Mysuru News: ಸಾವರ್ಕರ್ ರಥಯಾತ್ರೆಗೆ ಯಡಿಯೂರಪ್ಪ ಚಾಲನೆ; ಸ್ವಾತಂತ್ರ್ಯ ಹೋರಾಟಗಾರನ ಸಾಧನೆ ಸ್ಮರಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 23, 2022 | 2:43 PM

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು, ಇಂದಿರಾಗಾಂಧಿಯಿಂದಲೇ ವೀರ ಎಂದು ಕರೆಸಿಕೊಂಡಿದ್ದವರು. ಇಂದು ಅದೇ ಸಾವರ್ಕರ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

Mysuru News: ಸಾವರ್ಕರ್ ರಥಯಾತ್ರೆಗೆ ಯಡಿಯೂರಪ್ಪ ಚಾಲನೆ; ಸ್ವಾತಂತ್ರ್ಯ ಹೋರಾಟಗಾರನ ಸಾಧನೆ ಸ್ಮರಣೆ
ಮೈಸೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿದರು.
Follow us on

ಮೈಸೂರು: ನಗರದಲ್ಲಿ ಮಂಗಳವಾರ ಸಾವರ್ಕರ್ ರಥಯಾತ್ರೆಗೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶಿಷ್ಟ ಸ್ಥಾನ ಇದೆ. ಇಂಥ ಪುಣ್ಯಭೂಮಿಯಲ್ಲಿ ಸಾವರ್ಕರ್ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಇದನ್ನು ನನ್ನ ಸೌಭಾಗ್ಯ ಎಂದೇ ಭಾವಿಸಿದ್ದೇನೆ. ಇದು ದೇಶಪ್ರೇಮದ ಸಂದೇಶ ಸಾರುವ ಯಾತ್ರೆ ಎಂದು ಹೇಳಿದರು.

ನಮ್ಮ ದೇಶವು ಈಗ ಮಹತ್ವದ ಕಾಲಘಟ್ಟದಲ್ಲಿದೆ, ವಿಶ್ವಗುರು ಆಗುವತ್ತ ದಾಪುಗಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಸಾವರ್ಕರ್ ವಿರುದ್ಧ ನಿರಂತರ ಅಪಪ್ರಚಾರ ನಡೆಯುತ್ತಿದೆ. ನಮ್ಮ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು, ಇಂದಿರಾಗಾಂಧಿಯಿಂದಲೇ ವೀರ ಎಂದು ಕರೆಸಿಕೊಂಡಿದ್ದವರು. ಇಂದು ಅದೇ ಸಾವರ್ಕರ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂಬೈನಲ್ಲಿ ಸಾವರ್ಕರ್ ಅಂತಿಮ ಯಾತ್ರೆಯ ವೇಳೆ ಇಡೀ ಮುಂಬೈ ಕಣ್ಣೀರಿನ ವಿದಾಯ ಹೇಳಿತ್ತು. ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿದ, ಪದವಿಗಳನ್ನು ತಿರಸ್ಕರಿಸಿದ ಮೊದಲ ಹೋರಾಟಗಾರ ಅವರು. ಸಾವರ್ಕರ್ ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸಾವರ್ಕರ್ ಅವರ ದಾರಿಯಲ್ಲಿ ಸಾಗುವುದು ದೇಶಭಕ್ತರಾದ ನಮ್ಮ ಕರ್ತವ್ಯ. ದೇಶಕ್ಕಾಗಿ ಅವರು 10 ವರ್ಷ ಅಂಡಮಾನ್​ನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ್ದರು. ಸಾವರ್ಕರ್ ಚಿಂತನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಸವಾಲು ನಮ್ಮೆದುರು ಇದೆ ಎಂದರು.

ದೇಶದೊಳಗಿನ ವಿದ್ರೋಹಿಗಳಿಗೆ ಎಚ್ಚರಿಕೆ ನೀಡುವ ರಥಯಾತ್ರೆ ಇದು. ಹನುಮಂತನು ರಾಕ್ಷಸರನ್ನು ಸದೆಬಡಿದು ವೀರಾಂಜನೇಯನೂ ಆದ. ಅವನ ಸನ್ನಿಧಿಯಲ್ಲಿಯೇ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡೋಣ ಎಂದರು. ಸಾವರ್ಕರ್ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಯಿತು. ಸಚಿವರಾದ ಎಸ್.ಟಿ.ಸೋಮಶೇಖರ್, ನಾರಾಯಣ ಗೌಡ, ಸಂಸದ ಪ್ರತಾಪಸಿಂಹ, ಶಾಸಕರಾದ ನಾಗೇಂದ್ರ, ಎಸ್.ಎ.ರಾಮದಾಸ್ ಪಾಲ್ಗೊಂಡಿದ್ದರು.

ಸಿದ್ದರಾಮಯ್ಯ ನಿರ್ಧಾರಕ್ಕೆ ಸ್ವಾಗತ

ಕಾಂಗ್ರೆಸ್ ಮಡಿಕೇರಿ ಚಲೋ ಕೈಬಿಟ್ಟ (ಮುಂದೂಡಿದ) ಸಿದ್ದರಾಮಯ್ಯ ನಿರ್ಧಾರವನ್ನು ಬಿ.ಎಸ್.ಯಡಿಯೂಪ್ಪ ಸ್ವಾಗತಿಸಿದರು. ಕಾಂಗ್ರೆಸ್ ಈ ನಿಲುವನನ್ನು ನಾನು ಸ್ವಾಗತಿಸುತ್ತೇನೆ. ಶಾಂತಿಯುತ ವಾತಾವರಣ ಇದ್ದಾಗ ಎಷ್ಟು ಜನರನ್ನಾದರೂ ಸೇರಿಸಿ, ಅಲ್ಲಿಗೆ ಹೋಗಿಬರಲಿ. ಆದರೆ ಶಾಂತಿ ಸುವ್ಯವಸ್ಥೆಯ ಸಮಸ್ಯೆಯಿದ್ದಾಗ ಪರಿಸ್ಥಿತಿ ಅರಿತು ಸ್ಪಂದಿಸಬೇಕು. ಕಾಂಗ್ರೆಸ್ ನಾಯಕರ ಈ ನಿರ್ಧಾರ ಸ್ವಾಗತಾರ್ಹ. ಇಂತಹ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಯಾವುದೇ ಕಾರ್ಯಕ್ರಮ ಮಾಡಬಾರದು’ ಎಂದು ಸಲಹೆ ಮಾಡಿದರು.

ರಥಯಾತ್ರೆಯಲ್ಲಿ ಗೊಂದಲ

ಬಿಜೆಪಿಯು ಆಯೋಜಿಸಿದ್ದ ಸಾರ್ವಕರ್ ರಥಯಾತ್ರೆಯಲ್ಲಿ ಕೊಂಚ ಗೊಂದಲ ಉಂಟಾಯಿತು. ಕೆಲವೊಂದು ಸೂಕ್ಷ್ಮ ಏರಿಯಾಗಳಲ್ಲಿ ಬಂದೋಬಸ್ತ್ ಮಾಡಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟ ಪೊಲೀಸರು ಬಿಜೆಪಿ ಮುಖಂಡರ ಜೊತೆಗೆ ಮಾತುಕತೆ ನಡೆಸಿದರು. ಬಳಿಕ ಈ ಹಿಂದೆ ಪೂರ್ವ ನಿಯೋಜಿತ ಮಾರ್ಗದಲ್ಲಿಯೇ ರಥವು ಸಂಚರಿಸಿತು.

Published On - 2:43 pm, Tue, 23 August 22