ಬಡ ಹೃದ್ರೋಗಿಗಳ ಆಶಾಕಿರಣ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಸೇವಾವಧಿ ನಾಳೆ ಮುಕ್ತಾಯ

ಬಡ ಹೃದ್ರೋಗಿಗಳ ಆಶಾಕಿರಣ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಸೇವಾವಧಿ ನಾಳೆ ಮುಕ್ತಾಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2024 | 6:55 PM

ಸರಕಾರಿ ಸ್ವಾಯತ್ತತೆಯ ಆಸ್ಪತ್ರೆಯೊಂದು ಒಂದು ಖಾಸಗಿ ಪಂಚತಾರಾ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ನೆರವು, ಸೌಲಭ್ಯಗಳು, ಶ್ರೀಮಂತರಿಗೆ ಸಿಗುವ ಶ್ರೀಮಂತ ಚಿಕಿತ್ಸೆ ಬಡವರಿಗೆ, ಮಧ್ಯಮ ವರ್ಗದವರಿಗೆ ಸಿಗುವಂತೆ ಮಾಡುವುದು ತನ್ನ ತಪಸ್ಸಾಗಿತ್ತು ಅದು ಈಡೇರಿದೆ, ಹಾಗಾಗಿ ಸಂತೃಪ್ತ ಭಾವದಿಂದ ನಿವೃತ್ತನಾಗುತ್ತಿದ್ದೇನೆ ಎಂದು ಡಾ ಮಂಜುನಾಥ್ ಹೇಳುತ್ತಾರೆ.

ಬೆಂಗಳೂರು: ವಿಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ (Dr CN Manjunath) ಸೇವಾವಧಿ ಕೊನೆಗೊಳ್ಳುತ್ತಿದೆಯೇ ಹೊರತು ಅವರ ವೃತ್ತಿ ಮತ್ತು ಪ್ರವೃತ್ತಿಗೆ ನಿವೃತ್ತಿ ಇಲ್ಲ. ನಮ್ಮ ನಾಡು ಕಂಡ ಮಹಾನ್ ವೈದ್ಯರಲ್ಲಿ ಡಾ ಮಂಜುನಾಥ ಒಬ್ಬರು. ಅವರನ್ನು ವೈದ್ಯ ಅನ್ನೋದಕ್ಕಿಂತ ಒಬ್ಬ ದಾರ್ಶನಿಕ (visionary) ಅನ್ನೋದು ಹೆಚ್ಚು ಸೂಕ್ತ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು (Sri Jayadeva Institute of Cardiovascular Sciences and Research) ಕಟ್ಟಿ ಬೆಳಸಿ ಅವರೇ ಹೇಳುವಂತೆ ಒಬ್ಬ ತಪಸ್ವೀಯಂತೆ 16 ವರ್ಷಗಳ ಕಾಲ ಸೇವೆ ಮಾಡುತ್ತಾ, ಲಕ್ಷಾಂತರ ಹೃದ್ರೋಗಿಗಳಿಗೆ ಹೊಸ ಜನ್ಮ ನೀಡಿದ ಅವರು ನಾಳೆ ಅಂದರೆ ಜನವರಿ 31 ರಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕನ ಸ್ಥಾನದಿಂದ ನಿವೃತ್ತರಾಗುತ್ತಿದ್ದಾರೆ.

ಸರಕಾರಿ ಸ್ವಾಯತ್ತತೆಯ ಆಸ್ಪತ್ರೆಯೊಂದು ಒಂದು ಖಾಸಗಿ ಪಂಚತಾರಾ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ನೆರವು, ಸೌಲಭ್ಯಗಳು, ಶ್ರೀಮಂತರಿಗೆ ಸಿಗುವ ಶ್ರೀಮಂತ ಚಿಕಿತ್ಸೆ ಬಡವರಿಗೆ, ಮಧ್ಯಮ ವರ್ಗದವರಿಗೆ ಸಿಗುವಂತೆ ಮಾಡುವುದು ತನ್ನ ತಪಸ್ಸಾಗಿತ್ತು ಅದು ಈಡೇರಿದೆ, ಹಾಗಾಗಿ ಸಂತೃಪ್ತ ಭಾವದಿಂದ ನಿವೃತ್ತನಾಗುತ್ತಿದ್ದೇನೆ ಎಂದು ಡಾ ಮಂಜುನಾಥ್ ಹೇಳುತ್ತಾರೆ. ಜಯದೇವ ಹೃದ್ರೋಗ ಸಂಸ್ಥೆ ಬೆಳೆಯಲು ನೆರವಾದ ಸರಕಾರ, ಮತ್ತು ದಾನಿಗಳನ್ನು ಡಾ ಮಂಜುನಾಥ್ ಕೃತಜ್ಞತೆಯಿಂದ ನೆನೆಯುತ್ತಾರೆ.

ಹಣವಿಲ್ಲದೆ, ಸೂಕ್ತ ದಾಖಲಾತಿಗಳಿಲ್ಲದೆ ಚಿಕಿತ್ಸೆಗೆ ಬರುತ್ತಿದ್ದ ಹೃದ್ರೋಗಿಗಳು ಗುಣಮುಖರಾಗಿ ಅವರ ಕುಟುಂಬ ಸದಸ್ಯರೊಂದಿಗೆ ನಗುನಗುತ್ತಾ ಮನೆಗೆ ಹೋಗುವ ದೃಶ್ಯ ತನ್ನಲ್ಲಿ ಸಾರ್ಥಕತೆಯ ಭಾವ ಮೂಡಿಸುತ್ತಿತ್ತು ಎಂದು ಡಾ ಮಂಜುನಾಥ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ