ಅಫ್ಘಾನಿಸ್ಥಾನದ ಅಭಿವೃದ್ಧಿಗೆ ಭಾರತ ಖರ್ಚು ಮಾಡಿತ್ತು 22 ಸಾವಿರ ಕೋಟಿ ರೂಪಾಯಿ: ಏನಾಗಲಿದೆ ಅದರ ಭವಿಷ್ಯ?
Indian Projects in Afghanistan: ಅಫ್ಗಾನಿಸ್ತಾನದ ಅಭಿವೃದ್ಧಿಗಾಗಿ ಭಾರತ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇದೀಗ ಅಫ್ಗಾನಿಸ್ತಾನವು ತಾಲಿಬಾನ್ ಉಗ್ರರ ಕೈವಶವಾಗುವುದರೊಂದಿಗೆ ಈ ಯೋಜನೆಗಳ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಗಿದೆ.
ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ತಾಲಿಬಾನ್ ಉಗ್ರರ ಕೈವಶವಾಗುವುದರೊಂದಿಗೆ ಭಾರತದ ನೆರೆಯ ದೇಶವೊಂದರಲ್ಲಿ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡಿದೆ. ಅಫ್ಘಾನ್ ಜನರ ಶ್ರೇಯೋಭಿವೃದ್ಧಿಗಾಗಿ ಭಾರತ ಸರ್ಕಾರ ಹತ್ತಾರು ಯೋಜನೆಗಳನ್ನು ಅಲ್ಲಿ ಆರಂಭಿಸಿತ್ತು, ಹಲವು ಯೋಜನೆಗಳು ಪೂರ್ಣಗೊಂಡಿದ್ದವು. ಭಾರತ ಸರ್ಕಾರವು ಅಫ್ಗಾನಿಸ್ತಾನದ ಅಭಿವೃದ್ಧಿಗೆ ವಿನಿಯೋಗಿಸಿದ್ದ ಮೊತ್ತ 3 ಶತಕೋಟಿ ಡಾಲರ್. ಭಾರತದ ಕರೆನ್ಸಿಯಲ್ಲಿ ಲೆಕ್ಕ ಹಾಕುವುದಾದರೆ 22 ಸಾವಿರ ಕೋಟಿ ರೂಪಾಯಿ (₹ 22,26,51,000).
ಪಾಕಿಸ್ತಾನವು ಭಾರತದಲ್ಲಿ ನಡೆಸುತ್ತಿರುವ ಉಗ್ರಗಾಮಿ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿಡುವ ದೃಷ್ಟಿಯಿಂದಲೂ ಭಾರತಕ್ಕೆ ಅಫ್ಗಾನಿಸ್ತಾನದಲ್ಲಿ ಸ್ಥಿರ ಸರ್ಕಾರ ಇರುವುದು ಅತ್ಯಗತ್ಯವಾಗಿತ್ತು. ಅಫ್ಗಾನಿಸ್ತಾನದ ಆಡಳಿತದೊಂದಿಗೆ ಹಲವು ನಾಗರಿಕ ಮತ್ತು ಮಿಲಿಟರಿ ಒಪ್ಪಂದಗಳನ್ನೂ ಮಾಡಿಕೊಂಡಿದ್ದ ಭಾರತ ಅಲ್ಲಿನ ಸೇನೆಗೆ ತರಬೇತಿ ಮತ್ತು ಉಪಕರಣಗಳ ಮೂಲಕ ಬಲ ತುಂಬಲು ಯತ್ನಿಸಿತ್ತು. ಆದರೆ ಇದೀಗ ಕಾಬೂಲ್ ಪತನಗೊಳ್ಳುವುದರಿಂದ ಭಾರತದ ಭದ್ರತಾ ಆತಂಕಗಳು ಇನ್ನಷ್ಟು ಹೆಚ್ಚಾಗಿವೆ. ಮಾತ್ರವಲ್ಲ ಭಾರತದಲ್ಲಿ ಪಾಕ್ ಪ್ರೇರಿತ ಉಗ್ರಗಾಮಿ ಚಟುವಟಿಕೆಗಳು ಚುರುಕಾಗುವ ಲೆಕ್ಕಾಚಾರಗಳೂ ಚಾಲ್ತಿಗೆ ಬಂದಿವೆ.
ಒಂದು ದೇಶ ಮತ್ತೊಂದು ದೇಶದೊಂದಿಗೆ ಸಬಲ ರಾಜತಾಂತ್ರಿಕ ಸಂಬಂಧ ಸ್ಥಾಪಿಸಲು ಹತ್ತಾರು ವರ್ಷಗಳ ಪರಿಶ್ರಮ ಬೇಕು. ಕಳೆದ 20 ವರ್ಷಗಳಿಂದ ಅಫ್ಗನ್ ಆಡಳಿತದೊಂದಿಗೆ ಸುಗಮ ಸಂಬಂಧ ಹೊಂದಲು ಭಾರತ ಪ್ರಯತ್ನಿಸುತ್ತಲೇ ಇತ್ತು. ಆದರೆ ಇದೀಗ ತಾಲಿಬಾನ್ ಮುನ್ನಡೆಯೊಂದಿಗೆ ಭಾರತ-ಅಫ್ಗನ್ ಸಂಬಂಧ ಎಷ್ಟೋ ಶತಮಾನಗಳಷ್ಟು ಹಿಂದಕ್ಕೆ ಹೋದಂತೆ ಆಗಿದೆ.
ಅಫ್ಗಾನಿಸ್ತಾನದಲ್ಲಿ ಭಾರತವು ಹಲವು ರಸ್ತೆಮಾರ್ಗ, ಜಲಾಶಯ, ವಿದ್ಯುತ್ ಸರಬರಾಜು ಮಾರ್ಗ, ವಿದ್ಯುತ್ ಉಪಕೇಂದ್ರ, ಶಾಲೆ ಮತ್ತು ಆಸ್ಪತ್ರೆ ಸೇರಿದಂತೆ ಹತ್ತಾರು ನಿರ್ಮಾಣ ಚಟುವಟಿಕೆಗಳನ್ನು ನಿರ್ವಹಿಸಿತ್ತು. ಅಫ್ಗನ್ ಜನರ ನೆಮ್ಮದಿಯ ಬದುಕಿಗಾಗಿ ನಡೆಸಿದ ಈ ಕಾಮಗಾರಿಗಳಿಗೆ ಭಾರತ ಸರ್ಕಾರ ಹೂಡಿಕೆ ಮಾಡಿದ್ದ ಮೊತ್ತ 3 ಶತಕೋಟಿ ಡಾಲರ್. ಈ ಪೈಕಿ ಬಹಳಷ್ಟು ಯೋಜನೆಗಳನ್ನು ಭಾರತದ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳೇ ನೇರವಾಗಿ ನಿರ್ವಹಿಸಿ ಅಲ್ಲಿನ ಜನರಿಗೆ ಹಸ್ತಾಂತರಿಸಲಾಗಿತ್ತು. ಅಫ್ಗಾನಿಸ್ತಾನದ ಪ್ರಗತಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಲ್ಲಿನ ಉತ್ಪನ್ನಗಳನ್ನು ಭಾರತದಲ್ಲಿ ಮಾರಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಎರಡೂ ದೇಶಗಳ ನಡುವೆ ವರ್ಷಕ್ಕೆ ಸುಮಾರು ನೂರು ಕೋಟಿ ಡಾಲರ್ ಮೊತ್ತದಷ್ಟು ವಹಿವಾಟು ನಡೆಯುತ್ತಿತ್ತು.
ಅಫ್ಗಾನಿಸ್ತಾನದಲ್ಲಿ ಭಾರತ ಆರಂಭಿಸಿದ್ದ ಮುಖ್ಯ ಹೂಡಿಕೆಗಳ ವಿವರಗಳು ಇಂತಿದೆ..
ಸಲ್ಮಾ ಜಲಾಶಯ ಜಲವಿದ್ಯುತ್ ಮತ್ತು ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹರಿ ನದಿಗೆ ಅಡ್ಡಲಾಗಿ ಸಲ್ಮಾ ಜಲಾಶಯವನ್ನು ಭಾರತ ಸರ್ಕಾರ ನಿರ್ಮಿಸಿಕೊಟ್ಟಿದೆ. ಅಫ್ಗಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿರುವ ಈ ಜಲಾಶಯ ಕಾಮಗಾರಿಯನ್ನು ಹಲವು ಅಡೆತಡೆಗಳ ನಡುವೆಯೂ ಪೂರ್ಣಗೊಳಿಸುವಲ್ಲಿ ಭಾರತ ಯಶಸ್ವಿಯಾಗಿತ್ತು. 2016ರಲ್ಲಿ ಲೋಕಾರ್ಪಣೆಗೊಂಡ ಈ ಜಲಾಶಯ ಇದೀಗ ತಾಲಿಬಾನಿಗಳ ವಶಕ್ಕೆ ಬಂದಿದೆ.
ಝರಂಜ್-ಡೆಲಾರಾಮ್ ಹೆದ್ದಾರಿ ಭಾರತದ ಗಡಿ ರಸ್ತೆ ಸಂಘಟನೆ (Border Road Organisation – BRO) ಅಫ್ಗಾನಿಗಳ ಬಳಕೆಗೆಂದು 218 ಕಿಮೀ ಉದ್ದದ ಝರಾಂಜ್-ಡೆಲಾರಾಮ್ ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದೆ. ಈ ರಸ್ತೆಗಾಗಿ ಭಾರತ ಸರ್ಕಾರವು 150 ದಶಲಕ್ಷ ಡಾಲರ್ ವೆಚ್ಚ ಮಾಡಿತ್ತು. ಅಫ್ಗಾನಿಸ್ತಾನದ ಪ್ರಮುಖ ನಗರಗಳಾದ ಕಂದಹಾರ್, ಘಜನಿ, ಕಾಬೂಲ್, ಮಝರ್-ಎ-ಷರೀಫ್ ಮತ್ತು ಹೆರಾತ್ಗಳೊಂದಿಗೆ ಡೆಲಾರಾಮ್-ಝರಾಂಜ್ ಪಟ್ಟಣಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಿದು.
ಈ ಮುಖ್ಯರಸ್ತೆಗೆ ಹತ್ತಿರದ ಗ್ರಾಮ-ಪಟ್ಟಣಗಳನ್ನು ಸಂಪರ್ಕಿಸುವ ಹಲವು ಸಣ್ಣಪುಟ್ಟ ರಸ್ತೆಗಳನ್ನು ಭಾರತ ನಿರ್ಮಿಸಿಕೊಟ್ಟಿದೆ. ಈ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಭಯೋತ್ಪಾದಕರ ದಾಳಿಯಿಂದ 11 ಭಾರತೀಯರು, 129 ಅಫ್ಗನ್ ನಾಗರಿಕರು ಮೃತಪಟ್ಟಿದ್ದರು.
ಮಾನವೀಯ ನೆರವಿನ ದೃಷ್ಟಿಯಿಂದ ಅಫ್ಗಾನಿಸ್ತಾನಕ್ಕೆ ಭಾರತವು ಯಾವುದೇ ವಸ್ತುಗಳನ್ನು ಕಳುಹಿಸಿಕೊಡಲು ಪಾಕಿಸ್ತಾನ ಅವಕಾಶ ಮಾಡಿಕೊಡುತ್ತಿರಲಿಲ್ಲ. ಹೀಗಾಗಿ ಇರಾನ್ ಛಾಬಹಾರ್ ಬಂದರು ಮೂಲಕ ಅಫ್ಗಾನಿಸ್ತಾನವನ್ನು ತಲುಪಲು ಈ ರಸ್ತೆ ಪ್ರಮುಖ ಪಾತ್ರ ನಿರ್ವಹಿಸುತ್ತಿತ್ತು. ಕೊರೊನಾ ಸಂಕಷ್ಟದ ವೇಳೆ ಅಫ್ಗಾನಿಸ್ತಾನಕ್ಕೆ ಭಾರತ ಸರ್ಕಾರ 75,000 ಟನ್ ಗೋಧಿ ನೀಡಿತ್ತು.
ಸಂಸತ್ ಭವನ ಅಫ್ಗಾನಿಸ್ತಾನದ ಸಂಸತ್ ಭವನವನ್ನು 9 ಕೋಟಿ ಡಾಲರ್ ವೆಚ್ಚದಲ್ಲಿ ಭಾರತ ಸರ್ಕಾರ ನಿರ್ಮಿಸಿಕೊಟ್ಟಿತ್ತು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಕಟ್ಟಡ ಉದ್ಘಾಟಿಸಿದ್ದರು. ಅಫ್ಗನ್ ಸಂಸತ್ ಭವನದ ಒಂದು ಘಟಕಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಇರಿಸಲಾಗಿತ್ತು.
ಇದನ್ನೂ ಓದಿ: Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್ ರಿಪೋರ್ಟ್: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲಿಬಾನ್ ಸಂಘರ್ಷ
ಸ್ಟೋರ್ ಪ್ಯಾಲೇಸ್ ಕಾಬೂಲ್ನಲ್ಲಿ ಭಾರತವು ಜೀರ್ಣೋದ್ಧಾರ ಮಾಡಿದ ಸ್ಟೋರ್ ಅರಮನೆಯನ್ನು ಅಫ್ಗನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಜಂಟಿಯಾಗಿ ಉದ್ಘಾಟಿಸಿದ್ದರು. ಅಫ್ಗಾನಿಸ್ತಾನದ ವಿದೇಶಾಂಗ ವ್ಯವಹಾರ ಇಲಾಖೆಯ ಹಲವು ಕಚೇರಿಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಬಘ್ಲಾನ್ ಪ್ರಾಂತ್ಯದ ರಾಜಧಾನಿ ಪುಲ್-ಎ-ಖುಮ್ರಿಯಿಂದ ಕಾಬೂಲ್ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ 220 ಕೆವಿ ತಂತಿಮಾರ್ಗವನ್ನು ಭಾರತ ಸರ್ಕಾರ ಎಳೆದುಕೊಟ್ಟಿತು. ಇದರ ಜೊತೆಗೆ ಹಲವು ಪ್ರಾಂತ್ಯಗಳಲ್ಲಿ ಟೆಲಿಕಮ್ಯುನಿಕೇಷನ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನೂ ಭಾರತದ ಗುತ್ತಿಗೆದಾರರು ಮತ್ತು ಕಾರ್ಮಿಕರು ನಿರ್ವಹಿಸಿದರು.
ಆರೋಗ್ಯ ಕ್ಷೇತ್ರ ಕಾಬೂಲ್ನಲ್ಲಿ 1972ರಷ್ಟು ಹಿಂದೆಯೇ ಭಾರತ ಸರ್ಕಾರವು ಮಕ್ಕಳ ಆಸ್ಪತ್ರೆ ಕಟ್ಟಿಕೊಟ್ಟಿತ್ತು. 1985ರಲ್ಲಿ ಈ ಆಸ್ಪತ್ರೆಗೆ 1985ರಲ್ಲಿ ಇಂದಿರಾಗಾಂಧಿ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಯಿತು. ಅಫ್ಗಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಭಾರತ ಸರ್ಕಾರ ಮತ್ತು ಭಾರತ ಮೂಲದ ಸರ್ಕಾರೇತರ ಸಂಸ್ಥೆಗಳು ಉಚಿತ ವೈದ್ಯಕೀಯ ಕೇಂದ್ರಗಳನ್ನು ನಿರ್ವಹಿಸುತ್ತಿವೆ. ನೆಲಬಾಂಬ್ ಸ್ಫೋಟದಿಂದ ಕಾಲುಕಳೆದುಕೊಂಡವರಿಗೆ ಕೃತಕ ಕಾಲು (ಜೈಪುರ್ ಲಿಂಬ್) ಒದಗಿಸುವ ಅಭಿಯಾನವನ್ನೂ ಭಾರತೀಯರು ನಿರ್ವಹಿಸುತ್ತಿದ್ದರು.
ಸಾರಿಗೆ ಸುಗಮ ನಗರ ಸಂಚಾರಕ್ಕಾಗಿ ಸುಮಾರು 400 ಬಸ್ಗಳು, 200 ಮಿನಿ ಬಸ್ಗಳನ್ನು ಭಾರತ ಸರ್ಕಾರ ಅಫ್ಗಾನಿಸ್ತಾನಕ್ಕೆ ಒದಗಿಸಿತ್ತು. ವಿವಿಧ ನಗರಾಡಳಿತ ಸಂಸ್ಥೆಗಳಿಗೆ 105 ದಿನಬಳಕೆ ವಾಹನಗಳು, ಅಫ್ಗನ್ ಸೇನೆಗೆ 285 ಸಶಸ್ತ್ರ ವಾಹನಗಳು, ಸಾರ್ವಜನಿಕ ಬಳಕೆಗಾಗಿ 10 ಆಂಬುಲೆನ್ಸ್ಗಳನ್ನು ಭಾರತ ಸರ್ಕಾರ ನೀಡಿತ್ತು. ಅಫ್ಗನ್ ಸರ್ಕಾರ ನಿರ್ವಹಿಸುತ್ತಿದ್ದ ವಾಯುಯಾನ ಸಂಸ್ಥೆ ‘ಅರಿಯಾನ’ಕ್ಕೆ ಮೂರು ಪ್ರಯಾಣಿಕರ ವಿಮಾನಗಳನ್ನು ಭಾರತ ನೀಡಿತ್ತು.
ಇತರ ಯೋಜನೆಗಳು ಅಫ್ಗಾನಿಸ್ತಾನದ ಶಿಕ್ಷಣ ಸುಧಾರಣೆಗೂ ಭಾರತ ಶ್ರಮಿಸಿತ್ತು. ಹಲವು ಶಾಲೆಗಳಿಗೆ ಡೆಸ್ಕ್ ಸೇರಿದಂತೆ ಹಲವು ಬೋಧನೋಪಕರಣಗಳನ್ನು ನೀಡಿತ್ತು. ಅಫ್ಗಾನಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆಂದು ಕೌಶಲ ತರಗತಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಅಫ್ಗನ್ ವಿದ್ಯಾರ್ಥಿಗಳು ಭಾರತದಲ್ಲಿ ಕಲಿಯಲು ಅನುಕೂಲವಾಗುವಂತೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಅಫ್ಗನ್ ಆಡಳಿತ ಸುಧಾರಣೆಗೆಂದು ನಾಗರಿಕ ಸೇವಾ ಅಧಿಕಾರಿಗಳಿಗೆ ತರಬೇತಿ, ಅಲ್ಲಿನ ಸೈನಿಕರಿಗೆ ತರಬೇತಿ ನೀಡಲು ವಿಶೇಷ ಯೋಜನೆಗಳನ್ನು ರೂಪಿಸಲಾಗಿತ್ತು. ಇದೆಲ್ಲದರ ಜೊತೆಗೆ ಕಾಬೂಲ್ ನಗರದಲ್ಲಿ ಸುಲಭ್ ಶೌಚಾಲಯ ಸಮುಚ್ಚಯಗಳನ್ನು ಭಾರತ ನಿರ್ಮಿಸಿಕೊಟ್ಟಿತ್ತು.
ಜಾರಿಯಲ್ಲಿರುವ ಯೋಜನೆಗಳು ಕಾಬೂಲ್ ಜಿಲ್ಲೆಯ ಶಾತೂತ್ ಜಲಾಶಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಕಳೆದ ನವೆಂಬರ್ ತಿಂಗಳ ಜಿನೆವಾ ಅಧಿವೇಶನದಲ್ಲಿ ಭಾರತದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಘೋಷಿಸಿದ್ದರು. ಕಾಬೂಲ್ನ ಸುಮಾರು 20 ಲಕ್ಷ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. 80 ದಶಲಕ್ಷ ಡಾಲರ್ ಮೊತ್ತದ ಹೊಸ ಯೋಜನೆಗಳನ್ನು ಅವರು ಘೋಷಿಸಿದ್ದರು.
(Kabul Falls to Taliban What will happens to Indian Investment in Afghanistan)
ಇದನ್ನೂ ಓದಿ: ಕಾಬೂಲ್ ಪತನ: ಮತ್ತೆ ತಾಲಿಬಾನ್ ವಶಕ್ಕೆ ಅಫ್ಗಾನಿಸ್ತಾನ, ಮುಲ್ಲಾ ಅಬ್ದುಲ್ ನೂತನ ಅಧ್ಯಕ್ಷ
ಇದನ್ನೂ ಓದಿ: ಹಲವು ದೇಶಗಳಿಗೆ ಭಾರತದ ನೆರವು: ಚೀನಾ, ಅಮೆರಿಕ ಮತ್ತು ಭಾರತದ ಅಭಿವೃದ್ಧಿ ರಾಜತಾಂತ್ರಿಕತೆಯಲ್ಲಿ ಇದೆ ಸಾಕಷ್ಟು ವ್ಯತ್ಯಾಸ
ತಾಲಿಬಾನ್ ಉಗ್ರರು ಕಾಬೂಲ್ ಕೈವಶ ಮಾಡಿಕೊಂಡ ನಂತರ ಜೈಲಿನಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡಿದರು. ಕೈದಿಗಳು ಜೈಲಿನಿಂದ ತೆರಳುತ್ತಿರುವ ವಿಡಿಯೊ ಇಲ್ಲಿದೆ.
Prisoners leaving Kabul jail after being broken out by Taliban. pic.twitter.com/B84F2UrtEA
— Richard Engel (@RichardEngel) August 15, 2021
Published On - 5:28 pm, Sun, 15 August 21