ಹಲವು ದೇಶಗಳಿಗೆ ಭಾರತದ ನೆರವು: ಚೀನಾ, ಅಮೆರಿಕ ಮತ್ತು ಭಾರತದ ಅಭಿವೃದ್ಧಿ ರಾಜತಾಂತ್ರಿಕತೆಯಲ್ಲಿ ಇದೆ ಸಾಕಷ್ಟು ವ್ಯತ್ಯಾಸ

ಭಾರತವು ಜಾಗತಿಕ ಅಭಿವೃದ್ಧಿಗೆ ತನ್ನದೇ ಆದ ನೀತಿಯ ಮೂಲಕ ಕೊಡುಗೆ ನೀಡಿದೆ. ಆದರೇ, ಚೀನಾ ದೇಶವು ಬಡ, ಮಧ್ಯಮ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸುವ ನೀತಿಯನ್ನು ಆಳವಡಿಸಿಕೊಂಡಿದೆ.

ಹಲವು ದೇಶಗಳಿಗೆ ಭಾರತದ ನೆರವು: ಚೀನಾ, ಅಮೆರಿಕ ಮತ್ತು ಭಾರತದ ಅಭಿವೃದ್ಧಿ ರಾಜತಾಂತ್ರಿಕತೆಯಲ್ಲಿ ಇದೆ ಸಾಕಷ್ಟು ವ್ಯತ್ಯಾಸ
ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 19, 2021 | 8:01 PM

ಭಾರತ ಹಾಗೂ ಚೀನಾ ನೆರೆಹೊರೆಯ ದೇಶಗಳು. ಆದರೆ, ಎರಡು ದೇಶಗಳ ಜಾಗತಿಕ ಅಭಿವೃದ್ಧಿಯ ನೀತಿಯಲ್ಲಿ ಆಜಗಜಾಂತರವಿದೆ. ಭಾರತವು ಜಾಗತಿಕ ಅಭಿವೃದ್ಧಿಗೆ ತನ್ನದೇ ಆದ ನೀತಿಯ ಮೂಲಕ ಕೊಡುಗೆ ನೀಡಿದೆ. ಆದರೇ, ಚೀನಾ ದೇಶವು ಬಡ, ಮಧ್ಯಮ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸುವ ನೀತಿಯನ್ನು ಆಳವಡಿಸಿಕೊಂಡಿದೆ. ಹಣದ ಮೂಲಕ ಸಾಮ್ರಾಜ್ಯಶಾಹಿ ನೀತಿಯನ್ನು ಚೀನಾ ಹೇಗೆ ಅನುಸರಿಸುತ್ತಿದೆ, ಭಾರತದ ಜಾಗತಿಕ ಅಭಿವೃದ್ಧಿ ನೀತಿಗೂ ಚೀನಾದ ಜಾಗತಿಕ ಅಭಿವೃದ್ದಿ ನೀತಿಗೂ ಇರುವ ವ್ಯತ್ಯಾಸಗಳೇನು ಎಂಬ ಬಗ್ಗೆ ಈ ವರದಿಯಲ್ಲಿ ವಿವರಗಳಿವೆ.

ಭಾರತ ಹಾಗೂ ಚೀನಾ ಏಷ್ಯಾದ ಪ್ರಬಲ ರಾಷ್ಟ್ರಗಳು. ಏಷ್ಯಾ ಉಪಖಂಡದಲ್ಲಿನ ಹಲವು ದೇಶಗಳಿಗೆ ಚೀನಾ ಆರ್ಥಿಕ ನೆರವು ನೀಡುವ ಮೂಲಕ ಆ ರಾಷ್ಟ್ರಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವ ಷಡ್ಯಂತ್ರ ನಡೆಸುತ್ತಿದೆ. ಪಾಕಿಸ್ತಾನಕ್ಕೆ ಭಾರಿ ಸಾಲ ನೀಡಿ, ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲೂ ಅಭಿವೃದ್ದಿ ಯೋಜನೆಗಳಿಗೆ ನೆರವು ನೀಡುವ ನೆಪದಲ್ಲಿ ಆರ್ಥಿಕ ಹೂಡಿಕೆ ಮಾಡಿ ಆ ರಾಷ್ಟ್ರಗಳ ಮೇಲೆ ಪರೋಕ್ಷ ನಿಯಂತ್ರಣ ಸಾಧಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತವು ತನ್ನದೇ ಆದ ಜಾಗತಿಕ ಅಭಿವೃದ್ಧಿ ಮಾದರಿಯನ್ನು ಅನುಸರಿಸುತ್ತಿದೆ.

ಇಷ್ಟು ವರ್ಷ ಅಭಿವೃದ್ಧಿಶೀಲ ದೇಶ ಎನಿಸಿದ್ದ ಭಾರತವು ಇದೀಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಹೆಜ್ಜೆ ಇಟ್ಟಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಬೇಕು ಎನ್ನುವುದು ಭಾರತದ ಹೆಬ್ಬಯಕೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಅಂದರೆ, 375 ಲಕ್ಷ ಕೋಟಿ ರೂಪಾಯಿ ಆರ್ಥಿಕತೆಯ ರಾಷ್ಟ್ರ. ಭಾರತ ವಿಶ್ವದ ಯಾವುದೇ ರಾಷ್ಟ್ರವನ್ನು ಕೂಡ ಆರ್ಥಿಕತೆಯ ಮೂಲಕ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಕೆಲಸ ಮಾಡುತ್ತಿಲ್ಲ. ವಸುಧೈವ ಕುಟುಂಬಕಂ ತತ್ವದಲ್ಲಿ ನಂಬಿಕೆ ಇಟ್ಟಿರುವ ರಾಷ್ಟ್ರ.

ವ್ಯಕ್ತಿಗೆ ಮೀನು ನೀಡಿದರೆ, ಒಂದು ದಿನಕ್ಕೆ ಮಾತ್ರ ಆಹಾರ ಸಿಗುತ್ತೆ. ಅದೇ ವ್ಯಕ್ತಿಗೆ ಮೀನು ಹಿಡಿಯಲು ಕಲಿಸಿದರೇ, ಜೀವನ ಪೂರ್ತಿ ಆಹಾರ ಸಿಗುತ್ತೆ ಎಂಬ ಮಾತೊಂದು ಇದೆ. ಭಾರತ ಈಗ ಈ ತತ್ವವನ್ನ ಆಳವಡಿಸಿಕೊಂಡಿದೆ. ಆದರೆ, ಚೀನಾ ದೇಶ ಬೇರೆಬೇರೆ ಸಣ್ಣ ರಾಷ್ಟ್ರಗಳಿಗೆ ಮೀನು ಕೊಡುತ್ತೆ, ಆದರೆ, ಆ ರಾಷ್ಟ್ರಗಳನ್ನು ಸಾಲದ ಬಲೆಯಲ್ಲಿ ಸಿಲುಕುವಂತೆ ಮಾಡುತ್ತೆ. ಇದಕ್ಕೆ ವಿರುದ್ಧವಾಗಿ ಭಾರತವು ಸಣ್ಣ, ದುರ್ಬಲ, ಬಡ ರಾಷ್ಟ್ರಗಳಿಗೆ ಮೀನು ಹಿಡಿಯುವುದನ್ನು ಕಲಿಸಿಕೊಡುತ್ತಿದೆ. ಆ ರಾಷ್ಟ್ರಗಳು ಆರ್ಥಿಕವಾಗಿ ಸ್ವಾವಲಂಬನೆಯಾಗುವಂತೆ ಮಾಡುತ್ತೆ. ಚೀನಾ ದೇಶ ಅಭಿವೃದ್ದಿಯ ಭರವಸೆ ನೀಡುತ್ತೆ. ಆದರೆ, ಸಾಲದ ಸುಳಿಯಲ್ಲಿ ರಾಷ್ಟ್ರಗಳು ಸಿಲುಕುವಂತೆ ಮಾಡುತ್ತಿದೆ. ಆದರೆ, ಭಾರತ ತನ್ನದೇ ಆದ ಜಾಗತಿಕ ಅಭಿವೃದ್ದಿ ಮಾದರಿಯೊಂದನ್ನು ಆಳವಡಿಸಿಕೊಂಡಿದೆ. ಇದು ಚೀನಾದ ಜಾಗತಿಕ ನಿಯಂತ್ರಣದ ಅಭಿವೃದ್ದಿ ಮಾದರಿಗೆ ವಿರುದ್ಧವಾಗಿದೆ. ಭಾರತದ ಜಾಗತಿಕ ಅಭಿವೃದ್ದಿ ಮಾದರಿಯನ್ನು ಈಗ ನಾವು ನಿಮ್ಮ ಮುಂದೆ ಇಡುತ್ತೇವೆ.

ಭಾರತದ ಜಾಗತಿಕ ಅಭಿವೃದ್ಧಿ ಮಾದರಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಈಗ ವಿಶ್ವಗುರುವಾಗಲು ಹೊರಟಿದೆ. ಆದರೆ, ಚೀನಾದಂತೆ ವಿಶ್ವದ ಯಾವುದೇ ದೇಶಗಳಿಗೂ ಭಾರತ ಬೆದರಿಕೆಯೊಡ್ಡಿಲ್ಲ. ವಿಶ್ವದ ಯಾವುದೇ ದೇಶವು ತನ್ನ ಸಾರ್ವಭೌಮತ್ವದಲ್ಲಿ ರಾಜೀ ಮಾಡಿಕೊಳ್ಳುವಂತೆ ಮಾಡಿಲ್ಲ. ಭಾರತ ವಿಶ್ವದ ಯಾವುದೇ ದೇಶವನ್ನು ತನ್ನ ನೇರ, ಪರೋಕ್ಷ ನಿಯಂತ್ರಣದಲ್ಲಿಟ್ಟುಕೊಳ್ಳುವ ಕೆಲಸ ಮಾಡಿಲ್ಲ. ಇದೇ ಭಾರತ ಹಾಗೂ ಚೀನಾದ ಜಾಗತಿಕ ಅಭಿವೃದ್ದಿ ಮಾದರಿಗೆ ಇರುವ ವ್ಯತ್ಯಾಸ. ಭಾರತ ವಿಶ್ವದಲ್ಲಿ ತನ್ನ ಜಾಗತಿಕ ಅಭಿವೃದ್ಧಿ ಮಾದರಿ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರವನ್ನು ಮಾಡಿಲ್ಲ.

ಸದ್ದಿಲ್ಲದೆ, ತನ್ನದೇ ಆದ ಜಾಗತಿಕ ಅಭಿವೃದ್ದಿ ಮಾದರಿಯನ್ನು ಆಳವಡಿಸಿಕೊಂಡು ಜಾರಿಗೆ ತರುತ್ತಿದೆ. ಭಾರತದ್ದು ಅಭಿವೃದ್ಧಿಯ ರಾಜತಾಂತ್ರಿಕತೆ. ವಿಶ್ವದ 64 ದೇಶಗಳಲ್ಲಿ 500ಕ್ಕೂ ಹೆಚ್ಚು ಅಭಿವೃದ್ದಿ ಯೋಜನೆಗಳಿಗೆ ಭಾರತ ಹಣಕಾಸಿನ ನೆರವು ನೀಡಿದೆ. ಇವುಗಳ ಪೈಕಿ ಈಗಾಗಲೇ 200ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳ ಕಾರ್ಯ ಪ್ರಗತಿಯಲ್ಲಿದೆ. ಜಾಗತಿಕ ಅಭಿವೃದ್ಧಿಯ ಪ್ರಯತ್ನಗಳಿಗೆ ಈ ಮೂಲಕ ಅಭಿವೃದ್ಧಿಶೀಲ ದೇಶ ಎನಿಸಿದ ಭಾರತವೂ ಕೈ ಜೋಡಿಸಿದೆ. ಇದೊಂದು ಯಶಸ್ಸಿನ ಕಥೆ. ಭಾರತವು 60 ಶತಕೋಟಿ ಡಾಲರ್ ಮೊತ್ತವನ್ನು 64 ದೇಶಗಳ ಅಭಿವೃದ್ದಿ ಯೋಜನೆಗಳಿಗೆ ಸಾಲವಾಗಿ ನೀಡಿದೆ.

ಈ ಹಣದಿಂದ 300 ಅಭಿವೃದ್ದಿ ಯೋಜನೆಗಳು ಈಗಾಗಲೇ ಪೂರ್ಣವಾಗಿವೆ. ಇನ್ನೂ 240 ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಭಾರತವು ಸಾಲವಾಗಿ ನೀಡಿರುವ ಹಣವನ್ನು ಸಾರಿಗೆ, ಹೆದ್ದಾರಿ ಅಭಿವೃದ್ದಿ, ಬಂದರು, ವಿದ್ಯುತ್ ಉತ್ಪಾದನೆ, ಕೃಷಿ, ತಯಾರಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಯೋಜನೆಗಳ ಜಾರಿಗೆ ಬಳಸಲಾಗುತ್ತಿದೆ. ನಿಜವಾದ ಅಭಿವೃದ್ಧಿ ಯೋಜನೆಗಳಿಗೆ ಜಾಗತಿಕ ಮಟ್ಟದಲ್ಲಿ ಭಾರತ ಹಣವನ್ನು ನೀಡಿದೆ.

ಭಾರತವು ತನ್ನ ಜಾಗತಿಕ ಅಭಿವೃದ್ಧಿ ಮಾದರಿಯಲ್ಲಿ ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡಿದೆ. ಏಷ್ಯಾದ ದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಹಣ ನೀಡಿದೆ. ಸುಮಾರು 15.90 ಶತಕೋಟಿ ಡಾಲರ್ ಹಣವನ್ನು ಏಷ್ಯಾ ರಾಷ್ಟ್ರಗಳ ಅಭಿವೃದ್ದಿ ಯೋಜನೆಗಳಿಗೆ ವಿನಿಯೋಗಿಸಿದೆ. ಭಾರತದ ನೆರೆಹೊರೆಯ ದೇಶಗಳಾದ ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ, ಬರ್ಮಾ (ಮ್ಯಾನ್ಮಾರ್) ದೇಶಗಳಲ್ಲಿ ಭಾರತವು 98 ಅಭಿವೃದ್ದಿ ಯೋಜನೆಗಳ ಜಾರಿಗೆ ಹಣಕಾಸು ನೆರವು ನೀಡಿದೆ. ಇವುಗಳ ಪೈಕಿ ಈಗಾಗಲೇ 44 ಯೋಜನೆಗಳ ಅನುಷ್ಠಾನ ಪೂರ್ಣಗೊಂಡಿದೆ. ಅಫ್ಗಾನಿಸ್ತಾನದ 34 ಪ್ರಾಂತ್ಯಗಳಲ್ಲಿ 400 ಯೋಜನೆಗಳನ್ನು ಭಾರತ ಜಾರಿಗೊಳಿಸುತ್ತಿದೆ. ಬಾಂಗ್ಲಾದೇಶದಲ್ಲಿ ಭಾರತವು 31 ಯೋಜನೆಗಳಿಗೆ ಹಣ ನೀಡಿದೆ.

ಇವುಗಳ ಪೈಕಿ 13 ಯೋಜನೆಗಳು ಪೂರ್ಣವಾಗಿವೆ. ನೇಪಾಳದಲ್ಲಿ 43 ಹೆದ್ದಾರಿ ರಸ್ತೆ ನಿರ್ಮಾಣ ಯೋಜನೆಗಳಿಗೆ ಭಾರತ ಹಣ ನೀಡಿದೆ. ಇವುಗಳ ಪೈಕಿ 17 ಯೋಜನೆಗಳು ಪೂರ್ಣಗೊಂಡಿವೆ. ನಾಲ್ಕು ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ನೇಪಾಳದಲ್ಲಿ ಭಾರತವು ಹಣಕಾಸು ನೆರವು ನೀಡಿ ಜಾರಿಗೊಳಿಸುತ್ತಿದೆ. ಶ್ರೀಲಂಕಾದಲ್ಲಿ 19 ಪ್ರಾಜೆಕ್ಟ್​ಗಳಿಗೆ ಭಾರತ ಹಣಕಾಸಿನ ನೆರವು ನೀಡಿದೆ. ಇವುಗಳ ಪೈಕಿ 11 ಪ್ರಾಜೆಕ್ಟ್​ಗಳು ಈಗಾಗಲೇ ಪೂರ್ಣಗೊಂಡಿವೆ. ರೈಲು, ರಸ್ತೆ, ಬಂದರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಶ್ರೀಲಂಕಾದ ತಮಿಳರಿಗೆ ಭಾರತ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಮ್ಯಾನ್ಮಾರ್​ನಲ್ಲಿ 4 ಯೋಜನೆಗಳು ಭಾರತದ ಹಣಕಾಸಿನ ನೆರವಿನಲ್ಲಿ ಅನುಷ್ಠಾನಗೊಳ್ಳುತ್ತಿವೆ. ಈ ಪೈಕಿ ಮೂರು ರೈಲ್ವೆ ಯೋಜನೆಗಳು ಪೂರ್ಣಗೊಂಡಿವೆ. ಒಂದು ರಸ್ತೆ ನಿರ್ಮಾಣದ ಯೋಜನೆ ಪ್ರಗತಿಯಲ್ಲಿದೆ.

ಹೀಗೆ ವಿಶ್ವದ 64 ದೇಶಗಳಲ್ಲಿ 500ಕ್ಕೂ ಹೆಚ್ಚು ಯೋಜನೆಗಳ ಹಿಂದಿನ ಶಕ್ತಿ ಭಾರತವೇ ಆಗಿದೆ. ಭಾರತದ ಹಣಕಾಸಿನ ನೆರವು ಪಾರದರ್ಶಕವಾಗಿದೆ. ನೆರೆಹೊರೆಯ ದೇಶಗಳ ಅಗತ್ಯತೆಗಳಿಗೆ ಅನುಗುಣವಾಗಿ ಭಾರತವು ಹಣಕಾಸಿನ ನೆರವು ನೀಡಿದೆ. ಆಫ್ರಿಕಾ ರಾಷ್ಟ್ರಗಳಿಗೆ 2000ದಿಂದ 2021ರವರೆಗೂ 11 ಶತಕೋಟಿ ಡಾಲರ್ ಮೊತ್ತದಷ್ಟು ಆರ್ಥಿಕ ನೆರವನ್ನು ಭಾರತ ನೀಡಿದೆ. ಆಫ್ರಿಕನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಗ್ಯಾಂಬಿಯಾದಲ್ಲಿ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣ, ಸೂಡಾನ್​, ರಾವಂಡಾದಲ್ಲಿ ವಿದ್ಯುತ್ ಉತ್ಪಾದನಾ ಯೋಜನೆ, ಡಿಜಬುಟಿಯಲ್ಲಿ ಸಿಮೆಂಟ್ ಕಾರ್ಖಾನೆ, ತಾಂಜೇನಿಯಾದಲ್ಲಿ 20 ಲಕ್ಷ ಜನರಿಗೆ ಶುದ್ದ ನೀರು ಪೂರೈಸುವ ನೀರು ಶುದ್ದೀಕರಣ ಘಟಕಕ್ಕೆ ಭಾರತ ಹಣಕಾಸಿನ ನೆರವು ನೀಡಿದೆ.

ಭಾರತದ ಈ ಜಾಗತಿಕ ಅಭಿವೃದ್ಧಿ ಮಾದರಿ ಕೇವಲ ನರೇಂದ್ರ ಮೋದಿ ಪ್ರಧಾನಿಯಾದ ಮೇಲಷ್ಟೇ ಆರಂಭವಾಗಿಲ್ಲ. ಭಾರತ ಮೊದಲಿನಿಂದಲೂ ಇದೇ ಜಾಗತಿಕ ಅಭಿವೃದ್ದಿ ಮಾದರಿಯನ್ನು ಆಳವಡಿಸಿಕೊಂಡಿದೆ. ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿದ್ದಾಗಲೂ ಅಫ್ಗಾನಿಸ್ತಾನದ ಅಭಿವೃದ್ದಿಗೆ ಭಾರತ ನೆರವು ನೀಡಿದೆ. ಅಫ್ಗಾನಿಸ್ತಾನದ ಸಂಸತ್ ಭವನವನ್ನು ಭಾರತ ನಿರ್ಮಿಸಿಕೊಟ್ಟಿದೆ. ಮಂಗೋಲಿಯಾ ದೇಶಕ್ಕೂ ಭಾರತ ಹಣಕಾಸಿನ ನೆರವು ನೀಡಿದೆ. ಇವೆಲ್ಲವೂ ಭಾರತದ ಅಭಿವೃದ್ಧಿ ರಾಜತಾಂತ್ರಿಕತೆಯ ಉದಾಹರಣೆಗಳು.

ಸಾಲದ ಸುಳಿಯಲ್ಲಿ ಸಿಲುಕಿಸುವ ಚೀನಾ ಚೀನಾದ ನಡೆ ಬೇರೆಯ ರೀತಿಯಲ್ಲಿದೆ. ಅದು ಬಡ, ಮಧ್ಯಮ ಆದಾಯದ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸುವ ರಾಜತಾಂತ್ರಿಕತೆಯನ್ನು ಅನುಸರಿಸುತ್ತಿದೆ. ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ ಪ್ರಕಾರ, ಚೀನಾ ದೇಶವು 1.5 ಲಕ್ಷ ಕೋಟಿ ಡಾಲರ್ ಮೊತ್ತದಷ್ಟು ಹಣವನ್ನು 150ಕ್ಕೂ ಹೆಚ್ಚು ದೇಶಗಳಿಗೆ ಸಾಲವಾಗಿ ನೀಡಿದೆ. ಅಭಿವೃದ್ದಿ ಹೊಂದುತ್ತಿರುವ 50 ರಾಷ್ಟ್ರಗಳಿಗೆ 2005ರಲ್ಲಿ ಜಿಡಿಪಿಯ ಶೇ 1ರಷ್ಟು ಮೊತ್ತವನ್ನು ಚೀನಾ ಸಾಲವಾಗಿ ನೀಡಿತ್ತು. ಆದರೆ, 2017ರ ಹೊತ್ತಿಗೆ ಈ ರಾಷ್ಟ್ರಗಳ ಜಿಡಿಪಿಯ ಶೇ 15 ರಷ್ಟುನ್ನು ಚೀನಾ ಸಾಲವಾಗಿ ನೀಡಿದೆ. ಕೆಲ ದೇಶಗಳು ತಮ್ಮ ಜಿಡಿಪಿಯ ಶೇ 20 ರಷ್ಟು ಮೊತ್ತವನ್ನು ಚೀನಾದಿಂದ ಸಾಲವಾಗಿ ಪಡೆದಿವೆ. ಈ ಮೂಲಕ ಚೀನಾ ದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಲದ ತಿಮಿಂಗಿಲ ದೇಶವಾಗಿ ಪರಿವರ್ತನೆಯಾಗಿದೆ.

ಮಾಲ್ಡೀವ್ಸ್, ಕಾಂಗೋ, ಡಿಜಿಬುಟಿ, ಕಾಂಬೋಡಿಯಾ, ಕರ್ಗೀಸ್ತಾನ, ನೈಜರ್, ಲಾವೋಸ್, ಜಾಂಬಿಯಾ, ಸಮೋವಾ, ಟೋಂಗಾ, ಮಂಗೋಲಿಯಾ ಸೇರಿದಂತೆ ಅನೇಕ ದೇಶಗಳಿಗೆ ಚೀನಾ ಭಾರೀ ಪ್ರಮಾಣದಲ್ಲಿ ಸಾಲ ನೀಡಿದೆ. ದಿ ಡಿಪ್ಲೋಮ್ಯಾಟ್ ವರದಿಯ ಪ್ರಕಾರ, ಮಧ್ಯ ಏಷ್ಯಾದ ದೇಶಗಳಿಗೆ ಚೀನಾ 19.3 ಲಕ್ಷ ಕೋಟಿ ಡಾಲರ್ ಮೊತ್ತದಷ್ಟು ಹಣವನ್ನು ಸಾಲವಾಗಿ ನೀಡಿದೆ. ದಕ್ಷಿಣ ಏಷ್ಯಾದಲ್ಲಿ ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷಿಯಾ, ಫಿಲಿಫ್ಪೈನ್ಸ್ ದೇಶಗಳಿಗೆ ಸಾಕಷ್ಟು ಸಾಲ ನೀಡಿದೆ.

ಭಾರತದ ನೆರೆಹೊರೆಯ ದೇಶಗಳಿಗೂ ಚೀನಾ ಭಾರೀ ಪ್ರಮಾಣದಲ್ಲಿ ಸಾಲ ನೀಡಿದೆ. ಬಾಂಗ್ಲಾದೇಶಕ್ಕೆ 2020-21ರಲ್ಲಿ 460 ದಶಲಕ್ಷ ಡಾಲರ್ ಹಣವನ್ನು ಸಾಲವಾಗಿ ನೀಡಿದೆ. ಸಾಲವನ್ನು ಮರುಪಾವತಿ ಮಾಡದೇ ಇದ್ದರೆ, ಆಯಾ ದೇಶಗಳು ತಮ್ಮ ಸಂಪತ್ತನ್ನು ಚೀನಾಗೆ ಬಿಟ್ಟುಕೊಡಬೇಕು. ತಮ್ಮ ಸಾರ್ವಭೌಮತ್ವವನ್ನು ಕಳೆದುಕೊಂಡು ಚೀನಾದ ಪರೋಕ್ಷ ನಿಯಂತ್ರಣಕ್ಕೊಳಪಡಬೇಕು. ಚೀನಾ ದೇಶವು ಇಂಧನ, ಮೂಲಸೌಕರ್ಯ, ಗಣಿಗಾರಿಕೆ ಕ್ಷೇತ್ರಗಳಿಗೆ ಸಾಲ ನೀಡಿದೆ. ಚೀನಾದ 8 ಲಕ್ಷ ಕೋಟಿ ಡಾಲರ್ ಮೊತ್ತದ ಒನ್ ಬೆಲ್ಟ್ , ಒನ್ ರೋಡ್ ಯೋಜನೆಯು ಆಧುನಿಕ ಸಾಮ್ರಾಜ್ಯಶಾಹಿ ನೀತಿ ಎನಿಸಿದೆ. ಈ ಒನ್ ಬೆಲ್ಟ್, ಒನ್ ರೋಡ್ ಯೋಜನೆ ಮೂಲಕ ಏಷ್ಯಾ, ಆಫ್ರಿಕಾ, ಯೂರೋಪ್ ಅನ್ನು ಸಂಪರ್ಕಿಸಬೇಕು ಎನ್ನುವುದು ಚೀನಾದ ಪ್ಲಾನ್.

ಚೀನಾ ದೇಶವು ಆರ್ಥಿಕತೆಯನ್ನು ತನ್ನ ಸಾಮ್ರಾಜ್ಯಶಾಹಿ ನೀತಿಯ ವಿಸ್ತರಣೆಗೆ ಬಳಸುತ್ತಿದೆ. ವಿಶ್ವದ ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿ, ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡುತ್ತಿದೆ. 2000ನೇ ಇಸವಿಯಲ್ಲಿ ಶೇ 5.85ರ ಬಡ್ಡಿದರಲ್ಲಿ ಸಾಲ ನೀಡುತ್ತಿತ್ತು. 2019ರಲ್ಲಿ ಚೀನಾ ನೀಡುತ್ತಿರುವ ಸಾಲದ ಬಡ್ಡಿದರ ಶೇ 4.3ಕ್ಕೆ ಕುಸಿದಿದೆ. ಈ ಮೂಲಕ ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಸಾಲ ಪಡೆಯಲು ಉತ್ತೇಜನ ಸಿಕ್ಕಂತೆ ಆಗುತ್ತಿದೆ.

ಚೀನಾ ದೇಶವು ಈಗಾಗಲೇ ಪಾಕಿಸ್ತಾನವನ್ನು ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆ ಮೂಲಕ ತನ್ನ ಪರೋಕ್ಷ ನಿಯಂತ್ರಣದಲ್ಲಿಟ್ಟುಕೊಂಡಿದೆ. ಪಾಕಿಸ್ತಾನವು ಚೀನಾದ 30 ಲಕ್ಷ ಕೋಟಿ ಡಾಲರ್ ಸಾಲದ ಸುಳಿಯಲ್ಲಿ ಸಿಲುಕಿದೆ. ಶ್ರೀಲಂಕಾ ದೇಶವು ಚೀನಾ ದೇಶದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲಾಗದೇ, ತನ್ನ ಹಂಬನ್ ಟೋಟಾ ಬಂದರನ್ನು 99 ವರ್ಷಗಳ ಕಾಲ ಚೀನಾದ ವಶಕ್ಕೆ ಒಪ್ಪಿಸಿದೆ. ಸಾಲವನ್ನೇ ಗಾಳವಾಗಿ ಬಳಸಿ, ವ್ಯೂಹಾತ್ಮಕವಾಗಿ ಪ್ರಮುಖ ಸ್ಥಳದಲ್ಲಿರುವ ಬಂದರನ್ನು ಚೀನಾ ತನ್ನ ವಶಕ್ಕೆ ಪಡೆದುಕೊಂಡಿದೆ.

ಇದು ಭಾರತ, ಜಪಾನ್, ಆಮೆರಿಕಾದ ಚಿಂತೆಗೆ ಕಾರಣವಾಗಿದೆ. ಶ್ರೀಲಂಕಾದ ಮಹೀಂದಾ ರಾಜಪಕ್ಸ ಬಂದರು, ಮಟಲಾ ರಾಜಪಕ್ಸ ವಿಮಾನ ನಿಲ್ದಾಣಕ್ಕೂ ಚೀನಾ ಹಣವನ್ನು ಸಾಲವಾಗಿ ನೀಡಿದೆ. 2021ರ ಏಪ್ರಿಲ್ ಮಾಹಿತಿ ಪ್ರಕಾರ, ಶ್ರೀಲಂಕಾ ದೇಶವು ಚೀನಾದ 5 ಲಕ್ಷ ಕೋಟಿ ಡಾಲರ್ ಸಾಲದ ಸುಳಿಯಲ್ಲಿ ಸಿಲುಕಿದೆ. ಡಿಜಿಬುಟಿಯಲ್ಲಿ ಚೀನಾ ತನ್ನ ಸೇನಾ ನೆಲೆ ನಿರ್ಮಿಸಿದೆ. ಆಫ್ರಿಕಾದ ಸೂಡಾನ್, ಇಥಿಯೋಪಿಯಾ, ಕಾಂಗೋ, ಜಾಂಬಿಯಾ ದೇಶಗಳಿಗೂ ಚೀನಾ ಹಣವನ್ನು ಚೀನಾ ಸಾಲವಾಗಿ ನೀಡಿದೆ.

ಈಗ ಚೀನಾದ ಕಣ್ಣು ಅಫ್ಗಾನಿಸ್ತಾನದ ಮೇಲೆ ಬಿದ್ದಿದೆ. ಅಫ್ಗಾನಿಸ್ತಾನದಿಂದ ತನ್ನ ಸೈನಿಕರನ್ನು ಅಮೆರಿಕ ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ, ಅಫ್ಗಾನಿಸ್ತಾನ ಪ್ರವೇಶಿಸಲು ಚೀನಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಾಕಿಸ್ತಾನದ ಪೆಷಾವರದಿಂದ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್​ವರೆಗೂ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್​ನಲ್ಲಿ ಹೆದ್ದಾರಿ ನಿರ್ಮಿಸಲು ಚೀನಾ ಹೊರಟಿದೆ. ಈ ಬಗ್ಗೆ ಅಫ್ಗನ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಈ ಯೋಜನೆ ಜಾರಿಯಾದರೆ, ಅಫ್ಗಾನಿಸ್ತಾನವು ಚೀನಾದ ವ್ಯಾಪಾರದ ಹಬ್ ಆಗಲಿದೆ. ಜೊತೆಗೆ ಚೀನಾ ಈಗಾಗಲೇ ಅಫ್ಗಾನಿಸ್ತಾನದ ಮೇಲೆ ಸೈಬರ್ ದಾಳಿಗಳನ್ನು ನಡೆಸುತ್ತಿದೆ. ಅಫ್ಗಾನಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿ ವೆಬ್​ಸೈಟ್​ ಮೇಲೆ ಚೀನಿ ಹ್ಯಾಕರ್​ಗಳು ಹಲವು ಬಾರಿ ಸೈಬರ್ ದಾಳಿ ನಡೆಸಿದ್ದಾರೆ. ಅಫ್ಗಾನಿಸ್ತಾನದ ಭದ್ರತೆಗೆ ಸಂಬಂಧಿಸಿದ ಇ-ಮೇಲ್, ವೆಬ್​ಸೈಟ್​ಗಳನ್ನು ಚೀನಾ ಹ್ಯಾಕ್ ಮಾಡಿದೆ.

ವಿಶ್ವದ ಪ್ರಬಲ ದೇಶಗಳು ಇತರ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು, ಕೈಗೊಂಬೆ ಸರ್ಕಾರಗಳನ್ನು ರಚಿಸಲು ಹಲವು ವಿಧದ ಅಸ್ತ್ರಗಳನ್ನು ಬಳಸುತ್ತಿವೆ. ಆಮೆರಿಕ ಪ್ರಜಾಪ್ರಭುತ್ವ ಸ್ಥಾಪನೆಯ ಹೆಸರಿನಲ್ಲಿ ಅಫ್ಗಾನಿಸ್ತಾನ, ಇರಾನ್, ಯೆಮೆನ್ ದೇಶಗಳನ್ನು ಅತಂತ್ರ ದೇಶಗಳನ್ನಾಗಿ ಮಾಡಿದೆ. ಚೀನಾ ಅಭಿವೃದ್ಧಿ ಹೆಸರಿನಲ್ಲಿ ಇತರ ಸಣ್ಣ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಆಮೆರಿಕಾದಂತೆ ಭಾರತ ವಿಶ್ವದ ಯಾವುದೇ ದೇಶಕ್ಕೆ ತನ್ನ ಸೇನೆ ಕಳಿಸಲ್ಲ. ವಿಶ್ವಸಂಸ್ಥೆಯ ಮನವಿ ಮೇರೆಗೆ ಇಂಡಿಯನ್ ಪೀಸ್ ಕೀಪಿಂಗ್ ಪೋರ್ಸ್ (ಐಪಿಕೆಎಫ್) ಅನ್ನು ಕೆಲ ದೇಶಗಳಿಗೆ ಕಳಿಸಿದೆ. ಆರ್ಥಿಕತೆಯ ಮೂಲಕವೂ ಸಾಮ್ರಾಜ್ಯಶಾಹೀ ಧೋರಣೆಯನ್ನು ಅನುಸರಿಸಿಲ್ಲ. ಇದೇ ಭಾರತ ಹಾಗೂ ಚೀನಾ ದೇಶಕ್ಕೆ ಇರುವ ವ್ಯತ್ಯಾಸ.

(India give aid to many countries for their development compare to America and China these are differences)

ಇದನ್ನೂ ಓದಿ: Monkey B Virus: ಚೀನಾದಲ್ಲಿ ಮಂಕಿ ಬಿ ವೈರಸ್​ಗೆ ಮೊದಲ ಸಾವು; ಕೊರೊನಾ ನಡುವೆಯೇ ಮತ್ತೊಂದು ವೈರಾಣು ಪ್ರತ್ಯಕ್ಷ, ನಿಯಂತ್ರಣ ಹೇಗೆ?

ಇದನ್ನೂ ಓದಿ: ಮಾನ್ಸೂನ್ ಅಧಿವೇಶನಕ್ಕೆ ಮೊದಲು ಆಂಟನಿ ಮತ್ತು ಶರದ್ ಪವಾರ್​ರನ್ನು ಭೇಟಿಯಾಗಿ ಭಾರತ-ಚೀನಾ ಗಡಿ ಪರಿಸ್ಥಿತಿಯನ್ನು ವಿವರಿಸಿದ ರಾಜನಾಥ ಸಿಂಗ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್