ಟಿಪ್ಪು ಪರಂಪರೆ ಅಳಿಸಲು ಸಾಧ್ಯವಿಲ್ಲ: ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾವಣೆಗೆ ಅಸಾದುದ್ದೀನ್​ ಒವೈಸಿ ಆಕ್ಷೇಪ

| Updated By: ಆಯೇಷಾ ಬಾನು

Updated on: Oct 09, 2022 | 12:41 PM

ಟಿಪ್ಪು ಎಕ್ಸ್​ಪ್ರೆಸ್ ರೈಲಿ​ಗೆ ಒಡೆಯರ್​​ ಹೆಸರು ಮರುನಾಮಕರಣಕ್ಕೆ ಸಂಬಂಧಿಸಿ ಟ್ವಿಟರ್​​ನಲ್ಲಿ ಬಿಜೆಪಿ ವಿರುದ್ಧ ಅಸಾದುದ್ದೀನ್​ ಒವೈಸಿ ಆಕ್ರೋಶ ಹೊರ ಹಾಕಿದ್ದಾರೆ.

ಟಿಪ್ಪು ಪರಂಪರೆ ಅಳಿಸಲು ಸಾಧ್ಯವಿಲ್ಲ: ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾವಣೆಗೆ ಅಸಾದುದ್ದೀನ್​ ಒವೈಸಿ ಆಕ್ಷೇಪ
ಅಸಾದುದ್ದೀನ್ ಓವೈಸಿ
Follow us on

ಮೈಸೂರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ(Prathap Simha) ಮಾಡಿದ ಮನವಿ ಮೇರೆಗೆ ರಾಜ್ಯದಲ್ಲಿ ಎರಡು ರೈಲುಗಳ ಹೆಸರನ್ನ ಬದಲಾವಣೆ ಮಾಡಲಾಗಿದೆ. ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್​ಪ್ರೆಸ್(Tipu Express) ರೈಲಿಗೆ ಒಡೆಯರ್ ಎಕ್ಸ್​ಪ್ರೆಸ್(Wodeyar Express) ಅಂತಾ ಮರುನಾಮಕರಣ ಮಾಡಲಾಗಿದೆ. ಅಂತೆಯೇ ತಾಳಗುಪ್ಪ ಎಕ್ಸ್​ಪ್ರೆಸ್​ ರೈಲಿಗೆ ಕುವೆಂಪು ಎಕ್ಸ್​ಪ್ರೆಸ್ ಅಂತಾ ಹೆಸರು ಬದಲಾವಣೆ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಆದ್ರೆ ಈಗ ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾಯಿಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ.

ರೈಲಿಗೆ ಒಡೆಯರ್​ ಹೆಸರಿಟ್ಟಿದ್ದನ್ನು ಸ್ವಾಗತಿಸಿದ ಯದುವೀರ್​​

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟಿಪ್ಪು ಎಕ್ಸ್​ಪ್ರೆಸ್ ರೈಲಿ​ಗೆ ಒಡೆಯರ್​​ ಹೆಸರು ಮರುನಾಮಕರಣ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದರು. 10ನೇ ಚಾಮರಾಜ ಒಡೆಯರ್​ ಕಾಲದಿಂದಲೂ ರೈಲ್ವೆ ಅಭಿವೃದ್ಧಿಯಾಗಿದೆ. ಒಡೆಯರ್ ಎಕ್ಸ್​ಪ್ರೆಸ್​ ಎಂದು ಹೆಸರಿಟ್ಟಿದ್ದು ಸಂತಸದ ವಿಷಯ ಎಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯದುವೀರ್​ ಒಡೆಯರ್ ಹೇಳಿದರು.

ಬಿಜೆಪಿ ವಿರುದ್ಧ ಅಸಾದುದ್ದೀನ್​ ಒವೈಸಿ ಆಕ್ರೋಶ

ಟಿಪ್ಪು ಎಕ್ಸ್​ಪ್ರೆಸ್ ರೈಲಿ​ಗೆ ಒಡೆಯರ್​​ ಹೆಸರು ಮರುನಾಮಕರಣಕ್ಕೆ ಸಂಬಂಧಿಸಿ ಟ್ವಿಟರ್​​ನಲ್ಲಿ ಬಿಜೆಪಿ ವಿರುದ್ಧ ಅಸಾದುದ್ದೀನ್​ ಒವೈಸಿ ಆಕ್ರೋಶ ಹೊರ ಹಾಕಿದ್ದಾರೆ. ಬೇರೊಂದು ರೈಲಿಗೆ ಒಡೆಯರ್ ಅವರ​ ಹೆಸರು ಇಡಬಹುದಿತ್ತು. ಟಿಪ್ಪು ಸುಲ್ತಾನ್​ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾನೆ. ಟಿಪ್ಪು ಪರಂಪರೆಯನ್ನ ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಟ್ವಿಟರ್​​ನಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್​ ಒವೈಸಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್​ಪ್ರೆಸ್ ಅಂತ ಮಾಡಿದರೆ ಬಡತನ ದೂರವಾಗಲ್ಲ: ಕುಮಾರಸ್ವಾಮಿ

ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾಯಿಸಿದಕ್ಕೆ ಸಿದ್ದರಾಮಯ್ಯ ಅಸಮಾಧಾನ

ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನ ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾಯಿಸಿದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯವರು ಬರಿ ಧರ್ಮ ರಾಜಕೀಯ ಮಾಡ್ತಾರೆ. ಒಡೆಯರ್ ಹೆಸರು ಇಡಲಿ ಪರ್ವಾಗಿಲ್ಲ ಆದ್ರೆ ಬೇರೆ ರೈಲುಗಳು ಇರ್ಲೇ ಇಲ್ವ ಅಂತಾ ಪ್ರಶ್ನಿಸಿದ್ದಾರೆ. ಇನ್ನು ಟಿಪ್ಪು ಹೆಸರು ಬದಲಾವಣೆ ಗೆ ವಾಟಾಳ್ ನಾಗರಾಜ್ ಕೂಡ ಕಿಡಿ ಕಾರಿದ್ದಾರೆ. ಕೇಂದ್ರ ಸರ್ಕಾರ ಟಿಪ್ಪು ಹೆಸರನ್ನ ಬದಲಾಯಿಸೋ ಸಣ್ಣತನಕ್ಕೆ ಕೈ ಹಾಕಬಾರದಿತ್ತು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮರುನಾಮಕರಣವನ್ನ ಸ್ವಾಗತಿಸಿರೋ ಸಚಿವ ಅಶೋಕ್, ಸಿದ್ದರಾಮಯ್ಯ ವಿರೋಧವನ್ನ ಖಂಡ ತುಂಡವಾಗಿ ಖಂಡಿಸಿದ್ದಾರೆ. ಟಿಪ್ಪು ಅಸಲಿಗೆ ಕನ್ನಡಿಗನೇ ಅಲ್ಲ, ಅವನೊಬ್ಬ ಪರ್ಶಿಯನ್ ಎಂದಿದ್ದಾರೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅವರ ಹೆಸರು ಅಂತ್ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರೋ ಸಚಿವ ಅಶೋಕ್, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಬೇಕಾದ್ರೆ, ಜಿನ್ನಾ, ಘಜ್ನಿ, ಲಾಡೆ‌ನ್ ಹೆಸರಲ್ಲಿ ಟ್ರೈನ್ ಓಡಿಸಲಿ ಎಂದಿದ್ದಾರೆ. ಇದನ್ನೂ ಓದಿ: Wodeyar Express: ಟಿಪ್ಪು ಎಕ್ಸ್​ಪ್ರೆಸ್ ರೈಲು ಹೆಸರು ಬದಲಾವಣೆ ಸರಿ-ತಪ್ಪು

ಇನ್ನೂ ಮೈಸೂರಿನಲ್ಲಿ ಮಾತನಾಡಿರೋ ಮಾಜಿ ಸಿಎಂ ಕುಮಾರಸ್ವಾಮಿ, ಇದು ಕೂಡಾ ಬಿಜೆಪಿಯವರ ವೋಟ್ ಬ್ಯಾಂಕ್ ರಾಜಕಾರಣದ ಒಂದು ಭಾಗ ಎಂದಿದ್ದಾರೆ. ಅಷ್ಟೇ ಅಲ್ಲ, ಹೆಸರು ಬದಲಾದ ಮಾತ್ರಕ್ಕೆ ಜನರ ಜೀವನ ಬದಲಾಗುವುದಿಲ್ಲ ಅಂತಾ ಕುಟುಕಿದ್ದಾರೆ.

ನಾಲ್ವಡಿ ಹೆಸರನ್ನೇ ಇಡಬೇಕಿತ್ತು

ಮಾದರಿ ಮೈಸೂರು ನಿರ್ಮಾಣಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಹತ್ತನೇ ಚಾಮರಾಜ ಒಡೆಯರ್ ಅವರ ಹೆಸರನ್ನು ನಿರ್ದಿಷ್ಟವಾಗಿ ಇಡಬೇಕಿತ್ತು. ಒಡೆಯರ್ ಎಂದು ಹೆಸರಿಟ್ಟರೇ ಹತ್ತಾರು ಮನೆತನಗಳು, ಸಮುದಾಯಗಳಿವೆ. ಮೈಸೂರು ಒಡೆಯರ ಹೆಸರಿನಲ್ಲಿ ಬೇರೊಂದು ರೈಲನ್ನು ಆರಂಭಿಸಬಹುದಿತ್ತು. ಅದರ ಬದಲು ಈಗಿದ್ದ ಹೆಸರನ್ನು ಬದಲಿಸುವುದು ಸರಿಯಲ್ಲ. ಟಿಪ್ಪು ದೇಶದ್ರೋಹಿಯಲ್ಲ, ತನ್ನ ರಾಜ್ಯ ಉಳಿಸಿಕೊಳ್ಳಲು ಹೋರಾಡಿದ. ಮಹಮ್ಮದೀಯರ ಎಲ್ಲ ಹೆಸರುಗಳನ್ನು ಇಲ್ಲವಾಗಿಸಲು ಮುಂದಾದರೆ ತಾಜ್‌ಮಹಲ್, ಕೆಂಪುಕೋಟೆ, ಗೋಲ್‌ಗುಮ್ಮಟ ಯಾವುದು ಉಳಿಯದು. ‘ವೀ ದ ಪೀಪಲ್ ಆಫ್ ಇಂಡಿಯಾ’ ಎಂದು ಸಂವಿಧಾನದಲ್ಲಿದೆ, ‘ವೀ ದ ಹಿಂದೂ ಪೀಪಲ್’ ಎಂದಿಲ್ಲ ಎಂದು ಇತಿಹಾಸತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:27 am, Sun, 9 October 22