುವ ಕಡೆ ಹುಡುಕಿದರೂ ಒಬ್ಬ ಪೊಲೀಸ್ ಕಾಣಲು ಸಿಗುತ್ತಿರಲಿಲ್ಲ. ಇನ್ನು ಸಂಚಾರ ನಿಯಂತ್ರಣ ಅನ್ನೋದು ಎಲ್ಲಿಯ ಮಾತು! ವ್ಯಾಪಾರ-ವ್ಯವಹಾರಗಳು ಚದುರಿ ಹೋಗಿದ್ದವು.

ಬರೀ 48 ಗಂಟೆಗಳ ಹಿಂದೆ ಕಾರುಗಳಿಂದ ತುಂಬಿಹೋಗಿದ್ದ ರಸ್ತೆಗಳು ಖಾಲಿ ಖಾಲಿ, ನೂರಾರು ಜನರು ಬ್ಯಾಂಕ್​ಗಳ ಆಚೆಗೆ ಸಾಲುಗಟ್ಟಿ ನಿಲ್ಲುತ್ತಿದ್ದ, ವೀಸಾ ಪ್ರಕ್ರಿಯೆಗಳಿಗಾಗಿ ಕಚೇರಿಗಳಿಗೆ ಎಡತಾಕುತ್ತಿದ್ದ ಮತ್ತು ಟ್ರಾವೆಲ್ ಏಜೆನ್ಸಿಗಳ ಎದುರು ನಿಂತಿರುತ್ತಿದ್ದ ಯಾವ ಜನರೂ ಇರಲಿಲ್ಲ. ವಿಶ್ವದಾದ್ಯಂತ ಸಹಾಯ ಹರಿದುಬಂದು ಕಳೆದು 20 ವರ್ಷಗಳಿಂದ ಕಟ್ಟುತ್ತಾ ಬಂದಿದ್ದ ದೇಶ ಅಫ್ಘಾನಿಸ್ತಾನದಲ್ಲಿ ಈಗ ಬಾಂಬ್​ ಪತ್ತೆ ಮಾಡುವ ದೊಡ್ಡದೊಡ್ಡ ಸ್ಕ್ಯಾನರ್​ಗಳೇನೋ ಇವೆ, ಆದರೆ ಅವುಗಳನ್ನು ನಿರ್ವಹಿಸುವುದಕ್ಕೆ ಜನರಿಲ್ಲ. ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆ ಕಿಕ್ಕಿರಿದಿದ್ದು, ಆ ಸಂಚಾರ ದಟ್ಟಣೆಯನ್ನು ನಿರ್ವಹಿಸಿ, ನಿರ್ದೇಶನ ನೀಡುವುದಕ್ಕೆ ಸಂಚಾರ ಪೊಲೀಸ್ ಇಲ್ಲ.

taliban

ತಾಲಿಬಾನ್ ಯುವಕರು

ಕಾಬೂಲ್​ ನಗರದಲ್ಲಿ ಈಗ ಕಾಣಸಿಗುತ್ತಿರುವವರು ತಾಲಿಬಾನಿಗಳು ತಾಲಿಬಾನಿಗಳು: ಅಪ್ಘಾನಿಸ್ತಾನದ 34 ಪ್ರಾಂತ್ಯಗಳಿಂದಲೂ ಬಂದಿಳಿದಿದ್ದಾರೆ ತಾಲಿಬಾನ್​ಗಳು. ಕಪ್ಪು-ಬಿಳುಪಿನ ಬಾವುಟ ಪಟಪಟಿಸುತ್ತಾ, ತಮ್ಮ ಕೈಲಿ ಗನ್​ಗಳನ್ನು ಪ್ರದರ್ಶಿಸುತ್ತಾ, ಜೀಪ್​ಗಳಲ್ಲಿ ಅಡ್ಡಾಡುತ್ತಾ ವಿಜಯೋತ್ಸವ ಆಚರಿಸುತ್ತಿದ್ದಾರೆ. ಭಾನುವಾರ ಮಧ್ಯಾಹ್ನದ ತನಕ ಪೊಗದಸ್ತಾದ ಬಂದೋಬಸ್ತ್​ ಇದ್ದ ಅಧ್ಯಕ್ಷರ ಅರಮನೆಯ ಸುತ್ತ ಕೂಡ ಅದೇ ತಾಲಿಬಾನ್​ಗಳ ಹಿಂಡುಹಿಂಡು. 1996ರಲ್ಲಿ ಅಫ್ಘಾನಿಸ್ತಾನದಲ್ಲಿ ಕಾಣಲು ಸಿಗುತ್ತಿದ್ದ ತಾಲಿಬಾನ್​ಗಳು ಬೇರೆ, ಈಗಿನವರು ಬೇರೆ. ಅಂದರೆ ಅವರ ಸಾಂಪ್ರದಾಯಿಕ ದಿರಿಸು, ಗಡ್ಡ, ಚೂಪುಗಣ್ಣುಗಳು, ಕೈಲಿ ಗನ್ ಹೀಗೆ ಅವೆಲ್ಲವೂ ಕಾಣಸಿಗುತ್ತವೆ.

ಸ್ಮಾರ್ಟ್​ಫೋನ್, ಇಂಟರ್​ನೆಟ್​ ಬಳಕೆ ಆದರೆ, 2021ರಲ್ಲಿ ಸ್ಪಷ್ಟವಾದ ಬದಲಾವಣೆಗಳು ಕಾಣಿಸುತ್ತಿವೆ. ಈ ಹಿಂದೆ ತಾಲಿಬಾನ್​ಗಳ ಕೈಲಿ ಇಲ್ಲದ ಸ್ಮಾರ್ಟ್​ಫೋನ್ ಈಗಿನವರ ಕೈಗಳಲ್ಲಿವೆ. ತಮ್ಮ ಬೆನ್ನಿಗೆ ದೇಶದ ನೂರನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಮ್ಯುರಲ್​ ಇರುವಂತೆ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿರುವ ಯುವ ತಾಲಿಬಾನ್​ಗಳು ಕಾಣಸಿಗುತ್ತಾರೆ. ಆ ಪೈಕಿ ಅಹ್ಮದ್​ ಎಂಬಾತ ಈ ವರದಿಗಾರನ ಜತೆ ಮಾತನಾಡಿ, “ನಾವು ಇಲ್ಲಿರುವುದೇ ಜನರ ಸೇವೆಗಾಗಿ” ಎಂದು ಹೇಳಿದ. ಆತ ಪೂರ್ವ ಪ್ರಾಂತ್ಯದ ಮೈದನ್ ವಾರದಕ್​ನವನು. ಆತ ಹೇಳಿದ್ದು ಒಂದೇ ಹೆಸರು. ಅಂದರೆ ಅಹ್ಮದ್ ಅಂತ ಮಾತ್ರ. ಆತನ ಇನ್ನೂ ಆರೇಳು ಸ್ನೇಹಿತರು ಫೋಟೋಗೆ ಪೋಸು ಕೊಡುತ್ತಾ, ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬಾತ ತನ್ನ ಕೈಲಿದ್ದ ಗನ್ ಹೊರತೆಗೆದು, ಒಬ್ಬ ಯುವಕನ ಗ್ಯಾಲಕ್ಸಿ ಫೋನ್​ಗೆ ಪೋಸು ನೀಡುತ್ತಿದ್ದ. “ಖಂಡಿತಾ ಫೋಟೋ ತೆಗೆದುಕೊಳ್ಳಿ, ನಿಮಗೆ ಎಷ್ಟು ಬೇಕೋ ಅಷ್ಟು ಫೋಟೋ ತೆಗೆದುಕೊಳ್ಳಿ,” ಎಂದು ಹೇಳಿದ.

ಇವರು ಅದೇ ತಾಲಿಬಾನ್​ಗಳಾ? ತಮ್ಮ ಐದು ವರ್ಷದ ಆಡಳಿತದಲ್ಲಿ ಫೋಟೋಗ್ರಫಿ ಮತ್ತು ಸಾರ್ವಜನಿಕರಿಗೆ ಇಂಟರ್​ನೆಟ್​ ನಿಷೇಧ ಹೇರಿದವರು ಎಂಬಂತಿದೆ ಈಗಿನ ತಲೆಮಾರಿನವರ ನಡವಳಿಕೆ. ಅಹ್ಮದ್ ಹೇಳಿದಂತೆ, ಆತ ಬಂದಿದ್ದು ಕಾಬೂಲ್​ಗೆ 40 ನಿಮಿಷದ ಹಾದಿಯಾದ ಅರ್ಘನ್​ದೈನಿಂದ. ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಂದಿದ್ದಾನೆ. ಪೊಲೀಸರು- ಭದ್ರತಾ ಪಡೆಗಳು ಓಡಿಹೋದ ಮೇಲೆ ಅಪರಾಧ, ಕೊಳ್ಳೆಯಂಥದ್ದು ನಡೆಯಬಾರದು ಎಂದು ಅಹ್ಮದ್ ಮತ್ತು ಆತನ ಕೆಲವು ಸ್ನೇಹಿತರನ್ನು ತಾಲಿಬಾನ್​ನಿಂದಲೇ ನೇಮಿಸಲಾಗಿತ್ತು. “ಇದು ಹುಚ್ಚುತನ. ಇಲ್ಲಿನ ಬೀದಿಗಳಲ್ಲಿ ಯಾರೂ ಇಲ್ಲ, ಪೊಲೀಸರಿಲ್ಲ, ಏನಿಲ್ಲ,” ಎಂದು ಕಾಬೂಲ್​ನ ಬೆಳಗಿನ ಜಾವದ ಸನ್ನಿವೇಶವನ್ನು ಆತ ತೆರೆದಿಟ್ಟ.

ಆತ ಹೇಳಿಕೊಳ್ಳುವಂತೆ, ಪೊಲೀಸ್​ ಸ್ಟೇಷನ್​ಗೆ ಹೋಗುವ ಹೊತ್ತಿಗೆ ಅಲ್ಲಿ ಬ್ಯಾಗ್​ಗಳ ತುಂಬ ಹೆರಾಯಿನ್ ಕಂಡುಬಂದಿತ್ತು. ಅದು ಪೊಲೀಸರ್​ ಮಾಡುತ್ತಿದ್ದ ವ್ಯವಹಾರ ಎನ್ನುತ್ತಾನೆ ಅಹ್ಮದ್. ಆದರೆ ಆತ ಹೇಳಿದ್ದಲ್ಲಿ ಸತ್ಯ ಎಷ್ಟು ಎಂಬುದು ಗೊತ್ತಿಲ್ಲ. ಕಾಬೂಲ್​ನಂಥ ನಗರಗಳ ನಿವಾಸಿಗಳು ಆರೋಪ ಮಾಡುವಂತೆ, ಈ ಹಿಂದೆ ದೇಶದಲ್ಲಿನ ಡ್ರಗ್ಸ್​ ವ್ಯವಹಾರದಲ್ಲಿ ಪೊಲೀಸರದ್ದೂ ಕೈವಾಡ ಇರುತ್ತಿತ್ತು. ಇನ್ನು ಯಾವುದೇ ಸರ್ಕಾರದಿಂದ ಅಧಿಕೃತ ಘೋಷಣೆ ಆಗದಿದ್ದರೂ ಅಹ್ಮದ್ ಹೇಳುವಂತೆ, ಇಸ್ಲಾಮಿಕ್ ಎಮಿರೇಟ್ ಎಂದು ಅದಾಗಲೇ ಸರ್ಕಾರ ಆಗಿದೆ. ಯಾರೂ ತಾಲಿಬಾನ್​ಗೆ ಹೆದರುವ ಅಗತ್ಯ ಇಲ್ಲ; ಅದು ಸರ್ಕಾರದ ಅಥವಾ ವಿದೇಶೀ ಸೈನ್ಯದ ಜತೆಗೇ ಕೆಲಸ ಮಾಡಿದವರಾದರೂ ಅಂಜಿಕೆ ಪಡುವ ಅಗತ್ಯ ಇಲ್ಲ ಎಂಬುದು ಆತನ ಭರವಸೆ. “ನಾವು ಕ್ಷಮಾದಾನದೊಂದಿಗೆ ಬಂದಿದ್ದೇವೆ, ಪ್ರತಿಯೊಬ್ಬರೂ ತಮ್ಮಷ್ಟಕ್ಕೆ ಬದುಕಬಹುದು,” ಎಂದು ಆತ ಹೇಳಿದ್ದು ನೋಡಿದರೆ ಅಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ಘೋಷಣೆ ಮಾಡಿದ ರಾಜ ಅಮಾನುಲ್ಲಾ ಖಾನ್ ಕಲಾಕೃತಿ ಅಹ್ಮದ್​ನ ಕಡೆಗೆ ದೃಷ್ಟಿ ಹರಿಸಿದಂತಿತ್ತು.

Taliban

ತಾಲಿಬಾನ್​ಗಳು

ಜನಸಮೂಹಕ್ಕೆ ಅನುಕೂಲ ಕಾಬೂಲ್​ನಲ್ಲಿ ತಾಲಿಬಾನ್​ನಿಂದ ಯಾವುದೇ ಶೋಧ ಅಥವಾ ವಶಪಡಿಸಿಕೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಕಳೆದ ವಾರ ಕಂದಹಾರ್ ಮತ್ತು ಹೆರಾತ್​ನಲ್ಲಿ ಹೇಳಿರುವಂತೆ, ಈ ಹಿಂದಿನ ಆಫ್ಘನ್ ಸರ್ಕಾರದ ಜತೆಗೆ ಹಾಗೂ ಅಂತರರಾಷ್ಟ್ರೀಯ ಪಡೆಗಳೊಂದಿಗೆ ಗುರುತಿಸಿಕೊಂಡವರು ಎಂಬ ಶಂಕೆಯ ಮೇಲೆ ತಾಲಿಬಾನ್​ಗಳು ಹಲವರ ಮನೆಗೆ ನುಗ್ಗಿದ್ದಾರೆ. ಅಹ್ಮದ್ ಹೇಳುವುದೇನೆಂದರೆ, “ನಾವು ಮಾಡುವುದಿಷ್ಟೇ, ಯಾರ ಹತ್ತಿರ ಶಸ್ತ್ರಾಸ್ತ್ರಗಳು ಇವೆಯೋ ಅವರು ಸರ್ಕಾರಕ್ಕೆ ಹಿಂತಿರುಗಿಸಿ,” ಅಂತೀವಿ ಎಂದ. ನಿಜವಾದ ಸಮಸ್ಯೆ ಎದುರಾಗುವುದೇ ಇಲ್ಲಿ. ಕಳೆದ ಕೆಲವು ತಿಂಗಳಿಂದ ತಾಲಿಬಾನ್​ಗಳ ಜತೆಗೆ ಬಡಿದಾಡುತ್ತಾ ಬಂದವರಿಗೆ ಆತಂಕ ಎದುರಾಗುವುದೇ ಆಗ. ಇಲ್ಲದಿದ್ದರೆ ತಮ್ಮ ಸುತ್ತಮುತ್ತ ಜನಸಮೂಹಕ್ಕೆ ಅನುಕೂಲ ಅಂತ ಅನಿಸುವ ಸಾಧ್ಯತೆ ಇತ್ತು.

ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರಸಾರ ಮಾಧ್ಯಮವಾದ ಆರ್​ಟಿಎ ಬಗ್ಗೆ ತಾಲಿಬಾನ್​ಗಳಿಗೆ ಭದ್ರತೆ ಆತಂಕ ಇದ್ದಂತಿದೆ. ಆದ್ದರಿಂದ ಫೋಟೋಗ್ರಫಿಗೆ ಅವಕಾಶ ನೀಡುತ್ತಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಜನಪ್ರಿಯವಾಗಿರುವ ಟ್ವಿಟ್ಟರ್ ಬಗ್ಗೆ ಒಲವಿರುವಂತಿದೆ. “ಆಗಾಗ ಟ್ವೀಟ್​ಗಳನ್ನು ಗಮನಿಸುತ್ತಿರು,” ಅಂತ ತಾಲಿಬಾನ್​ ಸದಸ್ಯ ಮತ್ತೊಬ್ಬನಿಗೆ ಹೇಳುತ್ತಿರುವುದು ಕಿವಿಗೆ ಬಿತ್ತು. ಭಾನುವಾರದಂದು ಸೋಷಿಯಲ್ ಮೀಡಿಯಾಗಳಲ್ಲಿ ಕಂಡುಬಂದಂತೆ, ಇನ್ನೂ ಬ್ಯೂಟಿ ಸಲೂನ್​ಗಳ ಕಿಟಕಿಗಳ ಮೇಲೆ ಮಹಿಳೆಯರ ಭಾವಚಿತ್ರಗಳಿದ್ದವು. 1996ರಿಂದ 2001ರ ಮಧ್ಯೆ ತಾಲಿಬಾನ್​ಗಳು ಮೊದಲ ಬಾರಿ ಆಳ್ವಿಕೆ ನಡೆಸಿದಾಗ ಇಂಥದ್ದಕ್ಕೆ ಅವಕಾಶ ಕೊಟ್ಟಿರಲಿಲ್ಲ, ತಮ್ಮ ಸಾಂಪ್ರದಾಯಿಕ ನಂಬಿಕೆಗಳಿಗೆ ವಿರುದ್ಧವಾಗಿರುವ ಈ ಭಾವಚಿತ್ರಗಳನ್ನು ಮುಚ್ಚಿಡುವುದಕ್ಕೂ ಗುಂಪುಗಳು ಪ್ರಯತ್ನ ಪಟ್ಟಿರಲಿಲ್ಲ.

ಜಿಮ್​ಗಳಲ್ಲಿ ತಮ್ಮ ಮಾಂಸಲವಾದ ದೇಹವನ್ನು ತೋರಿಸುತ್ತಿದ್ದ ಗಂಡಸರ ಚಿತ್ರಗಳು ಹಾಗೇ ಇದ್ದವು. ಭಾರತೀಯ ವೈದ್ಯೆಯ ಪೋಸ್ಟರ್​ ಇದ್ದ ಆಸ್ಪತ್ರೆಯಲ್ಲಿ ಅದನ್ನು ಯಾರೂ ತೆಗೆದುಹಾಕಿರಲಿಲ್ಲ. ಇನ್ನು ತಾಲಿಬಾನ್​ಗಳು ಬಹಳ ದ್ವೇಷಿಸುವಂತಹ ಕಂದಹಾರ್​ನ ಪೊಲೀಸ್​ ಮುಖ್ಯಸ್ಥ ಅಬ್ದುಲ್​ ರಜಾಕ್ ಫೋಟೋ ಹಾಗೇ ಇತ್ತು. ಶಿಯಾ ಮುಸ್ಲಿಮರ ರಜಾ ದಿನಗಳ ಅಶೌರದ ಬಾವುಟ, ಬ್ಯಾನರ್ ಯಾವುದೂ ತೆಗೆದಿರಲಿಲ್ಲ. ಹಗಲು ಏರುತ್ತಾ ಹೊಂದಂತೆ ಮಹಿಳೆಯರೂ ಒಳಗೊಂಡಂತೆ ಜನರು ಬೀದಿಗೆ ಇಳಿದರು. ಮಹಿಳೆಯರು ಸಾಮಾನ್ಯವಾಗಿಯೇ ದಿರಿಸು ಧರಿಸಿದ್ದು ಕಂಡುಬಂತು.

Kabul

ಸಾಂದರ್ಭಿಕ ಚಿತ್ರ

ನನಗೇನು ಮಾಡಬೇಕೋ ತಿಳಿಯುತ್ತಿಲ್ಲ ರಾತ್ರೋರಾತ್ರಿ ಹೀಗೆ ಅಫ್ಘಾನಿಸ್ತಾನದ ಅಧಿಕಾರ ಹಿಡಿದ ತಾಲಿಬಾನ್​ಗಳಿಗೆ ಸರ್ಕಾರ ನಡೆಸುವುದು ಸಲೀಸಲ್ಲ ಎಂಬುದು ಹಲವರ ಅಭಿಮತ. ಪರ್ಷಿಯನ್ ಗಲ್ಫ್, ಯುರೋಪ್, ಇರಾನ್​ನಲ್ಲಿ ಇದ್ದು ಬಂದಿದ್ದ ಎಹ್ಸಾನ್​ ಹಬೀಬ್​ ಎಂಬುವರು ತುಂಬ ಪ್ರಶಾಂತವಾಗಿ ಇರುವಂತೆಯೇ ಕಂಡುಬಂದರು. ಕೆನಡಿಯನ್ ರಾಯಭಾರ ಕಚೇರಿಗೆ ಅವರು ಬಂದಿದ್ದರು. ಅಲ್ಲೇ ಇದ್ದ ತಾಲಿಬಾನ್​ವೊಬ್ಬ, ಕಚೇರಿ ಮುಚ್ಚಿದೆ ಎಂಬ ಉತ್ತರ ನೀಡಿದ. “ನನ್ನ ದೇಶ ಎಲ್ಲ ರೀತಿ ಸ್ಥಿರವಾಗಿದೆ ಅಂದುಕೊಂಡು ವರ್ಷದ ಹಿಂದೆ ಬಂದೆ, ಇಲ್ಲೇ ಇರಬಹುದು ಎಂಬ ಆಸೆ ಇಟ್ಟುಕೊಂಡಿದ್ದೆ,” ಎಂದು ಅವರು ಹೇಳುತ್ತಿದ್ದರು. ಅಷ್ಟರಲ್ಲಿ ಕಾವಲು ನಿಂತಿದ್ದ ತಾಲಿಬಾನ್​ ವ್ಯಕ್ತಿ ಜತೆಗೆ ಮಾತನಾಡುವುದಕ್ಕೆ ಇನ್ನಷ್ಟು ಜನ ಬಂದರು. ಎಹ್ಸಾನ್​ ಹಬೀಬ್ ಅವರ ಕುಟುಂಬದ ಬಹುಪಾಲು ಮಂದಿ ಇರಾನ್​ನಲ್ಲಿ ಇದ್ದಾರೆ. ಹೊಸದಾದ ತಾಲಿಬಾನ್ ಆಳ್ವಿಕೆ ಅವರಿಗೆ ಅಷ್ಟಾಗಿ ವಿಶ್ವಾಸ ನೀಡಿಲ್ಲ. “ನನಗೆ ಏನು ಮಾಡಬೇಕು ಅಂತಲೇ ಗೊತ್ತಾಗುತ್ತಿಲ್ಲ, ನಾವೆಲ್ಲ ಚದುರಿಹೋದೆವು. ನನಗನ್ನಿಸುತ್ತೆ ನಾನು ಹೊರಟು ಹೋಗಿದ್ದರೆ ಚೆನ್ನಾಗಿತ್ತು,” ಎಂದರು.

ಜುಮಾ ಗೊಲ್ ಎಂಬ ಟ್ಯಾಕ್ಸಿ ಚಾಲಕ ಮಾತ್ರ ಸೋಮವಾರ ಬೆಳಗ್ಗೆಯಿಂದಲೂ ಬಿಡುವಿಲ್ಲದ ಕೆಲಸ ತನಗೆ ಎಂದ. ಏಕೆಂದರೆ, ಜನರನ್ನು ಬೆಳಗ್ಗೆಯಿಂದ ವಿಮಾನ ನಿಲ್ದಾಣಕ್ಕೆ ಬಿಡುವುದರಲ್ಲಿ ಆತ ಮುಳುಗಿಹೋಗಿದ್ದ. ಹೊಸದೇನೋ ಬಂತು ಎಂದಾಕ್ಷಣ ಹಳೆಯದೆಲ್ಲ ಮರಳಿನಂತೆ ಇತಿಹಾಸದಲ್ಲಿ ಅಳಿಸಿಹೋಗುತ್ತದೆ ಅಂತ ಯಾಕೆ ಅಂದುಕೊಳ್ಳುತ್ತಾರೆ. ಆತಂಕಗೊಳ್ಳುವುದರಲ್ಲಿ ಏನರ್ಥ ಇದೆ, ಜನರು ಯಾಕೆ ತಮ್ಮ ಕೆಲಸ ಮಾಡುವುದಕ್ಕೆ ಆಗಲ್ಲ ಎನ್ನೋದು ಆತನ ಪ್ರಶ್ನೆ. ಜನರು ರಸ್ತೆಗೆ ಇಳಿಯುತ್ತಿಲ್ಲ. ವ್ಯಾಪಾರ- ವ್ಯವಹಾರ ಚದುರಿಹೋಗಿದೆ. ನಗರದಲ್ಲಿ ಜನರೇ ಇಲ್ಲ ಎಂದು ತನ್ನಷ್ಟಕ್ಕೆ ತಾನೇ ಬೇಸರಿಸಿಗೊಳ್ಳುತ್ತಿದ್ದ.

“ಈ ಬದುಕು ನಡೆಯಲೇಬೇಕು, ಯಾರೋ ಬಂದು ನಿಮ್ಮ ವ್ಯಾಪಾರ-ವ್ಯವಹಾರಗಳನ್ನು ನಿಲ್ಲಿಸಿ ಅಂದಿಲ್ಲ” ಎನ್ನುತ್ತಲೇ ಸಾಗಿದ ಆ ಚಾಲಕ ಜುಮಾ ಗೊಲ್.

(ಮಾಹಿತಿ ಕೃಪೆ: ಅಲ್​ಜಜೀರಾ)

ಇದನ್ನೂ ಓದಿ: ತಾಲಿಬಾನ್ ಒಂದು ಸಂಘಟನೆಯಾದರೂ ಅದರ ಬಜೆಟ್ ಅಫ್ಘಾನಿಸ್ತಾನದ ಬಜೆಟ್​ಗಿಂತ ಬಹಳ ದೊಡ್ಡದು!

ಅಫ್ಘಾನಿಸ್ಥಾನದ ಅಭಿವೃದ್ಧಿಗೆ ಭಾರತ ಖರ್ಚು ಮಾಡಿತ್ತು 22 ಸಾವಿರ ಕೋಟಿ ರೂಪಾಯಿ: ಏನಾಗಲಿದೆ ಅದರ ಭವಿಷ್ಯ?

(How Is The Afghanistan Situation Under Taliban Ruling? How Is The New Generation Taliban Fighters And What About Afghan People Future? Here Is The Ground Report)