ಮೈಸೂರು, ಫೆಬ್ರವರಿ 22: ರಾಜಕೀಯಕ್ಕೆ ಬರುವ ವಿಚಾರದಲ್ಲಿ ನನ್ನಲ್ಲಿ ಇನ್ನೂ ಗೊಂದಲಗಳಿವೆ. ಪತ್ನಿ, ಮಕ್ಕಳು, ಕುಟುಂಬ ಸದಸ್ಯರ ಜೊತೆ ಚರ್ಚೆ ಮಾಡಬೇಕಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ (Dr CN Manjunath) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನ ಹಾಗೂ ಮಾಧ್ಯಮದವರು ನನ್ನ ಮೇಲಿನ ಪ್ರೀತಿಯಿಂದ ನನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕಾರಣಕ್ಕೆ ಬರಬೇಕೋ ಬೇಡವೋ ಎನ್ನುವ ಗೊಂದಲವಿದೆ. ಹಾಗಂತ ರಾಜಕೀಯಕ್ಕೆ ಬರಲು ಭಯ ಪಡುತ್ತಿದ್ದೇನೆ ಎಂದು ಅರ್ಥವಲ್ಲ. ರಾಜಕೀಯ ಹೊಸ ಕ್ಷೇತ್ರ, ಹೇಗೋ ಏನೋ ಎಂದು ನೋಡಬೇಕು. ಹಾಗಾಗಿ ಈ ಬಗ್ಗೆ ಸದ್ಯಕ್ಕೆ ನಾನು ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟನೆ ನಿಡಿದ್ದಾರೆ.
ಜಯದೇವದಲ್ಲಿ ಮಾಡಿದ ಒಳ್ಳೆಯ ಕೆಲಸದ ನೀರಿಕ್ಷೆಯಲ್ಲೇ ಈ ಒತ್ತಾಯಗಳು ಕೇಳಿ ಬರುತ್ತಿವೆ. ನನಗೆ ಬೀದಿ ರಾಜಕೀಯ ಇಷ್ಟ ಇಲ್ಲ. ಅಭಿವೃದ್ಧಿಯ ಪಾಲಿಟಿಕ್ಸ್ ಬಗ್ಗೆ ಆಸಕ್ತಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಜಯದೇವ ಮಾಜಿ ನಿರ್ದೇಶಕ ಡಾ ಮಂಜುನಾಥ್ ಕರೆತರಲು ಜೆಡಿಎಸ್ ಕಸರತ್ತು
ಮಂಜುನಾಥ್ ಅವರು ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ಮಂಜುನಾಥ್ ಮನವೊಲಿಕೆಗೆ ಜೆಡಿಎಸ್ ನಾಯಕರು ಮುಂದಾಗಿದ್ದರು. ಜತೆಗೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಸ್ಪರ್ಧಿಸುವಂತೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದವು.
ಮಂಜುನಾಥ್ ಅವರಿಗೆ ಈಗಾಗಲೇ ರಾಜಕೀಯ ಹಿನ್ನೆಲೆ ಇದೆ. ಅವರು ಶ್ರವಣಬೆಳಗೊಳದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಹೋದರ. ಅವರ ಪತ್ನಿ ಅನಸೂಯಾ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹಿರಿಯ ಪುತ್ರಿ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈ ಬಾರಿ ಗೆಲುವು ಕಷ್ಟವಾಗಬಹುದು ಎಂದು ಪಕ್ಷದ ಮೂಲಗಳು ಹೇಳುತ್ತಿದ್ದು, ಕುಟುಂಬದ ಹಿರಿಮೆಗೆ ಮಂಜುನಾಥ್ ಅವರ ಹೆಸರು ಕೇಳಿಬರುತ್ತಿವೆ.
ಇದನ್ನೂ ಓದಿ: ಬಡ ಹೃದ್ರೋಗಿಗಳ ಆಶಾಕಿರಣ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಸೇವಾವಧಿ ನಾಳೆ ಮುಕ್ತಾಯ
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರ ಅಧಿಕಾರವಧಿ ಜನವರಿ 30ರಂದ ಕೊನೆಗೊಂಡಿತ್ತು. ಅವರನ್ನು ಸಂಸ್ಥೆಯಿಂದ ಗೌರವ ಪೂರ್ವಕವಾಗಿ ಬೀಳ್ಕೊಡಲಾಗಿತ್ತು. ಬೀಳ್ಕೊಡುಗೆ ಸಮಾರಂಭದ ಬಳಿಕ ಮಾತನಾಡಿದ್ದ ಅವರು, ಜಯದೇವ ಹೃದ್ರೋಗ ಆಸ್ಪತ್ರೆಯು ಜನರ ಆಸ್ಪತ್ರೆಯಾಗಿದೆ. ಇದನ್ನು ಪಂಚಾತಾರ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಹೊಂದಿದ್ದೆವು. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವವನ್ನು ಬೆಳಸಲಾಗಿದೆ. ಇಷ್ಟು ವರ್ಷದ ಸೇವೆ ಸಂತೋಷ ತಂದಿದೆ. ನಿವೃತ್ತಿ ಬಳಿಕವೂ ವೈದ್ಯಕೀಯ ಸೇವೆ ಮುಂದುವರಿಸುತ್ತೇನೆ. ಸದಾ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:13 pm, Thu, 22 February 24